ಬೈಂದೂರು: ಮುಂಬಯಿಯಿಂದ ಆಗಮಿಸುತ್ತಿರುವ ಕನ್ನಡಿಗರಿಗೆ ಉಡುಪಿ ಜಿಲ್ಲೆಯ ಗಡಿಭಾಗದ ಶಿರೂರು ಟೋಲ್‌ಗೇಟ್‌ನಲ್ಲಿ ಸಮರ್ಪಕ ವ್ಯವಸ್ಥೆ ಕಲ್ಪಿಸದಿರುವ ಕುರಿತು ಮತ್ತು ತಪಾಸಣೆ ಗಂಟೆಗಟ್ಟಲೆ ವಿಳಂಬವಾಗುತ್ತಿರುವ ಕುರಿತು ಮುಂಬಯಿ ಕನ್ನಡಿಗರು ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಇಂದು ಶಿರೂರು ಟೋಲ್‌ಗೇಟ್ ಗಡಿಭಾಗಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಅಧಿಕಾರಿಗಳೊಂದಿಗೆ ಮಾತನಾಡಿದ ಅವರು ಶಿರೂರು ಗಡಿಭಾಗದಲ್ಲಿ ಬರುವವರಿಗೆ ಯಾವುದೇ ತೊಂದರೆಯಾಗಬಾರದು ಅತ್ಯಂತ ಸಮರ್ಪಕ ಮಾಹಿತಿ ಮತ್ತು ಕ್ಷಿಪ್ರ ತಪಾಸಣೆ ಮೂಲಕ ಕ್ರಮ ಕೈಗೊಳ್ಳಬೇಕು ಸಮರ್ಪಕ ಸೌಕರ್ಯ ಒದಗಿಸಬೇಕೆಂದು ಆಗ್ರಹಿಸಿದ್ದರು.
ಇಲ್ಲಿನ ಅವ್ಯವಸ್ಥೆ ಕುರಿತು ಸ್ಪಂದಿಸಿದ ಮುಂಬಯಿಯಲ್ಲಿರುವ ಶಿರೂರಿನ ಹೊಸ್ಮನೆ ಶ್ರೀನಿವಾಸ ಶೆಟ್ಟಿಯವರು ಪ್ರತ್ಯೇಕ ಬಿಸ್ಕೆಟ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ. ಇದಕ್ಕಾಗಿ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಲಾಗಿದೆ. ಇದರ ಧನ ಸಹಾಯದ ಚೆಕ್‌ನ್ನು ಶಾಸಕರ ಮೂಲಕ ಹಸ್ತಾಂತರಿಸಲಾಯಿತು.
ಬೈಂದೂರು, ಕುಂದಾಪುರಕ್ಕೆ ಪ್ರತ್ಯೇಕ ವಾಹನ ವ್ಯವಸ್ಥೆ
ಪ್ರಸ್ತುತ ಎಲ್ಲ ತಪಾಸಣೆಯಾದ ಬಳಿಕ ಪೊಲೀಸ್ ಬೆಂಗಾವಲಿನಲ್ಲಿ ಕ್ವಾರಂಟೈನ್ ಕೇಂದ್ರಕ್ಕೆ ತೆರಳಲು ಎರಡು ಗಂಟೆ ಕಾಯಬೇಕಾಗಿದೆ. ಶಿರೂರಿನಿಂದ ಕಾರ್ಕಳದವರೆಗೆ ಒಂದೇ ಬಾರಿಗೆ ತೆರಳಬೇಕಾಗುತ್ತಿದೆ. ಹೀಗಾಗಿ ತಪಾಸಣೆಯಾದ ಬಳಿಕ ಕುಂದಾಪುರ ಮತ್ತು ಬೈಂದೂರು ತಾಲೂಕಿನವರಿಗೆ ಪ್ರತ್ಯೇಕ ಪೊಲೀಸ್ ವಾಹನ ನಿಯೋಜಿಸಿ ಕಳುಹಿಸಿಕೊಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.