Advertisement

ಪ್ರತ್ಯಕ್ಷ ದೈವನ ಹಾಡು ಬಂತು

12:30 AM Feb 01, 2019 | |

ಶಿರಡಿ ಸಾಯಿ ಬಾಬಾ ಅವರ ಕುರಿತಂತೆ ಈಗಾಗಲೇ ಸಾಕಷ್ಟು ಭಕ್ತಿಪ್ರಧಾನ ಚಿತ್ರಗಳು ಬಂದಿವೆ. ಈಗಲೂ ತಯಾರಾಗುತ್ತಲೇ ಇವೆ. ಇದೀಗ “ಪ್ರತ್ಯಕ್ಷ ದೈವ ಶಿರಡಿ ಸಾಯಿ’ ಸಿನಿಮಾ ಚಿತ್ರೀಕರಣಗೊಂಡು ಪ್ರೇಕ್ಷಕರ ಎದುರು ಬರಲು ಸಜ್ಜಾಗಿದೆ. ಹೌದು, ಕೆ.ಎಸ್‌.ನಾರಾಯಣ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರವನ್ನು ಮಚ್ಛಾ ರಾಮಲಿಂಗಾರೆಡ್ಡಿ ಅವರು ನಿರ್ಮಿಸಿದ್ದಾರೆ. ಅಷ್ಟೇ ಅಲ್ಲ, ಚಿತ್ರದಲ್ಲಿ ಶಿರಡಿ ಸಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಕೂಡ. ಇತ್ತೀಚೆಗೆ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡಲಾಯಿತು. ಚಿತ್ರದಲ್ಲಿ ಖಳ ಮಾಂತ್ರಿಕರಾಗಿ ನಟಿಸಿರುವ ತೆಲುಗು ನಟ ಭಾನುಚಂದರ್‌ ಆಡಿಯೋ ಬಿಡುಗಡೆ ಮಾಡಿ ಮಾತಿಗಿಳಿದರು. “ಶಿರಡಿ ಸಾಯಿ ಬಾಬಾ ಅವರ ಕುರಿತಂತೆ ಯಾವುದೇ ಭಾಷೆಯಲ್ಲಿ ಚಿತ್ರ ಮಾಡಿದರೂ, ಭಕ್ತರು ಪ್ರೀತಿಯಿಂದಲೇ ನೋಡುತ್ತಾರೆ. ಇಂತಹ ಚಿತ್ರಗಳಲ್ಲಿ ಕೆಲಸ ಮಾಡಲು ಪುಣ್ಯ ಮಾಡಿರಬೇಕು. ಅದರಲ್ಲೂ ಈ ಚಿತ್ರದ ನಿರ್ಮಾಪಕರು 18 ತಿಂಗಳ ಕಾಲ ಮಾಂಸಾಹಾರ ತ್ಯಜಿಸಿ, ಸಾಯಿರಾಂ ಪಾತ್ರದಲ್ಲಿ ನಟಿಸಿ, ಜೀವ ತುಂಬಿದ್ದಾರೆ. ಈ ಚಿತ್ರ ಎಲ್ಲರಿಗೂ ಗೆಲುವು ಕೊಡಲಿ’ ಎಂದು ಶುಭ ಹಾರೈಸಿದರು ಅವರು.

Advertisement

ನಿರ್ಮಾಪಕ ಮಚ್ಛಾ ರಾಮಲಿಂಗಾರೆಡ್ಡಿ ಅವರಿಗೆ ಶಿರಡಿ ಸಾಯಿ ಕುರಿತು ಚಿತ್ರ ಮಾಡುವ ಆಸೆ, “ಪ್ರತ್ಯಕ್ಷ ದೈವ ಶಿರಡಿ ಸಾಯಿ’ ಮೂಲಕ ಈಡೇರಿದೆಯಂತೆ. “ಶ್ರೀ ಬಾಬಾ ಅವರು ಸಮಾಧಿಯಾಗಿ ಶತಕ ಪೂರೈಸಿದ ಸಂದರ್ಭದಲ್ಲಿ ಈ ಚಿತ್ರ ಮಾಡಲಾಗಿದೆ. ಕನ್ನಡ, ತೆಲುಗು ಹಾಗು ತಮಿಳು ಭಾಷೆಯಲ್ಲಿ ಚಿತ್ರ ತಯಾರಾಗಿದೆ. ಮೊದಲು ಕನ್ನಡ ಭಾಷೆಯಲ್ಲಿ ಬಿಡುಗಡೆ ಮಾಡಿ, ನಂತರದ ದಿನಗಳಲ್ಲಿ ಬೇರೆ ಭಾಷೆಯಲ್ಲಿ ಬಿಡುಗಡೆ ಮಾಡಲಾಗುವುದು. ಮಾರ್ಚ್‌ ವೇಳೆಗೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವುದಾಗಿ ಹೇಳಿಕೊಂಡರು ಅವರು.

ಲಹರಿ ವೇಲು ಅವರು ಸಹ ಬಾಬಾ ಅವರ ಭಕ್ತರಂತೆ. ಅವರೊಮ್ಮೆ, ಶಿರಡಿ ಮಂದಿರಕ್ಕೆ ಭೇಟಿ ನೀಡಿ, ಸಾಯಿ ಬಾಬಾ ಮುಂದೆ ನಿಂತಾಗ, ಅವರಿಗೆ ಗೊತ್ತಾಗದೆಯೇ ಕಣ್ಣಲ್ಲಿ ನೀರು ಬಂದಿತಂತೆ. ಅದೆಲ್ಲವೂ ಬಾಬಾ ಅವರ ಅದ್ಭುತ ಶಕ್ತಿ ಕಾರಣ ಎಂಬುದು ಲಹರಿ ವೇಲು ಮಾತು. 

ನಿರ್ದೇಶಕ ಕೆ.ಎಸ್‌.ನಾರಾಯಣ ಅವರು ಸಿನಿಮಾ ಬಗ್ಗೆ ಹೆಚ್ಚೇನೂ ಮಾತನಾಡಲಿಲ್ಲ. ಈ ಚಿತ್ರ ಮಾಡಲು ಅವಕಾಶ ಸಿಕ್ಕಿದ್ದೇ ಅದೃಷ್ಟ ಅಂದರು. ಹಿರಿಯ ನಟ ರಾಜೇಶ್‌ ಅವರು ಚಿತ್ರತಂಡಕ್ಕೆ ಶುಭಕೋರಿದರು. ಹಿರಿಯ ನಟಿ ಸೀತಾ, ವಿಜೇತ, ಆಂಧ್ರದ ಮಾಜಿ ಸಚಿವ ರಘುವೀರ್‌ರೆಡ್ಡಿ, ನಟಿ ರೂಪಿಕಾ, ರಾಜಾರೆಡ್ಡಿ ಸೇರಿದಂತೆ ಇತರರು ಸಮಾರಂಭದಲ್ಲಿ ಹಾಜರಿದ್ದರು. ಕಿಶನ್‌ ಕವಾಡಿಯ ಸಂಗೀತ ನಿರ್ದೇಶನದ ಆರು ಹಾಡಿನ ತುಣುಕುಗಳನ್ನು ಪ್ರದರ್ಶಿಸಲಾಯಿತು. ಇದಕ್ಕೂ ಮುನ್ನ ಸುಮಾರು 30 ಕ್ಕೂ ಹೆಚ್ಚು ಮಹಿಳೆಯರು ವೇದಿಕೆ ಮೇಲೆ ಸಾಯಿರಾಂ ಭಜನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next