ಶಿರಡಿ : ವಿಶ್ವದ ಪ್ರಸಿದ್ಧ ದೇಗುಲಗಳಲ್ಲಿ ಒಂದಾದ ಶಿರಡಿ ಸಾಯಿಬಾಬಾ ಮಂದಿರದ ಬಾಗಿಲನ್ನು ನವರಾತ್ರಿಯ ಶುಭ ದಿನವಾದ ಗುರುವಾರದಿಂದ ಭಕ್ತರಿಗಾಗಿ ತೆರೆಯಲಾಗಿದೆ.
ಕೊವಿಡ್ ಹಿನ್ನಲೆಯಲ್ಲಿ ಭಕ್ತರ ಪ್ರವೇಶಕ್ಕೆ ಅವಕಾಶ ನಿರಾಕರಿಸಿ ಮುಚ್ಚಲಾಗಿದ್ದ ದೇಗುಲದ ಬಾಗಿಲನ್ನು ಮತ್ತೆ ತೆರೆಯಲಾಗಿದ್ದು, ಕಠಿಣ ನಿಯಮಗಳ ಮೂಲಕ ಭಕ್ತ ರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ.
ದಿನವೊಂದಕ್ಕೆ ಆನ್ಲೈನ್ ನಲ್ಲಿ ಟಿಕೇಟು ಪಡೆದ,15,000 ಭಕ್ತರಿಗೆ ಮಂದಿರ ಭೇಟಿಗೆ ಅವಕಾಶ ನೀಡಲಾಗುತ್ತದೆ ಎಂದು ಶಿರಡಿ ಸಂಸ್ಥಾನ ಟ್ರಸ್ಟ್ ಹೇಳಿದ್ದು, ಪ್ರಸಾದದ ಕೌಂಟರ್ ತೆರೆಯುವ ಯೋಚನೆ ಸಧ್ಯಕ್ಕೆ ಇಲ್ಲ ಎಂದಿದೆ.
10ವರ್ಷದ ಕೆಳಗಿನ ಮಕ್ಕಳು, ತೀವ್ರ ಆರೋಗ್ಯ ಸಮಸ್ಯೆ ಇರುವವರು ಮತ್ತು 65 ವರ್ಷ ಮೇಲ್ಪಟ್ಟವರಿಗೆ ಮಂದಿರ ಪ್ರವೇಶಕ್ಕೆ ಅವಕಾಶ ಇಲ್ಲ ಎಂದು ಹೇಳಿದೆ.
ಬೆಳಗಿನ ಜಾವ 4.30 ಕ್ಕೆ ಆರತಿ ಸೇವೆ ನಡೆಯಲಿದ್ದು, 600 ರೂಪಾಯಿ ಟಿಕೇಟು ನಿಗದಿ ಪಡಿಸಲಾಗಿದೆ. ಮಧ್ಯಾಹ್ನ 12:00, ಸಂಜೆ ಧೂಪ ಆರತಿ ಮತ್ತು ರಾತ್ರಿ 10.30ಕ್ಕೆ ಮಂಗಳಾರತಿ ನಡೆಯಲಿದ್ದು 400 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ .
ಮಾಸ್ಕ್ ಧರಿಸದ ಯಾವುದೇ ಭಕ್ತರಿಗೆ ಮಂದಿರದ ಒಳಗೆ ಪ್ರವೇಶ ನೀಡುವುದಿಲ್ಲ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಮಹಾರಾಷ್ಟ್ರದ ಪ್ರಮುಖ ದೇವಾಲಯಗಳನ್ನು ಇಂದಿನಿಂದ ಭಕ್ತರಿಗಾಗಿ ತೆರೆಯಲು ಸರಕಾರ ಅವಕಾಶ ನೀಡಿದೆ.