Advertisement

ಶಿರ್ಲಾಲು: ಉಪಯೋಗಕ್ಕೆ ಬಾರದ ಆರೋಗ್ಯ ಉಪಕೇಂದ್ರ

10:01 PM Aug 16, 2019 | Team Udayavani |

ವಿಶೇಷ ವರದಿಅಜೆಕಾರು: ಶಿರ್ಲಾಲು ಗ್ರಾ.ಪಂ. ವ್ಯಾಪ್ತಿಯ ಹಾಡಿಯಂಗಡಿ ಬಳಿ 2 ದಶಕಗಳ ಹಿಂದೆ ನಿರ್ಮಾಣವಾದ ಆರೋಗ್ಯ ಉಪಕೇಂದ್ರದಲ್ಲಿ ಸಿಬಂದಿಯಿಲ್ಲದೆ ಜನೋಪಯೋಗಕ್ಕೆ ಇಲ್ಲದಂತಾಗಿದೆ.

Advertisement

ಮಾಳ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಉಪಕೇಂದ್ರ ಇದಾಗಿದ್ದು ದಶಕಗಳಿಂದ ಖಾಯಂ ಆರೋಗ್ಯ ಸಹಾಯಕಿಯರಿಲ್ಲದೆ ಸ್ಥಳೀಯರಿಗೆ ಸಮಸ್ಯೆಯಾಗಿದೆ. ಶಿರ್ಲಾಲು ಗ್ರಾಮವು ಮಾಳದಿಂದ ಸುಮಾರು 23 ಕಿ.ಮೀ.ಯಷ್ಟು ದೂರವಿದ್ದು ತುರ್ತು ಸಂದರ್ಭಗಳಲ್ಲಿ ಔಷಧಿಗಾಗಿ ಸ್ಥಳೀಯರು ಸಂಕಷ್ಟಪಡಬೇಕಾಗಿದೆ. ಕಳೆದ 10 ವರ್ಷ ಗಳಿಂದಲೂ ಪ್ರಭಾರ ಆರೋಗ್ಯ ಸಹಾಯಕಿ ಯರೇ ವಾರದಲ್ಲಿ ಒಂದು ಅಥವಾ 2 ದಿನ ಶಿರ್ಲಾಲು ಪಂಚಾಯತ್‌ ವ್ಯಾಪ್ತಿಯ ಮುಂಡ್ಲಿ ಹಾಗೂ ಶಿರ್ಲಾಲು ಗ್ರಾಮಗಳಲ್ಲಿ ಕಾರ್ಯನಿರ್ವಹಿಸಬೇಕಾಗಿದೆ.

ಮಾಳದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಲುಪಬೇಕಾದರೆ ಕೆರ್ವಾಶೆ ಬಜಗೋಳಿ ಮಾರ್ಗವಾಗಿ ಸಂಪರ್ಕಿಸಬೇಕಾಗಿದ್ದು 3 ಬಸ್ಸುಗಳನ್ನು ಬದಲಿಸ ಬೇಕಾಗಿದೆ. ಶಿರ್ಲಾಲು ಆರೋಗ್ಯ ಉಪ ಕೇಂದ್ರವನ್ನು ಮಾಳದ ಬದಲಾಗಿ ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಒಳಪಡಿಸಿದಲ್ಲಿ ಶಿರ್ಲಾಲು, ಮುಂಡ್ಲಿ ಗ್ರಾಮಸ್ಥರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಶಿರ್ಲಾಲುವಿನಿಂದ ಅಜೆಕಾರುವಿಗೆ ಕೇವಲ 10 ಕೀ. ಮೀ.ಯಷ್ಟು ದೂರವಿದ್ದು ಪ್ರತೀ ಅರ್ಧ ಗಂಟೆಗೊಮ್ಮೆ ಬಸ್ಸಿನ ವ್ಯವಸ್ಥೆಯೂ ಇರುವುದರಿಂದ ಅನಾರೋಗ್ಯ ಪೀಡಿತರಿಗೆ ಹಾಗೂ ಗರ್ಭಿಣಿ ಮಹಿಳೆಯರಿಗೆ ಹೆಚ್ಚಿನ ಸಹಾಯವಾಗಲಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಸುತ್ತು ಬಳಸಿ ಸಂಚಾರ
ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ, ಚಿಕನ್‌ಗುನ್ಯಾ ಹಾಗೂ ಕ್ಷಯ ರೋಗದಂತಹ ಭೀಕರ ಕಾಯಿಲೆಗಳು ಇದ್ದಲ್ಲಿ ಮಾಳ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೇ ಅವಲಂಬಿಸಬೇಕಾಗಿದೆ. ಅಲ್ಲದೆ ಗರ್ಭಿಣಿಯರು ತಾಯಿ ಕಾರ್ಡ್‌ ಹಾಗೂ ಪ್ರತೀ ತಿಂಗಳ ಆರೋಗ್ಯ ತಪಾಸಣೆಗೆ ಸುತ್ತು ಬಳಸಿ ಸಂಚರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಮೂಲ ಸೌಕರ್ಯಗಳಿಲ್ಲ
ಎರಡು ದಶಕಗಳ ಹಿಂದೆ ಆರೋಗ್ಯ ಉಪಕೇಂದ್ರ ನಿರ್ಮಾಣವಾಗಿದೆ ಯಾದರೂ ಇಲ್ಲಿ ಸಿಬಂದಿ ಕೊರತೆಯ ಜತೆಗೆ ಮೂಲ ಸೌಕರ್ಯದ ಕೊರತೆ ಕಾಡುತ್ತಿದೆ. ಉಪಕೇಂದ್ರದಲ್ಲಿ ನೀರು, ವಿದ್ಯುತ್‌ ವ್ಯವಸ್ಥೆ ಸರಿಯಾಗಿಲ್ಲ.

Advertisement

ಸಿಬಂದಿ ನೇಮಿಸಿ
ಅತ್ಯಂತ ಗ್ರಾಮೀಣ ಭಾಗವಾಗಿರುವ ಶಿರ್ಲಾಲು ಆರೋಗ್ಯ ಉಪಕೇಂದ್ರದಲ್ಲಿ ನಿರಂತರ ಸಿಬಂದಿ ಇರುವುದು ಅತ್ಯವಶ್ಯ. ಆದರೆ ಕಳೆದ ಹಲವು ವರ್ಷಗಳಿಂದ ಇಲ್ಲಿ ಖಾಯಂ ಸಿಬಂದಿಯಿಲ್ಲದೆ ಸ್ಥಳೀಯರು ಸಂಕಷ್ಟಪಡುವಂತಾಗಿದೆ. ಅಲ್ಲದೆ ಹತ್ತಿರದ ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಗೆ ಶಿರ್ಲಾಲು ಉಪಕೇಂದ್ರವನ್ನು ಸೇರಿಸದೆ ಅತಿ ದೂರದ ಮಾಳ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಸೇರಿಸಿರುವುದರಿಂದ ಸ್ಥಳೀಯರು ಸುತ್ತು ಬಳಸಿ ಆರೋಗ್ಯ ಸೇವೆ ಪಡೆಯಬೇಕಾಗಿದೆ.
-ರವಿ ಎಸ್‌. ಅಮೀನ್‌, ಶಿರ್ಲಾಲು, ಸ್ಥಳೀಯರು

ಪ್ರಸ್ತಾವನೆ ಸಲ್ಲಿಕೆ
ಶಿರ್ಲಾಲು ಗ್ರಾಮಸ್ಥರ ಬಹು ವರ್ಷಗಳ ಬೇಡಿಕೆಯಂತೆ ಶಿರ್ಲಾಲು ಆರೊಗ್ಯ ಉಪಕೇಂದ್ರವನ್ನು ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಗೆ ಒಳಪಡಿಸುವಂತೆ ಈ ಹಿಂದೆಯೇ ಉನ್ನತಾಧಿಕಾರಿ ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
-ಡಾ| ಕೃಷ್ಣಾನಂದ,
ತಾಲೂಕು ಆರೋಗ್ಯಾಧಿಕಾರಿ ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next