Advertisement
ಅಖೀಲ ಭಾರತ ಶಿರಡಿ ಸಾಯಿ ಸಂಘದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾದುಕೆ ದರ್ಶನ ಪಡೆಯಲು ನಗರದ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ಪಾದುಕೆ ದರ್ಶನ ಕಾರ್ಯಕ್ರಮದ ಉಸ್ತುವಾರಿಯನ್ನು ಶಿರಡಿಯ ರಮಣಿಯವರು ವಹಿಸಿದ್ದರು. ಇವರೊಂದಿಗೆ 100 ಮಂದಿ ಅಧಿಕಾರಿಗಳು, 30 ಮಂದಿ ಭದ್ರತಾ ಸಿಬ್ಬಂದಿ ಕೂಡ ಶಿರಡಿಯಿಂದಲೇ ಬಂದಿದ್ದಾರೆ.
ಪಾದುಕೆಗಳನ್ನು ಗಾಜಿನ ಪೆಟ್ಟಿಗೆಯಲ್ಲಿ ಇಡಲಾಗಿದೆ. ಭಕ್ತರು ಆ ಪೆಟ್ಟಿಗೆಯನ್ನು ಮುಟ್ಟಿ ನಮಸ್ಕರಿಸಲು ಅವಕಾಶ ಕಲ್ಪಿಸಲಾಗಿತ್ತು. ದರ್ಶನ ಪಡೆದವರಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು. ಮೊದಲ ದಿನ ಬೆಳಗ್ಗೆ ಯಿಂದ ರಾತ್ರಿಯವರೆಗೆ ಸುಮಾರು 15 ಸಾವಿರ ಭಕ್ತರು ಪಾದುಕೆ ದರ್ಶನ ಪಡೆದಿದ್ದಾರೆ. ದರ್ಶನಕ್ಕೆ ಬಂದಿರುವ ಭಕ್ತರ ಅನುಕೂಲಕ್ಕಾಗಿ ನ್ಯಾಷನಲ್ ಕಾಲೇಜು ಮೈದಾನದ ಪ್ರವೇಶ ದ್ವಾರದಲ್ಲಿ ಪಾದರಕ್ಷೆಗಳನ್ನು ಬಿಡಲು ಬೇಕಾದ ವ್ಯವಸ್ಥೆ ಮಾಡಿದ್ದಾರೆ. ಸರತಿ ಸಾಲಿನಲ್ಲಿ ಬರಲು ಅನುಕೂಲವಾಗುವಂತೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಶಾಸಕ ಆರ್.ವಿ. ದೇವರಾಜ್, ಪಾಲಿಕೆ ಸದಸ್ಯ ನಾಗರಾಜು ಇತರರು ಭಾಗವಹಿಸಿದ್ದರು. ರಾಜ್ಯದ ಎಲ್ಲಾ ಭಕ್ತರಿಗೆ ಶಿರಡಿಗೆ ಹೋಗಿ ಸಾಯಿ ಬಾಬಾ ಅವರ ದರ್ಶನ ಹಾಗೂ ಪಾದಕೆ ನೋಡಲು ಸಾಧ್ಯವಾಗದು. ಹೀಗಾಗಿ ಅವರ ಪಾದುಕೆ ದರ್ಶನ ವ್ಯವಸ್ಥೆ ಮಾಡಲಾಗಿದೆ. ಭಾನುವಾರ ಬೆಳಗ್ಗೆ 7.30ರಿಂದ ರಾತ್ರಿ 10.30ರ ತನಕ ದರ್ಶನ ಇರುತ್ತದೆ.
ಆರ್. ಅಭಿಷೇಕ್, ಕಾರ್ಯದರ್ಶಿ, ಅಖೀಲ ಭಾರತ ಶಿರಡಿ ಸಾಯಿ ಸಂಘ