Advertisement

ಶಂಕರರ ಪರಂಪರೆ ಉಳಿಸಬೇಕಿದೆ

12:19 PM Jan 14, 2019 | |

ಶಿರಸಿ: ಶಂಕರ ಪರಂಪರೆ, ಮಠ, ಧರ್ಮ, ಸಮಾಜ ಒಡೆಯದೇ ಒಂದಾಗಿ ಉಳಿಯಬೇಕು. ಶಂಕರ ಪರಂಪರೆ ಉಳಿಸಬೇಕು ಎಂಬುದೇ ನಮ್ಮ ಆಶಯ. ಯಾರ ವಿರುದ್ಧವೂ ಅಲ್ಲ ಎಂದು ಸೋಂದಾ ಸ್ವರ್ಣವಲ್ಲೀ ಮಠಾಧಿಧೀಶ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ನುಡಿದರು. ಅವರು ರವಿವಾರ ತಾಲೂಕಿನ ಸ್ವರ್ಣವಲ್ಲೀಯಲ್ಲಿ ಅಖೀಲ ಹವ್ಯಕ ಒಕ್ಕೂಟ ಸಹಕಾರದಲ್ಲಿ ನಡೆದ ಶಂಕರ ನಮನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನುಡಿದರು.

Advertisement

ಶಂಕರರ ಪೀಠ, ಧರ್ಮ ಉಳಿಸಲು ಎಲ್ಲರೂ ಜೊತೆಯಗಬೇಕು. ಮಠವವೊಂದರ ಪೀಠಾಧಿಪತಿಗಳ ವಿರುದ್ಧ ಇರುವ ಪ್ರಕರಣ ನ್ಯಾಯಾಲಯದಲ್ಲಿ ಇದ್ದು, ಈ ಪ್ರಕರಣ ಕೂಡ ವಿಳಂಬ ಮಾಡದೇ ಆದಷ್ಟು ಬೇಗ ನ್ಯಾಯಾಲಯವು ನಿರ್ಣಯಕ್ಕೆ ಬರಬೇಕು ಎಂದು ಆಗ್ರಹಿಸಿದ ಅವರು, ಯಾವ ಮಠ ಪತನವಾಗುತ್ತಿದೆಯೋ ಅದರ ಏಳ್ಗೆಯ ಜೊತೆ ಶಂಕರ ತತ್ವ ಉಳಿಸಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು ಸ್ಪಷ್ಟಪಡಿಸಿದರು.

ಭಗವತ್ಪಾದರ ಶಿಷ್ಯರು ಅವರ ತತ್ವ, ಮಠಗಳು ಪತನ ಆಗುವದನ್ನು ತಪ್ಪಿಸಬೇಕು. ಹವ್ಯಕ ಮಹಾಸಭೆ ಪತಿತರನ್ನು ಬೆಂಬಲಿಸುತ್ತಿದೆ. ಅಖೀಲ ಹವ್ಯಕ ಮಹಾಸಭೆ ಸಮಾವೇಶಕ್ಕೆ ಹೋಗಿಲ್ಲ, ಕೊನೇ ಕ್ಷಣದಲ್ಲಿ ಯಾಕೆ ನಿರ್ಧಾರ ಮಾಡಿದರೆ ಹೇಗೆ ಎಂಬ ಮಾತುಗಳೂ ಬಂದವು. ಮೊದಲು ನಮಗೂ ಗೊಂದಲ ಇತ್ತು. ಒಂದು ಹಂತದಲ್ಲಿ ಸಮಾವೇಶದಲ್ಲಿ ತಮಗೆ ಬೇಕಾದಂತೆ ನಿರ್ಣಯ ಮಾಡುತ್ತಾರೆ ಎಂಬುದು ಗೊತ್ತಾಯಿತು. ನಾಲ್ಕನೇ ನಿರ್ಣಯ ನೋಡಿದಾಗ ಹೋಗದೇ ಇರುವುದಕ್ಕೆ ಮಹಾಸಭೆಯೇ ಉತ್ತರಿಸಿದೆ. ಹೋಗಿದ್ದರೆ ಅನ್ಯಾಯಕೆ ಬೆಂಬಲ ಕೊಟ್ಟಂತೆ ಆಗುತ್ತಿತ್ತು ಎಂದರು.

ಇಂದಿನ ಶಂಕರ ನಮನ ಹವ್ಯಕ ಸಮಾವೇಶಕ್ಕೆ ಪ್ರತಿಯಲ್ಲ. ಹವ್ಯಕ ಮಹಾಸಭೆ ಒಂದಲ್ಲ ಒಂದು ದಿನ ಸರಿ ದಾರಿಗೆ ಬಂದಾಗ ನಾವೂ ಮಹಾಸಭೆ ಜೊತೆ ಸೇರುತ್ತೇವೆ ಎಂದು ಅಖೀಲ ಹವ್ಯಕ ಒಕ್ಕೂಟ ಕೂಡ ಹೇಳಿದೆ ಎಂದೂ ಸ್ಪಷ್ಟಪಡಿಸಿದ ಶ್ರೀಗಳು, ಇಡೀ ಜಗತ್ತಿನಲ್ಲಿ ತಮ್ಮದು ಒಂದೇ ಮಠ ಅವಿಚ್ಛಿನ್ನ ಪರಂಪರೆ ಮಠ ಎನ್ನುತ್ತಾರೆ. ಆದರೆ ಅದೊಂದೇ ಅಲ್ಲ. ಶಂಕರರ ಪರಂಪರೆಯಲ್ಲಿ ಯಾವೆಲ್ಲ ಶೃಂಗೇರಿ, ಕಾಂಚಿ ಸೇರಿದಂತೆ ಮಠಗಳು ಇವೆಯೊ ಅವೆಲ್ಲ ಅವಿಚ್ಛಿನ್ನವೇ ಆಗಿದೆ. ತಮ್ಮದೊಂದೇ ಹೇಳುವುದು ಸರಿಯಲ್ಲ ಎಂದ ನುಡಿದ ಶ್ರೀಗಳು, ಶಂಕರ ನಮನ ಶಂಕರ ಭಗವತ್ಪಾದಕರಿಗೆ ನೇರವಾಗಿಯೊ, ಪರೋಕ್ಷವಾಗಿಯೋ ನಮಿಸಬೇಕು ಎಂದರು.

ಯಡತೊರೆ ಶ್ರೀಶಂಕರ ಭಾರತೀ ಸ್ವಾಮೀಜಿಗಳು ಆಶೀರ್ವಚನ ನುಡಿದು, ಆದಿ ಶಂಕರಾಚಾರ್ಯರರು ತೋರಿದ ಧರ್ಮ ಮಾರ್ಗದಲ್ಲಿ ಮಠ ಪರಂಪರೆಯನ್ನು ಒಯ್ಯಬೇಕು. ಹವ್ಯಕ ಮಹಾಸಭೆ ಧರ್ಮ ಸಂವರ್ನಿ ಸಭಾದ ನಿರ್ಣಯ ಖಂಡಿಸಿ ಹೇಳಿದ್ದೇನು? ಎಂದೂ ಕೇಳಿದರು. ಆರೋಪಿತರು ಕೆಳಗಿಳಿದು ಹೊಸ ಪೀಠಾಧಿಪತಿಗಳಾದರೆ ಹೊರಗೆ ಉಳಿದ ಮಠವನ್ನೂ ಧರ್ಮಸಂವರ್ಧನಿ ಸಭಾ ಸೇರಿಕೊಳ್ಳುತ್ತದೆ ಎಂದೂ ಹೇಳಿದರು. ಎಡನೀರು ಮಠದ ಶ್ರೀಕೇಶವಾನಂದ ಭಾರತೀ ಸ್ವಾಮೀಜಿ, ಪೀಠದಲ್ಲಿ ಕುಳಿತವರು ಸರಿಯಾಗಿ ನಡೆದುಕೊಳ್ಳಬೇಕು ಎಂದು ಹೇಳಿದರು.

Advertisement

ಸನ್ಮಾನಿತ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಡಿ.ಶ್ಯಾಂ ಭಟ್ಟ, ಇಲ್ಲಿ ಭಾಗವಹಿಸಿದವರು ಎಷ್ಟು ಎಂಬುದಕ್ಕಿಂತ ಎಷ್ಟು ನೈತಿಕತೆ ಇದೆ ಎಂಬುದು ಮುಖ್ಯ. ನೈತಿಕತೆ, ಧರ್ಮ ಮುಖ್ಯ. ಶಂಕರ ತತ್ವ ತಿಳಿದವರು ಯಾರೂ ನಾನು ಅಭಿನವ ಶಂಕರ ಎಂದು ಹೇಳಿಕೊಳ್ಳುವದಿಲ್ಲ ಎಂದರು.

ಶೃಂಗೇರಿ ಮಠದ ಆಡಳಿತಾಧಿಕಾರಿ ಪದ್ಮಶ್ರೀ ಡಾ| ವಿ.ಆರ್‌ ಗೌರಿಶಂಕರ, ಧರ್ಮಬಂಧುಗಳು ಒಂದೆಡೆಗೆ ಸೇರುವದೇ ಪುಣ್ಯ. ಶಂಕರ ಪೀಠದ ಶಿಷ್ಯರು, ಗುರುಗಳು ಹೇಗಿರಬೇಕು ಎಂಬುದನ್ನೂ ಬರೆದಿಟ್ಟಿದ್ದಾರೆ. ಆದರೆ, ನಮ್ಮ ಪರಿಸ್ಥಿತಿ ಜಗದ್ಗುರು ಎಷ್ಟು ಇದ್ದಾರೆ ಎಂಬುದು ಗೊತ್ತಿಲ್ಲ. ಧರ್ಮದಂತೆ ನಡೆದು ಮಾರ್ಗದರ್ಶನ ಮಾಡುವ ಗುರುಗಳು ಸಿಗಬೇಕು ಎಂದರು.

ಪ್ರಸ್ತಾವಿಕ ಮಾತನಾಡಿದ ಅಖೀಲ ಹವ್ಯಕ ಒಕ್ಕೂಟದ ಅಧ್ಯಕ್ಷ ಅಶೋಕ ಭಟ್ಟ, ಆಚಾರ್ಯ ಶಂಕರ ತತ್ವಗಳನ್ನು ಅನುಷ್ಠಾನ ಮಾಡಿದರೆ ನಾವು ನಮನ ಸಲ್ಲಿಸಿದಂತೆ. ಸತ್ಯ ಧರ್ಮ ಯಾವತ್ತೂ ಸೋಲೋದಿಲ್ಲ ಎಂದು ಹೇಳಿದರು.

ಮಠದ ಅಧ್ಯಕ್ಷ ವಿಘ್ನೕಶ್ವರ ಬೊಮ್ಮನಳ್ಳಿ ಸ್ವಾಗತಿಸಿದರು. ಆರ್‌.ಎಸ್‌.ಹೆಗಡೆ ಭೈರುಂಬೆ ವಂದಿಸಿದರು. ಸುರೇಶ ಹಕ್ಕಿಮನೆ, ಕೆ.ವಿ.ಭಟ್ಟ ನಿರ್ವಹಿಸಿದರು.ಸಾಧನೆ ಮಾಡಿದ ಜಿ.ಮಹಾಬಲೇಶ್ವರ ಭಟ್ಟ ಹಿತ್ಲಳ್ಳಿ, ಅನಂತ ಶರ್ಮಾ ಭುವನಗಿರಿ, ಟಿ.ಶ್ಯಾಂ ಭಟ್, ಎಂ.ಆರ್‌. ಹೆಗಡೆ ಗೊಡವೆಮನೆ ಅವರನ್ನು ಸಮ್ಮಾನಿಸಿ ಸತ್ಕರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next