Advertisement
ನಗರಸಭೆ ವ್ಯಾಪ್ತಿಯ 31 ವಾರ್ಡ್‌ಗಳ ಘನತ್ಯಾಜ್ಯವನ್ನು ಹಸಿಕಸ, ಒಣಕಸ ಹಾಗೂ ಪ್ಲಾಸ್ಟಿಕ್‌ಗಳನ್ನು ವಿಂಗಡಿಸಿ ನಗರ ಸಮೀಪದ ಶಿರವಾಡ ವ್ಯಾಪ್ತಿಯ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಲಾಗುತ್ತಿದೆಯಾದರೂ, ತ್ಯಾಜ್ಯವನ್ನು ಸರಿಯಾಗಿ ವಿಂಗಡಿಸಲಾಗುತ್ತಿಲ್ಲ. ಘನತ್ಯಾಜ್ಯ ಘಟಕದ ಗೋಡೆ ಒಡೆದು ತ್ಯಾಜ್ಯ ನೀರು ಹರಿಯುತ್ತಿದೆ. ಅದು ಬಾವಿ ಹಳ್ಳಕ್ಕೆ ಸೇರುತ್ತಿದೆ. ರೋಗ ರುಜಿನಿ ಹರಡುವ ಭೀತಿ ಎದುರಾಗಿದೆ.
Related Articles
Advertisement
2018 ರಿಂದ ಘನತ್ಯಾಜ್ಯ ವಿಲೇವಾರಿ ಘಟಕ ಶಿರವಾಡ ಗ್ರಾಪಂ ಪಾಲಿಗೆ ಮಗ್ಗಲ ಮುಳ್ಳಾಗಿದೆ. 2018 ರಿಂದ ಅಲ್ಲಿಂದ ಸಮಸ್ಯೆ ಆರಂಭವಾದುದು ಆಗಾಗ ಪ್ರತಿಧ್ವನಿಸುತ್ತಲೇ ಇದೆ.
ಶಿರವಾಡ ಗ್ರಾಮಸ್ಥರು ಹೇಳುವುದೇನು: ಘನತ್ಯಾಜ್ಯ ಘಟಕದಲ್ಲಿ ವಿಂಗಡಿಸಿ ಹಾಕುತ್ತಿಲ್ಲ. ಸತ್ತ ಪ್ರಾಣಿಗಳನ್ನು ಸಹ ತ್ಯಾಜ್ಯ ಘಟಕಕ್ಕೆ ತಂದು ಎಸೆಯಲಾಗುತ್ತಿದೆ. ಕೊಳಚೆ ನೀರು ಮಳೆ ನೀರಿನ ಜೊತೆ ಸೇರಿ ಬಾವಿಗಳನ್ನು ಮಲೀನ ಮಾಡಿದೆ. ಘಟಕದಿಂದ ವಾಸನೆ ಬರುತ್ತಿದೆ. ಸೊಳ್ಳೆ ಮತ್ತು ನೊಣಗಳು ಹೆಚ್ಚಿವೆ. ಆರೋಗ್ಯದ ಭಯ ಹುಟ್ಟಿದೆ. ಇದನ್ನು ಸರಿಯಾಗಿ ನಿರ್ವಹಿಸಿ ಇಲ್ಲವೇ ಸ್ಥಳಾಂತರಿಸಿ ಎಂದು ನಗರಸಭೆ ಮುಂದೆ ಬೇಡಿಕೆ ಇಟ್ಟಿದ್ದಾರೆ.
ಜಿಲ್ಲಾಧಿಕಾರಿಗಳನ್ನು ಕಂಡ ಜನಪ್ರತಿನಿಧಿಗಳು: ಶಿರವಾಡ ಘನತ್ಯಾಜ್ಯ ಘಟಕದ ನೈಜ ಸ್ಥಿತಿಯ ವಿಡಿಯೋವನ್ನು ಗ್ರಾಪಂ ಅಧ್ಯಕ್ಷೆ ಗಂಗಮ್ಮ ಹಾಗೂ ಸದಸ್ಯರು ಜಿಲ್ಲಾಧಿಕಾರಿ ಡಾ| ಹರೀಶ್ ಕುಮಾರ ಅವರಿಗೆ ಮಂಗಳವಾರ ತೋರಿಸಿದರು.
ಘನತ್ಯಾಜ್ಯ ಘಟಕದ ಕೊಳಚೆ ನೀರು ಹಾಗೂ ಸತ್ತ ಪ್ರಾಣಿಗಳು ಜನರಲ್ಲಿ ರೋಗ ಹರಡುವ ಭೀತಿ ಮೂಡಿಸಿವೆ. ಇದಕ್ಕೆ ತಕ್ಷಣ ಸ್ಪಂದಿಸುವಂತೆ ಜಿ.ಪಂ ಸದಸ್ಯೆ ಚೈತ್ರಾ ಕೋಠಾರಕರ್ ವಿನಂತಿಸಿದರು.
ಜನ ವಿರೋಧ ಬಂದ ಮೇಲೆ ನಗರಸಭೆ ಹಲವು ಕ್ರಮಕ್ಕೆ ಮುಂದಾಗುತ್ತದೆ. ನಿರಂತರ ನಿರ್ವಹಣೆ ಇಲ್ಲ ಎಂದು ಜಿಲ್ಲಾಡಳಿತದ ಗಮನಸೆಳೆದರು.
ವಿಡಿಯೋ ವೀಕ್ಷಿಸಿದ ಜಿಲ್ಲಾಧಿಕಾರಿಗಳು ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿಗೆ ತಕ್ಷಣ ಸ್ಥಳ ವೀಕ್ಷಣೆಗೆ ಆದೇಶಿಸಿದರು.
ವಾರದಲ್ಲಿ ಕ್ರಮ: ಶಿರವಾಡ ಘನತ್ಯಾಜ್ಯ ಸಮಸ್ಯೆ ಅರಿತ ಜಿಲ್ಲಾಧಿಕಾರಿಗಳು, ಘನತ್ಯಾಜ್ಯ ನಿರ್ವಹಣೆ ಈಗ ಸಮಸ್ಯೆಯಾಗುತ್ತಿದೆ. ಅತ್ಯುತ್ತಮ ನಿರ್ವಹಣೆ ಮೂಲಕ ಘನತ್ಯಾಜ್ಯ ವಿಲೇವಾರಿ ಘಟಕಗಳು ಬೇಕು ಎಂಬ ಭಾವನೆ ಗ್ರಾಮಸ್ಥರಲ್ಲಿ ಮೂಡಿಸಬೇಕಿದೆ. ಕುಮಟಾದ ಕಸವನ್ನು ಪಕ್ಕದ ಹಳ್ಳಿಯವರು ತೆಗೆದುಕೊಳ್ಳಲು ನಿರಾಕರಿಸುತ್ತಿದ್ದಾರೆ. ಬರುವ ದಿನಗಳಲ್ಲಿ ಮೂರು ನಾಲ್ಕು ಗ್ರಾಮಗಳಿಗೆ ಒಂದರಂತೆ ಘನತ್ಯಾಜ್ಯ ಘಟಕಗಳ ಸ್ಥಾಪನೆಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ. ಇದಕ್ಕಾಗಿ ಹಣ ಸಹ ಬಿಡುಗಡೆಯಾಗುತ್ತಿದೆ. ಹಾಗಾಗಿ ಇರುವ ಘನತ್ಯಾಜ್ಯ ಘಟಕಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಿ ಜನರಲ್ಲಿ ವಿಶ್ವಾಸ ಮೂಡಿಸಬೇಕಿದೆ ಎಂದರು.
ಶಿರವಾಡ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ವಹಣೆಯೇ ಇಲ್ಲ. ಅಲ್ಲಿ ಕಸ ವಿಂಗಡಿಸುತ್ತಿಲ್ಲ. ಸತ್ತ ಪ್ರಾಣಿಗಳನ್ನು ಹಾಗೆ ಬಿಸಡಲಾಗುತ್ತಿದೆ. •ಚೈತ್ರಾ ಕೋಠಾರಕರ್,ಜಿ.ಪಂ ಸದಸ್ಯೆ.
ಒಂದು ವಾರದಲ್ಲಿ ಶಿರವಾಡ ಘನತ್ಯಾಜ್ಯ ವಿಲೇವಾರಿ ಘಟಕದ ಸಮಸ್ಯೆ ಬಗೆಹರಿಸಲಾಗುವುದು. ನಿರ್ವಹಣೆಗೆ ಬೇಕಾದ ಅನುದಾನ ಬಿಡುಗಡೆ ಮಾಡಲಾಗುವುದು. ಸಮಸ್ಯೆ ಅರಿಯಲು ಯೋಜನಾ ನಿರ್ದೇಶಕರಿಗೆ ಸೂಚಿಸಲಾಗಿದೆ.•ಡಾ| ಹರೀಶ್‌ಕುಮಾರ್ ಜಿಲ್ಲಾಧಿಕಾರಿ ಕಾರವಾರ
•ನಾಗರಾಜ ಹರಪನಹಳ್ಳಿ