Advertisement

Shiroor Hill Slide: ಗಂಗಾವಳಿಯಲ್ಲಿ ನೌಕಾಪಡೆ ಮುಳುಗು ತಜ್ಞರಿಂದ ಶೋಧ

12:18 AM Jul 24, 2024 | Team Udayavani |

ಕಾರವಾರ: ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಸಮೀಪ ಶಿರೂರು ಬಳಿ ಗುಡ್ಡಕುಸಿತದಿಂದ ಗಂಗಾವಳಿ ನದಿಯಲ್ಲಿ ಕೊಚ್ಚಿಹೋಗಿರುವವರ ಪತ್ತೆಗೆ ಮಂಗಳವಾರ ನೌಕಾಪಡೆಯ ಮುಳುಗು ತಜ್ಞರು ಹುಡುಕಾಟ ನಡೆಸಿದರು.

Advertisement

ಶಿರೂರು ಮತ್ತು ಉಳುವರೆ ಗ್ರಾಮಗಳ ನಡುವೆ ಹರಿಯುವ ಗಂಗಾವಳಿ ನದಿಯ ತಳದಲ್ಲಿ ಸ್ಕೂಬಾ ಡ್ರೈವರ್ಸ್‌ ಕೂಡ ಹಗಲಿಡೀ ಸತತ ಪ್ರಯತ್ನ ನಡೆಸಿದರು. ನದಿಯಲ್ಲಿ ಬಿದ್ದಿರುವ ಕಲ್ಲು ಬಂಡೆಗಳು ಮತ್ತು ಮಣ್ಣಿನ ಅವಶೇಷದಡಿ ನೀರಲ್ಲಿ ಬಳಸುವ ವಾಟರ್‌ ಪೆನಟ್ರೇಟಿಂಗ್‌ ರಾಡರ್‌ ಬಳಸಿ ಶೋಧಿಸಲಾಯಿತು. ಲಾರಿ ಹಾಗೂ ಮನೆಗಳ ಅವಶೇಷಗಳ ಹುಡುಕಾಟಕ್ಕೆ ತೀವ್ರ ಶೋಧ ನಡೆದರೂ ಪ್ರಯೋಜನವಾಗಲಿಲ್ಲ.

ಆರು ಬೋಟ್‌ಗಳಲ್ಲಿ 20ಕ್ಕೂ ಅಧಿಕ ಮಂದಿ ನೌಕಾಪಡೆ, ಸೇನಾಪಡೆ, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಸಿಬ್ಬಂದಿ ಹುಡುಕಾಟದಲ್ಲಿ ನಿರತರಾಗಿದ್ದು, ಉಳಿದ ಸಿಬ್ಬಂದಿ ನದಿ ದಂಡೆಯಲ್ಲಿರುವ ಮಣ್ಣಿನಡಿ ಶೋಧ ನಡೆಸಿದರೂ ಲಾರಿ, ಯಾವುದೇ ವಸ್ತು ಅಥವಾ ಶವಗಳ ಸುಳಿವು ದೊರೆತಿಲ್ಲ.

ಬೆಳಗ್ಗೆಯಿಂದಲೇ ವಾಟರ್‌ ಬೋಟ್‌ಗಳನ್ನು ಸಜ್ಜುಗೊಳಿಸಿಕೊಂಡು ನದಿಯಲ್ಲಿ ಕಾರ್ಯಾಚರಣೆ ನಡೆದಿದ್ದು, ಗುಡ್ಡ ಕುಸಿತದ ಘಟನೆಯಲ್ಲಿ ಕಾಣೆಯಾಗಿರುವ ಜಗನ್ನಾಥ, ಕೇರಳ ಮೂಲದ ಚಾಲಕ ಅರ್ಜುನ್‌ ಕುಟುಂಬದವರು ಆಶಾವಾದದಿಂದ ನದಿಯ ಬಳಿ ಸ್ವಲ್ಪ ಹೊತ್ತು ಕಾದಿದ್ದರು. ಇನ್ನೊಂದೆಡೆ ನದಿಯ 60 ಅಡಿ ಆಳದಲ್ಲಿ ಬಿದ್ದಿರುವ ಕಲ್ಲು ಮಣ್ಣು ತೆಗೆಯುವ ಸಾಮರ್ಥಯದ ಪ್ರೋಕ್‌ಲೈನ್‌ ಯಂತ್ರ ಶಿರೂರಿಗೆ ಆಗಮಿಸಿದ್ದು, ಬುಧವಾರ ಕಾರ್ಯಾಚರಣೆ ಆರಂಭವಾಗಲಿದೆ.

ಹೇಗೆಲ್ಲಾ ಕಾರ್ಯಾಚರಣೆ?
*ಗಂಗಾವಳಿ ನದಿ ತಳದಲ್ಲಿ ಸ್ಕೂಬಾ ಡ್ರೈವರ್ಸ್‌ನಿಂದ ನಿರಂತರ ಕಾರ್ಯಾಚರಣೆ
*ವಾಟರ್‌ ಪೆನಟ್ರೇಟಿಂಗ್‌ ರಾಡರ್‌ ಬಳಸಿ ಲಾರಿ, ಅವಶೇಷಗಳಿಗಾಗಿ ಶೋಧ
* 6 ಬೋಟ್‌ಗಳಲ್ಲಿ 20ಕ್ಕೂ ಅಧಿಕ ನೌಕಾಪಡೆ, ಸೇನಾಪಡೆ, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಸಿಬ್ಬಂದಿ
* ಬೆಳಗ್ಗೆಯಿಂದಲೇ ವಾಟರ್‌ ಬೋಟ್‌ಗಳನ್ನು ಸಜ್ಜುಗೊಳಿಸಿ ನದಿಯಲ್ಲಿ ಕಾರ್ಯಾಚರಣೆ

Advertisement

ಶಿರೂರು ದುರಂತ: ಮಹಿಳೆಯ ಶವ ಪತ್ತೆ

ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಕಾಣೆಯಾಗಿದ್ದ ಉಳುವರೆ ಗ್ರಾಮದ ಮಹಿಳೆ ಸಣ್ಣಿ ಅವರ ಮೃತದೇಹ ಮಂಗಳವಾರ ಪತ್ತೆಯಾಗಿದೆ. ಈ ಮೂಲಕ ಈತನಕ ಒಟ್ಟು 8 ಮಂದಿಯ ಶವ ಪತ್ತೆಯಾದಂತಾಗಿದೆ.

ಜು. 16ರಂದು ಸಂಭವಿಸಿದ ಗುಡ್ಡಕುಸಿತದಲ್ಲಿ ಸಣ್ಣಿ ಮನೆ ಸಹಿತ ಗಂಗಾವಳಿ ನದಿಯ ನೀರಲ್ಲಿ ಕೊಚ್ಚಿ ಹೋಗಿದ್ದರು. ಸತತ 8 ದಿನಗಳ ಶೋಧ ಕಾರ್ಯದ ಬಳಿಕ ಗಂಗಾವಳಿ ನದಿ ಸಂಗಮದ ಮಂಜುಗುಣಿಯಲ್ಲಿ ಸಣ್ಣಿ ಅವರ ಮೃತದೇಹ ಪತ್ತೆಯಾಗಿದ್ದು, ಎಸ್‌ಡಿಆರ್‌ಎಫ್‌ನವರು ಹೊರತೆಗೆದರು. ಅಂಕೋಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಹೆಗಲು ಕೊಟ್ಟ ಮಂಗಳೂರಿನ ಪತ್ರಕರ್ತರು
ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಗೊಂಡು ಗ್ರಾಮಕ್ಕೆ ಶವ ತಂದಾಗ ಹೊರುವವ ರಿಲ್ಲದೆ ರಸ್ತೆಯೂ ಸರಿಯಿಲ್ಲದೇ ಆ್ಯಂಬುಲೆನ್ಸ್‌ನಲ್ಲೇ ಉಳಿದಿತ್ತು. ಕೊಳೆತ ವಾಸನೆಯಿಂದಾಗಿ ಯಾರೂ ಹೊರಲು ಸಿದ್ಧರಿರಲಿಲ್ಲ. ಆಗ ಅಲ್ಲಿದ್ದ ಮಂಗಳೂರಿನ ಪತ್ರಕರ್ತರು ಮೃತದೇಹವನ್ನು ತಾವೇ ಹೊತ್ತು ಸಾಗಿ ಮನೆಯವರಿಗೆ ಒಪ್ಪಿಸಿ ಅಂತಿಮ ಸಂಸ್ಕಾರ ನಡೆಸಲು ನೆರವಾದರು.

ಗ್ಯಾಸ್‌ಟ್ಯಾಂಕರ್‌ ಚಾಲಕ ನಾಪತ್ತೆ
ಗುಡ್ಡ ಕುಸಿತದಲ್ಲಿ ತಮಿಳುನಾಡು ಮೂಲದ ಗ್ಯಾಸ್‌ ಟ್ಯಾಂಕರ್‌ ಚಾಲಕ ತಮಿಳುನಾಡು ರಾಜ್ಯದ ಕೊವಿಲ್‌ ನಿವಾಸಿ ಶರವಣನ್‌ (38) ನಾಪತ್ತೆ ಆಗಿರುವುದಾಗಿ ಅವರ ತಾಯಿ ಅಂಕೋಲಾ ಠಾಣೆಗೆ ದೂರು ನೀಡಿದ್ದಾರೆ. ಮಂಗಳೂರಿನಿಂದ ಧಾರವಾಡಕ್ಕೆ ಹೋಗಿ ಗ್ಯಾಸ್‌ ಖಾಲಿ ಮಾಡಿ ಮರಳುವ ಹಾದಿಯಲ್ಲಿ ಶಿರೂರಿನಲ್ಲಿ ಚಹಾ ಸೇವನೆಗೆ ನಿಂತಿದ್ದ ಶರವಣನ್‌ ನಾಪತ್ತೆಯಾಗಿದ್ದರು. ಅವರು ಚಾಲಕನಾಗಿದ್ದ ಟ್ಯಾಂಕರ್‌ ಗುಡ್ಡ ಕುಸಿದ ಸ್ಥಳದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next