ಶಿರಡಿ: ಕೋವಿಡ್ ಲಾಕ್‌ಡೌನ್ ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ಪ್ರಸಿದ್ಧ ಸಾಯಿಬಾಬಾ ಮಂದಿರದ ಆದಾಯದ ಮೇಲೆ ಪರಿಣಾಮ ಬೀರಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಹಿಂದಿನ ವರ್ಷದ ತುಲನೆಯಲ್ಲಿ ಈ ಅವಧಿಯಲ್ಲಿ ಮಂದಿರಕ್ಕೆ ಆನ್‌ಲೈನ್ ವಿಧಾನದ ಮೂಲಕ ದೊರೆಯುವ ದೇಣಿಗೆಯಲ್ಲಿ ಹೆಚ್ಚಳ ಕಂಡುಬಂದಿದೆ. ಕೋವಿಡ್ ನಿರ್ಬಂಧಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮಂದಿರವು ಮಾ.17ರಿಂದ ಭಕ್ತರಿಗೆ ಮುಚ್ಚಲ್ಪಟ್ಟಿದೆ. ಮಂದಿರವು ಪ್ರಸಕ್ತ ವರ್ಷದ ಮಾ. 17ರಿಂದ ಆ. 31ರ ವರೆಗೆ 115.16 ಕೋಟಿ ರೂ. ಆದಾಯವನ್ನು ಪಡೆದಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 289.55 ರೂ.ಗಳ ಆದಾಯವನ್ನು ಪಡೆದಿತ್ತು. ಅಂದರೆ ಮಂದಿರದ
ಆದಾಯವು 174 ಕೋಟಿ ರೂ.ಗಳಷ್ಟು ಕುಸಿದಿದೆ ಎಂದು ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ಸಿಇಒ ಕಣ್ಣುರಾಜ್ ಬಾಗಟೆ ಪಿಟಿಐಗೆ ತಿಳಿಸಿದ್ದಾರೆ.
ಲಾಕ್‌ಡೌನ್ ಅವ ಧಿಯಲ್ಲಿ ಸ್ಥಿರ ಠೇವಣಿಗಳ ಮೇಲೆ ಗಳಿಸಿದ ಬಡ್ಡಿಯ ಮೂಲಕ ಗರಿಷ್ಠ 94.39 ಕೋಟಿ ರೂ.ಗಳ ಆದಾಯವನ್ನು ಗಳಿಸಲಾಗಿದೆ. ನಗದು ದೇಣಿಗೆ 18.32 ಲಕ್ಷ ರೂ.ಗಳಷ್ಟಿದೆ ಎಂದಿದ್ದಾರೆ. 2019ರ ಮಾ. 17ರಿಂದ ಆ. 31ರ ವರೆಗೆ ಆನ್‌ಲೈನ್ ವಿಧಾನದ ಮೂಲಕ ಪಡೆದ 1.89 ಕೋಟಿ ರೂ.ಗಳ ತುಲನೆಯಲ್ಲಿ ಪ್ರಸಕ್ತ ವರ್ಷ ಟ್ರಸ್ಟ್ ಈ ಅವಧಿಯಲ್ಲಿ ಆನ್‌ಲೈನ್ ದೇಣಿಗೆಯಾಗಿ 11.47 ಕೋಟಿ ರೂ.ಗಳನ್ನು ಪಡೆದಿದೆ ಎಂದು ಸಿಇಒ ತಿಳಿಸಿದ್ದಾರೆ.
ಕಳೆದ ವರ್ಷ ಮಂದಿರಕ್ಕೆ 8.868 ಕೆಜಿ ಚಿನ್ನ ಮತ್ತು 194 ಕೆಜಿ ಬೆಳ್ಳಿ ಆಭರಣವು ದಾನವಾಗಿ ದೊರೆತಿತ್ತು, ಆದರೆ ಲಾಕ್ ಡೌನ್ ಸಮಯದಲ್ಲಿ ಅದು ಕೇವಲ 162 ಗ್ರಾಂ ಚಿನ್ನ ಮತ್ತು 2.6 ಕೆಜಿ ಬೆಳ್ಳಿಯನ್ನು ಪಡೆದಿದೆ ಎಂದವರು ಹೇಳಿದ್ದಾರೆ. ಟ್ರಸ್ಟ್ ಮಂದಿರದ ನಿರ್ವಹಣೆಗೆ 55 ಕೋಟಿ ರೂ. ಹಾಗೂ 5,500 ನೌಕರರ ವೇತನಕ್ಕೆ 13 ಕೋಟಿ ರೂ. ಖರ್ಚು ಮಾಡಿದೆ ಎಂದು ಬಾಗಟೆ ತಿಳಿಸಿದ್ದಾರೆ.