Advertisement

ಶಿರೂರಿನ ಕೃಷಿ ಸಾಧಕ ಗೋವಿಂದ ದುರ್ಗಯ್ಯ ಮೇಸ್ತ

10:21 AM Dec 23, 2019 | mahesh |

ಹೆಸರು: ಗೋವಿಂದ ದುರ್ಗಯ್ಯ ಮೇಸ್ತ
ಏನೇನು ಕೃಷಿ: ತೆಂಗು, ಅಡಿಕೆ, ಮಿಶ್ರ ಬೆಳೆ
ಎಷ್ಟು ವರ್ಷ ಕೃಷಿ: 30
ಪ್ರದೇಶ : 8 ಎಕರೆ
ಸಂಪರ್ಕ: 9880488468

Advertisement

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಕೃಷಿಗೆ ಮಹತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರ ಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಬೈಂದೂರು: ಕಠಿನ ಪರಿಶ್ರಮದಿಂದ ಕೃಷಿಯಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ತೋರ್ಪಡಿಸಿದ ಹೆಗ್ಗಳಿಕೆ ಶಿರೂರು ಗ್ರಾಮದ ಸರ್ಪನಮನೆ ಗೋವಿಂದ ದುರ್ಗಯ್ಯ ಮೇಸ್ತ ಅವರದ್ದಾಗಿದೆ. ಶಿರೂರು ಗ್ರಾಮದ ಪಶ್ಚಿಮ ಘಟ್ಟದ ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಗಡಿಭಾಗವಾದ ಸರ್ಪನಮನೆ ಕೃಷಿಗೆ ಹೆಸರಾದ ಪ್ರದೇಶವಾಗಿದೆ. ಸುತ್ತ ಕಾಡು ಪ್ರದೇಶವಿದ್ದು ಸುಮಾರು 65 ವರ್ಷಗಳ ಹಿಂದೆ ಇಲ್ಲಿ ಬಂದು ಏನೂ ಬೆಳೆಯಲು ಯೋಗ್ಯವಲ್ಲದ ಜಾಗವನ್ನು ಕೃಷಿ ಭೂಮಿಯಾಗಿ ಪರಿವರ್ತಿಸಿದ ಹಿರಿಮೆ ಇವರದ್ದಾಗಿದೆ. ಇಲ್ಲಿನ ಸರ್ಪನಮನೆ ಸಸ್ಯ ಕ್ಷೇತ್ರ ಕೂಡ ಪ್ರಸಿದ್ಧವಾಗಿದ್ದು, ಸುಮಾರು 8 ಎಕರೆ ಕೃಷಿ ಭೂಮಿಯಲ್ಲಿ ಆರಂಭದಲ್ಲಿ ಸಾಂಪ್ರದಾಯಿಕ ಭತ್ತದ ಬೆಳೆಯನ್ನು ಪ್ರಾರಂಭಿಸಿದ ಇವರು ಬಳಿಕ ಹಂತ ಹಂತವಾಗಿ ತೋಟಗಾರಿಕೆ ಆರಂಭಿಸಿ ಯಶಸ್ಸು ಕಂಡು ಪ್ರಸ್ತುತ ಪ್ರಗತಿಪರ ಕೃಷಿಕರಾಗಿ ಮೂಡಿಬಂದಿದ್ದಾರೆ.

ಮಿಶ್ರ ಬೆಳೆ
ಗೋವಿಂದ ಮೇಸ್ತ ತೆಂಗು, ಅಡಿಕೆ, ಬಾಳೆ, ಪಪ್ಪಾಯಿ, ಅನಾನಾಸು ವಿವಿಧ ತರಕಾರಿ ಸೇರಿ ಸೌತೆಕಾಯಿ, ಕಲ್ಲಂಗಡಿ, ಬೆಂಡೆಕಾಯಿ, ಬಸಳೆ, ತೊಂಡೆಕಾಯಿ ಮುಂತಾದ ಬೆಳೆ ಬೆಳೆಯುತ್ತಾರೆ. ಮಳೆಗಾಲದಲ್ಲಿ ಭತ್ತ ಬೆಳೆಯುವ ಇವರು ಕಟಾವಿನ ಬಳಿಕ ದ್ವಿದಳ ಧಾನ್ಯ ಸೇರಿದಂತೆ ತರಕಾರಿ ಬೆಳೆದು ಯಶಸ್ಸು ಕಂಡಿದ್ದಾರೆ. ಪ್ರಸ್ತುತ ತೊಂಡೆ ಹಾಗೂ ಸುವರ್ಣಗುಡ್ಡೆ ಬೆಳೆದಿದ್ದು ಸ್ವಲ್ಪ ದಿನಗಳಲ್ಲಿ ತರಕಾರಿ ಬೆಳೆ ಆರಂಭಿಸಲಿದ್ದಾರೆ. ಕಳೆದ ವರ್ಷ ಸುರಿದ ಮಳೆಗೆ ಕಾಳುಮೆಣಸು ಕೈಕೊಟ್ಟರೂ ಉತ್ತಮ ತೇವಾಂಶ ಇರುವುದರಿಂದ ಉಪ ಬೆಳೆಗಳು ಲಾಭ ತಂದುಕೊಟ್ಟಿದ್ದವು. ಪ್ರತಿವರ್ಷ ಹತ್ತಾರು ಕ್ವಿಂಟಾಲ್‌ ಬೂದುಗುಂಬಳ, ಸೌತೆಕಾಯಿ, ಕಲ್ಲಂಗಡಿ ಬೆಳೆದು ಸ್ವತಃ ಮುಂಬಯಿ ಮಾರುಕಟ್ಟೆಗೆ ಕೊಂಡೊಯ್ದು ಉತ್ತಮ ಧಾರಣೆ ಪಡೆದಿದ್ದರು.

ಕೃಷಿಯೊಂದಿಗೆ ಇತರ ಆಸಕ್ತಿ
ಉತ್ತಮ ತಂತ್ರಜ್ಞಾನ, ಆಧುನಿಕ ಕ್ರಮ ಹಾಗೂ ಇಲಾಖೆಯಿಂದ ಮಾಹಿತಿ ಪಡೆದರೆ ಕೃಷಿಯಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯ ಎನ್ನುವ ಇವರು ಕೃಷಿ ಮಾತ್ರವಲ್ಲದೆ ಇವರು ಪಂಪ್‌ಸೆಟ್‌ ದುರಸ್ತಿ, ಕೃಷಿ ಯಂತ್ರ ದುರಸ್ತಿಯನ್ನೂ ಮಾಡುತ್ತಾರೆ. ಮನೆ ಇಂಧನಕ್ಕಾಗಿ ಗೋಬರ್‌ಗ್ಯಾಸ್‌ ಅಳವಡಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ತೆಂಗಿನ ತೋಟಕ್ಕೆ ಏತ ನೀರಾವರಿ ಬಳಸುತ್ತಿದ್ದಾರೆ. ಹೈನುಗಾರಿಕೆಯೊಂದಿಗೆ ಪಾರಿವಾಳ ಮತ್ತು ವಿವಿಧ ಜಾತಿಯ ಪಕ್ಷಿಗಳ ಸಾಕಣೆ, ಕೋಳಿ ಸಾಕಣೆಯನ್ನೂ ಮಾಡುತ್ತಾರೆ. ಇವರು ಸ್ವತಃ ಟಿಲ್ಲರ್‌, ನಾಟಿ ಯಂತ್ರ, ಕಟಾವು ಯಂತ್ರ ಹೊಂದಿದ್ದು, ತಮ್ಮ ಕೃಷಿ ಚಟುವಟಿಕೆಗೆ ಪೂರಕವಾಗಿದೆ.

Advertisement

ಪ್ರಶಸ್ತಿಗಳು
ಸಂಸದರ ಆದರ್ಶ ಗ್ರಾಮ ಯೋಜನೆಯಲ್ಲಿ ಪ್ರಾದೇಶಿಕ ಸಾವಯವ ಕೇಂದ್ರ ಬೆಂಗಳೂರು ಇವರಿಂದ ಪ್ರಶಸ್ತಿ, 2017-18ನೇ ಸಾಲಿನ ಶ್ರೇಷ್ಠ ಕೃಷಿಕ ಪ್ರಶಸ್ತಿ, ಸಮಗ್ರ ಕೃಷಿ ಸಾಧನೆಗೆ ಸರಕಾರದ ಪ್ರಶಸ್ತಿ, ತಾಲೂಕು ಕೃಷಿ ಪ್ರಶಸ್ತಿ ದೊರೆತಿದೆ.

ಕೈಹಿಡಿದ ಉಪಬೆಳೆ
ಕಳೆದ ವರ್ಷ ಬಿರುಸಿನ ಮಳೆಯಿಂದಾಗಿ ಕಾಳು ಮೆಣಸಿನ ಮೇಲೆ ಪರಿಣಾಮ ಬೀರಿ ನಷ್ಟ ಅನುಭವಿಸುವಂತೆ ಮಾಡಿತ್ತು. ಆದರೆ ಮಣ್ಣಿನ ತೇವಾಂಶ ಉಪ ಬೆಳೆಯನ್ನು ಬೆಳೆಸುವ ನಿರ್ಧಾರಕ್ಕೆ ಮನ ಮಾಡುವಂತೆ ಮಾಡಿತ್ತು. ಉಪ ಬೆಳೆ ಸೂಕ್ತ ಕಾಲದಲ್ಲಿ ಕೈ ಹಿಡಿಯಿತು. ಕಾಳುಮೆಣಸಿನಲ್ಲಿ ಕಳೆದುಹೋದ ನಷ್ಟವನ್ನು ಸರಿದೂಗಿಸುವಲ್ಲಿ ಉಪ ಬೆಳೆ ಸಹಕಾರಿಯಾಯಿತು.

ಆಸಕ್ತಿ ಮುಖ್ಯ
ಆಧುನಿಕ ಯುಗದಲ್ಲಿ ಕೃಷಿ ಮಾನಸಿಕ ನೆಮ್ಮದಿ ನೀಡುತ್ತದೆ. ಕುಟುಂಬದ ಸದಸ್ಯರೆಲ್ಲರೂ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೃಷಿಯಲ್ಲಿ ಆದಾಯವೇ ಮುಖ್ಯವಾಗಿರದೆ ಆಸಕ್ತಿಯೂ ಅಗತ್ಯ. ಸಾವಯವ ಕೃಷಿಗೆ ಉತ್ತಮ ಬೇಡಿಕೆಯಿದೆ. ಕಾಡುಪ್ರಾಣಿಗಳ ಕಾಟ, ಅಕಾಲಿಕ ಮಳೆ, ಹವಾಮಾನ ವೈಪರೀತ್ಯ ಕೆಲವು ಬಾರಿ ನಷ್ಟ ಉಂಟು ಮಾಡಿದರೂ ಮಿಶ್ರ ಬೆಳೆ ಮತ್ತು ಬೇಡಿಕೆಗೆ ಅನುಗುಣವಾಗಿ ಮಾರುಕಟ್ಟೆ ಅಧ್ಯಯನ ಮಾಡಿ ಕೃಷಿ ಕೈಗೊಂಡರೆ ಯಶಸ್ಸು ಸಾಧ್ಯ. ತೆಂಗು, ಬಾಳೆಯನ್ನು ಅತ್ಯಾಧುನಿಕ ಪದ್ಧತಿಯಲ್ಲಿ ಬೆಳೆಯುವುದು ಮತ್ತು ಕೃಷಿಯಲ್ಲಿ ಆಧುನಿಕತೆ ಹಾಗೂ ಯಾಂತ್ರಿಕ ಕೃಷಿಯಿಂದ ಉತ್ತಮ ಇಳುವರಿ ಪಡೆಯುವುದು ಸಾಧ್ಯ. ರೈತನಾದವನು ನೀರಾವರಿ, ಯಾವ ಬೆಳೆ, ಎಷ್ಟು ಪ್ರಮಾಣದಲ್ಲಿ ಬೆಳೆಯಬೇಕೆಂದು ಕರಾರುವಾಕ್ಕಾಗಿ ಅರಿತರೆ ಹೆಚ್ಚಿನ ಸಂದರ್ಭಗಳಲ್ಲಿ ಲಾಭವೇ ಆಗುತ್ತದೆ ವಿನಾ ನಷ್ಟ ಅಸಾಧ್ಯ.
-ಗೋವಿಂದ ದುರ್ಗಯ್ಯ ಮೇಸ್ತ, ಸರ್ಪನಮನೆ ಶಿರೂರು

ಅರುಣ್‌ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next