ಶಿರಸಿ: ಹಾಲು ಹಾಗೂ ಹಾಲಿನ ಉತ್ಪನ್ನಗಳ ಮೂಲಕ ಮನೆಮಾತಾಗಿರುವ ನಂದಿನಿಯ ಒಂದು ತಿಂಗಳ ಸಿಹಿ ಉತ್ಸವ ಮಂಗಳವಾರ ನಗರದಲ್ಲಿ ಆರಂಭವಾಯಿತು.
ಉತ್ಸವ ಪ್ರಯುಕ್ತ ಸುಮಾರು 80 ಕ್ಕೂ ಹೆಚ್ಚು ಸಿಹಿ ಉತ್ಪನ್ನಗಳನ್ನು ಶೇ.20ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇಲ್ಲಿಯ ಅಶ್ವಿನಿ ವೃತ್ತದಲ್ಲಿರುವ ಕೆಎಂಎಫ್ ನಂದಿನ ಪಾರ್ಲರ್‌ನಲ್ಲಿ ಸಿಹಿ ಉತ್ಸವಕ್ಕೆ ಸಹಾಯಕ ಆಯುಕ್ತ ದೇವರಾಜ್ ಆರ್ ಚಾಲನೆ ನೀಡಿ ಮಾತನಾಡಿ ನಂದಿನಿ ನೆನಪಾದಾಗಲೆಲ್ಲಾ ಪುನೀತ ರಾಜಕುಮಾರ ಅವರ ನೆನಪಾಗುತ್ತದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಈ ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು.
ಯಾವುದೇ ಕಲಬೆರಕೆ ಇಲ್ಲದ ನಂದಿನ ಉತ್ಪನ್ನ ಬಳಸಿದರೆ ಆರೋಗ್ಯಕ್ಕೂ ಒಳ್ಳೆಯದು, ಸರಕಾರದ ಉದ್ಯಮದ ಬೆಳವಣಿಗೆಯೂ ಆಗುತ್ತದೆ. ಉದ್ಯೋಗವೂ ದೊರೆಯುತ್ತದೆ ಎಂದರು.
ಧಾರವಾಡ ಹಾಲು ಒಕ್ಕೂಟದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಮಾತನಾಡಿ, ನಂದಿನಿ ಸಿಹಿ ಉತ್ಸವ ಒಂದು ತಿಂಗಳು ಕಾಲ ನಡೆಯಲಿದೆ. ಈ ಸಿಹಿ ಉತ್ಸವದಲ್ಲಿ ಆಗುವ ವ್ಯಾಪಾರದ ಲಾಭವನ್ನು ರೈತರಿಗೆ ಹಸ್ತಾಂತರಿಸಲಾಗುತ್ತದೆ. ಜಿಲ್ಲೆಯಲ್ಲಿ ಸುಮಾರು 30 ಲಕ್ಷ ರೂ.,ಮೊತ್ತದ ಹಾಲು ಹಾಗೂ ಹಾಲಿನ ಉತ್ಪನ್ನಗಳು ನಿತ್ಯ ವ್ಯಾಪಾರವಾಗುತ್ತದೆ ಎಂದರು.
ಡಿವೈಎಸ್‌ಪಿ ಗಣೆಶ ಕೆ.ಎಲ್, ತಹಶೀಲ್ದಾರ ಶ್ರೀಧರ ಮುಂದಲಮನಿ, ನಂದಿನ ಪಾರ್ಲರ್‌ನ ಪ್ರಮುಖ ಗಜಾನನ ಹೆಗಡೆ, ದಾರವಾಡ ಹಾಲು ಒಕ್ಕೂಟದ ಬಿಜೂರು, ಬಸವರಾಜ, ಶರಣು ಮೆಣಸಿನಕಾಯಿ, ಕೃಷ್ಣ ಇತರರಿದ್ದರು.
ಹೈನುಗಾರಿಕೆಗೆ ಒಳ್ಳೆಯ ಅವಕಾಶ ಇರುವುದರಿಂದ ರೈತರು ಇದರಿಂದ ವಿಮುಖರಾಗದೇ ಹೈನೋದ್ಯಮದ ಬೆಳವಣಿಗೆಗೆ
ಕೈ ಜೋಡಿಸಿಬೇಕು.
*ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ