Advertisement

ಗೋವುಗಳು, ಖಾಕಿ ಪಡೆಯ ಸ್ವಾಗತ !

06:00 AM Jul 21, 2018 | |

ಉಡುಪಿ: ಉಡುಪಿಯಿಂದ 24 ಕಿ.ಮೀ ದೂರದಲ್ಲಿರುವ ಹಿರಿಯಡಕ ಸಮೀಪದ ಶೀರೂರು ಮೂಲಮಠದಲ್ಲೀಗ ಶಂಖ, ಜಾಗಟೆ ನಾದವಿಲ್ಲ, ಮಂತ್ರಗಳ ಪಠಣವಿಲ್ಲ, ಭಕ್ತರ ಸುಳಿವಿಲ್ಲ. ಪಚ್ಚೆ ಊರಿನ ನಡುವೆ ಇರುವ ಮಠದ ಪರಿಸರದಲ್ಲಿ ಗೋವುಗಳು, ಪೊಲೀಸರನ್ನು ಹೊರತುಪಡಿಸಿದರೆ ಉಳಿದಂತೆ ಖಾಲಿ ಖಾಲಿ. 

Advertisement

ಮಠದ ಅಂಗಳದಿಂದ ಸಾಕಷ್ಟು ದೂರದಲ್ಲಿಯೇ ಪೊಲೀಸ್‌ ರಿಬ್ಬನ್‌ಗಳನ್ನು ಅಳವಡಿಸಿ ಪ್ರವೇಶವನ್ನು ನಿರ್ಬಂಧಿಸ ಲಾಗಿದೆ. ಮುಚ್ಚಿದ ಬಾಗಿಲುಗಳು, ಗುರುವಾರದಂದು ಶ್ರೀಗಳ ಪಾರ್ಥಿವ ಶರೀರದ ಮೆರವಣಿಗೆ ಸಂದರ್ಭ ಬಳಸಿ ಅಲ್ಲೇ ಪಕ್ಕದಲ್ಲಿ ಇಡಲಾದ ಹೂಗಳು ಆ ನೀರವತೆಯನ್ನು ಮತ್ತಷ್ಟು ಆಳವಾಗಿಸುವಂತಿವೆ.

ದನಗಳು ಅಂಗಳದಲ್ಲಿ, ಗೋಶಾಲೆ ಹೊರಗೆ ಅತ್ತಿಂದಿತ್ತ ಸುಳಿದಾಡುತ್ತಾ ಪೊಲೀಸ್‌ ಸಿಬಂದಿ ಬಳಿ ಬಂದು ಹಾಗೇ ಸುಮ್ಮನೆ ನಿಂತು ನೋಡುತ್ತಿವೆ. ಜಿಲ್ಲಾ ಸಶಸ್ತ್ರ ಮತ್ತು ಮೀಸಲು ಪಡೆಯ ಪೊಲೀಸರು ಹಗಲು ರಾತ್ರಿ ಕಾವಲು ಕಾಯುತ್ತಿದ್ದಾರೆ. ಗನ್‌ ಹಿಡಿದ ಸಿಬಂದಿಯ ಭಯವೂ ಗೋವುಗಳಿಗಿಲ್ಲ. ಏನೋ ಆಗಿದೆ, ಆಗುತ್ತಿದೆ ಎಂಬುದು ಮಾತ್ರ ಅವುಗಳ ಅರಿವಿಗೆ ಬಂದಂತಿದೆ.

ಮಠದ ಇತರ ಯಾವ ಕಾರ್ಮಿಕರು ಕೂಡ ಬಂದಿಲ್ಲ. ಬಂದರೂ ಅವರಿಗೆ ಇಲ್ಲಿ ಕೆಲಸವಿಲ್ಲ. ಮಠದ ಎಲ್ಲಾ ಬಾಗಿಲುಗಳು ಮುಚ್ಚಿವೆ. ದನಗಳಿಗೆ ಮೇವು ಹಾಕುವವರು ಮಾತ್ರ ಮಠದ ಹೊರಗೆ ಬಂದು ಹೋಗುತ್ತಾರೆ. 

ಆಹಾರ ತ್ಯಜಿಸಿತೇ ಪ್ರೀತಿಯ ಶ್ವಾನ?
ಶೀರೂರು ಶ್ರೀಗಳಿಗೆ ಗೋವುಗಳಂತೆ ಶ್ವಾನ ಕೂಡ ಪ್ರೀತಿ ಪಾತ್ರವಾಗಿತ್ತು. ಶುಕ್ರವಾರ ಮೂಲ ಮಠದಲ್ಲಿ ಅವರ ಪ್ರೀತಿಯ ನಾಯಿಯೊಂದು ಹಾಗೆಯೇ ಕುಳಿತಿತ್ತು. ಅದರ ಎದುರು ಅನ್ನ ಇಡಲಾಗಿತ್ತು. “ಅದು ಅನ್ನವನ್ನು ಸರಿಯಾಗಿ ಸ್ವೀಕರಿಸುತ್ತಿಲ್ಲ’ ಎನ್ನಲಾಗಿದೆ. ಶ್ರೀಗಳಿಗೆ ಅಚ್ಚುಮೆಚ್ಚಿನ ಎರಡು ಗೋವುಗಳು ಕೂಡ ಇಲ್ಲಿಯೇ ಇವೆ ಎನ್ನಲಾಗುತ್ತಿದೆ. ಇಲ್ಲಿ ಸರಿಸುಮಾರು ನೂರಕ್ಕೂ ಅಧಿಕ ಗೋವುಗಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next