Advertisement

ನೂರಿಪ್ಪತ್ತು ವರ್ಷ ಪೂರೈಸಿದ ಶಾಲೆಯಲ್ಲಿ ಈಗ 232 ವಿದ್ಯಾರ್ಥಿಗಳು

01:02 PM Nov 09, 2019 | mahesh |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1898 ಶಾಲೆ ಸ್ಥಾಪನೆ
ಊರಿನ ಹಿರಿಯ ಶಾಲೆ

ಬೈಂದೂರು: ಬೈಂದೂರು ತಾಲೂಕಿನ ಶಿರೂರು ಗ್ರಾಮದ ಸ.ಮಾ.ಹಿ. ಪ್ರಾ. ಶಾಲೆ ನೂರಿಪ್ಪತ್ತು ಪೂರೈಸಿದ ಊರಿನ ಹಿರಿಯ ಶಾಲೆಯಾಗಿದೆ. ಶಿರೂರು ಗ್ರಾಮ ಮದ್ರಾಸು ರಾಜ್ಯದ ಆಳ್ವಿಕೆಗೆ ಸೇರಿದ ಅವಿಭಜಿತ ದ. ಕ. ಜಿಲ್ಲೆಯ ಕುಂದಾಪುರ ತಾಲೂಕಿನ ಕೊಲ್ಲೂರು ಉತ್ತಾರು ಮಾಗಣಿಗೆ ಒಳಪಟ್ಟಿತ್ತು.ಇಲ್ಲಿನ ದಾಸನಾಡಿಯಲ್ಲಿ ಪುರಾತನ ಗ್ರಾಮ ದೇವರಾಗಿ ವೆಂಕಟರಮಣ ದೇವಸ್ಥಾನ ಸ್ಥಾಪನೆಗೊಂಡಿತ್ತು.ಗುಡಿಗೆ ತಾಗಿಕೊಂಡು ಹೆಬ್ಟಾಗಿಲು ನಿರ್ಮಿಸಲಾಗಿತ್ತು. ಈ ಹೆಬ್ಟಾಗಿಲಿನ ಒಳಭಾಗದ ಎಡಬಲದ ಚಾವಡಿಗಳಲ್ಲಿ ಐಗಳ ಮಠದ ಖಾಸಗಿ ಶಾಲೆ ಆರಂಭಗೊಂಡು ಮಕ್ಕಳ ಸಂಖ್ಯೆ ಹೆಚ್ಚಾದಂತೆ 1898ರಲ್ಲಿ ತಾಲೂಕು ಬೋರ್ಡ್‌ ವತಿಯಿಂದ ಪ್ರಾಥಮಿಕ ಶಾಲೆ ಮಂಜೂರಾಗಿದೆ.

1898ರಿಂದ 1915ರ ವರೆಗೆ 780 ವಿದ್ಯಾರ್ಥಿ ದಾಖಲಾಗಿದ್ದರು .10ನೇ ತರಗತಿಯವರೆಗೆ ವಿದ್ಯಾಭ್ಯಾಸ ನೀಡುತ್ತಿದ್ದು ಪ್ರಸ್ತುತ 232 ವಿದ್ಯಾರ್ಥಿಗಳಿದ್ದಾರೆ. ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿರುವ ಅತ್ಯಂತ ಸುಂದರ ಹಾಗೂ ಕ್ರಿಯಾತ್ಮಕ ಚಟುವಟಿಕೆ ಒಳಗೊಂಡಿರುವ ಶಾಲೆಗಳಲ್ಲಿ ಮಾದರಿ ಶಾಲೆ ಕೂಡ ಸೇರಿದೆ.ಇಲ್ಲಿನ ಶಿಕ್ಷಣಾಭಿಮಾನಿಗಳು,ಪಾಲಕರು,ಶಿಕ್ಷಕರು ಹಾಗೂ ಹಳೆ ವಿದ್ಯಾರ್ಥಿಗಳ ಪ್ರಯತ್ನ ಮತ್ತು ಆಸಕ್ತಿಯಿಂದ ಹೊಸ ಹೊಸ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗಿದೆ. ಕೃಷಿ, ಕ್ರೀಡೆ, ರಾಷ್ಟ್ರೀಯ ಹಬ್ಬ, ಪರಿಸರ ಕಾಳಜಿ ಕಾರ್ಯಕ್ರಮ, ನಾಟಕ, ಯಕ್ಷಗಾನ ಸೇರಿದಂತೆ ವಿವಿಧ ಸಂಪನ್ಮೂಲ ವ್ಯಕ್ತಿಗಳ ಸಹಕಾರದಲ್ಲಿ ಮಕ್ಕಳ ಬೌಧಿಕ ಬೆಳವಣಿಗೆಗೆ ಪೂರಕವಾದ ಶಿಕ್ಷಣ ನೀಡುತ್ತಿರುವುದು ಈ ಶಾಲೆಯ ಹೆಗ್ಗಳಿಕೆಯಾಗಿದೆ.

ಮಾದರಿ ಶಾಲೆಗೆ ವಾಹನದ ವ್ಯವಸ್ಥೆ
ಈ ಶಾಲೆಗೆ ಶಿರೂರು ಕರಾವಳಿ ಮೇಲ್ಪಂಕ್ತಿಯವರೆಗಿನ ವಿದ್ಯಾರ್ಥಿಗಳು ಬರುವುದರಿಂದ ಶಿಕ್ಷಕರ ಮುತುವರ್ಜಿ ಹಾಗೂ ಶಿಕ್ಷಣಾಭಿಮಾನಿಗಳ ಪ್ರೋತ್ಸಾಹದಿಂದ 20 ಲಕ್ಷ ರೂ.ವೆಚ್ಚದ ಶಾಲಾ ಬಸ್‌ ಯೋಜನೆ ರೂಪಿಸಲಾಗಿದೆ. ಪ್ರಸ್ತುತ ಎರಡು ವರ್ಷದಿಂದ ಬಾಡಿಗೆ ವಾಹನ ನಿಗದಿಪಡಿಸಿ ವಿದ್ಯಾರ್ಥಿಗಳನ್ನು ಕರೆತರಲಾಗುತ್ತಿದೆ. ನಿರೀಕ್ಷಿತ ಧನ ಸಂಗ್ರಹವಾದ ಬಳಿಕ ಶಾಲಾ ಸ್ವಂತ ವಾಹನ ಖರೀದಿಸುವ ಯೋಜನೆಯಿದೆ.

Advertisement

ಇಲ್ಲಿ ಸುವರ್ಣ ಜಲ ಯೋಜನೆ , ಪಾಳುಬಿದ್ದ ನೀರು ಸಂಗ್ರಹದ ತೊಟ್ಟಿಗೆ ಕಲಿಕಾ ಸಾಮಗ್ರಿ ತುಂಬಿದ ವಾಹನದ ರೂಪು ನೀಡಲಾಗಿದೆ. ಮಾದರಿ ಎನ್ನುವ ಪತ್ರಿಕೆ ಮೂಲಕ ಪ್ರತಿ ತಿಂಗಳು ವಿದ್ಯಾರ್ಥಿಗಳ ಕಥೆ, ಕವನ, ಶಾಲಾ ವಿಶೇಷತೆಗಳನ್ನು ಮುದ್ರಿಸಿ ಹೊರತರಲಾಗುತ್ತದೆ.

ಅದ್ದೂರಿ ಶತಮಾನೋತ್ಸವ ಆಚರಣೆ
ಶಾಲೆಗೆ ನೂರಿಪ್ಪತ್ತು ವರ್ಷ ಸಂದಿರುವ ಪ್ರಯುಕ್ತ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಮುಂದಾಳತ್ವದಲ್ಲಿ ಅದ್ದೂರಿ ಶತಮಾನೋತ್ಸವ ಆಚರಿಸಲಾಯಿತು.ದಾನಿಗಳ ನೆರವಿನಿಂದ ರಂಗ ಮಂಟಪ,ಎರಡು ತರಗತಿ ಕೋಣೆ ಹಾಗೂ ಆಟದ ಮೈದಾನವನ್ನು ಶತಮಾನೋತ್ಸವದ ನೆನಪಿಗಾಗಿ ಕೊಡುಗೆ ನೀಡಲಾಗಿದೆ. ವಲಯ, ತಾಲೂಕು ಮತ್ತು ಜಿಲ್ಲಾಮಟ್ಟದ ಅನೇಕ ಕಾರ್ಯಕ್ರಮಗಳ ಆತಿಥ್ಯ ವಹಿಸಿದ ಹೆಗ್ಗಳಿಕೆ ಈ ಶಾಲೆಯದ್ದಾಗಿದೆ.ಊರಿನ ಕೇಂದ್ರ ಭಾಗದಲ್ಲಿರುವ ಈ ಶಾಲೆಯಲ್ಲಿ ಓದಿದ ನೂರಾರು ವಿದ್ಯಾರ್ಥಿಗಳು ವಿವಿಧ ಸಂಸ್ಥೆಗಳ ಉನ್ನತ ಹುದ್ದೆಗಳಲ್ಲಿದ್ದಾರೆ.

ಉತ್ತಮ ಶಿಕ್ಷಕರು, ಹಳೆ ವಿದ್ಯಾರ್ಥಿ ಸಂಘ, ಶಾಲಾಭಿವೃದ್ದಿ ಸಮಿತಿ, ಎಸ್‌.ಡಿ.ಸಿ ಸಮಿತಿ ಮತ್ತು ಪಾಲಕರು ಎಲ್ಲ ಕಾರ್ಯಕ್ರಮಗಳಿಗೂ ಪ್ರೋತ್ಸಾಹ ನೀಡಿರುವುದರಿಂದ ಶಾಲೆಯ ಗುಣಮಟ್ಟ ಹೆಚ್ಚಿಸಲು ಸಾಧ್ಯವಾಗಿದೆ. ಶಾಲಾ ವಾಹನ ಸೇರಿದಂತೆ ಹಲವು ಕನಸುಗಳನ್ನು ಸಾಕಾರಗೊಳಿಸಬೇಕಾದರೆ ಇಲಾಖೆ, ಶಿಕ್ಷಣಾಭಿಮಾನಿಗಳ ಪ್ರೋತ್ಸಾಹ ಆವಶ್ಯಕತೆಯಿದೆ.
– ಶಂಕರ ಶಿರೂರು, ಮುಖ್ಯೋಪಾದ್ಯಾಯರು

ಖಾಸಗಿ ಶಾಲೆಗಳ ಪೈಪೋಟಿಯ ನಡುವೆ ಕನ್ನಡ ಮಾಧ್ಯಮ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಆಕರ್ಷಿಸಬೇಕಾದರೆ ಗುಣಮಟ್ಟದ ಶಿಕ್ಷಣ ಮತ್ತು ಶೈಕ್ಷಣಿಕ ಸೇವೆ ನೀಡಬೇಕಾಗುತ್ತದೆ. ತಾಲೂಕಿನ ಅತ್ಯುತ್ತಮ ಶಾಲೆಗಳಲ್ಲಿ ನಮ್ಮ ಶಿರೂರು ಮಾದರಿ ಶಾಲೆ ಕೂಡ ಒಂದಾಗಿದೆ ಎನ್ನುವುದು ನಮ್ಮ ಹೆಮ್ಮೆಯಾಗಿದೆ.
-ರವೀಂದ್ರ ಶೆಟ್ಟಿ ಹೊಸ್ಮನೆ, ಅಧ್ಯಕ್ಷರು ಹಳೆ ವಿದ್ಯಾರ್ಥಿಗಳ ಸಂಘ

-  ಅರುಣಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next