Advertisement

ಶಿವಮೊಗ್ಗಕ್ಕೆ ಅಭಯಾರಣ್ಯ ಸೇರ್ಪಡೆಗೆ ವಿರೋಧ

12:50 PM Jun 08, 2019 | Naveen |

ಶಿರಸಿ: ಉತ್ತರ ಕನ್ನಡದ ಸಂರಕ್ಷಿತ ಅರಣ್ಯವನ್ನು ಶಿವಮೊಗ್ಗ ಜಿಲ್ಲೆಗೆ ಸೇರಿಸುವ ಹುನ್ನಾರ ನಡೆದಿದೆ. ಶರಾವತಿ ಕಣಿವೆ ಅಭಯಾರಣ್ಯಕ್ಕೆ ಅಘನಾಶಿನಿ ಸಂರಕ್ಷಿತ ಪ್ರದೇಶ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ರಾಜ್ಯ ವನ್ಯಜೀವಿ ಅರಣ್ಯ ಇಲಾಖೆ ಸದ್ಯದಲ್ಲೇ ಅಧಿಕೃತ ಘೋಷಣೆ ಮಾಡಲಿದೆ ಎಂದು ವೃಕ್ಷಲಕ್ಷ ಆಂದೋಲನದ ಮುಖ್ಯಸ್ಥ ಅನಂತ ಅಶೀಸರ ಬಹಿರಂಗಗೊಳಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಉತ್ತರ ಕನ್ನಡದ ಅಘನಾಶಿನಿ ಅಭಯಾರಣ್ಯವನ್ನು ಶಿವಮೊಗ್ಗಕ್ಕೆ ಸೇರ್ಪಡೆ ಮಾಡುವ ಪ್ರಕ್ರಿಯೆಯನ್ನು ಸಚಿವರು, ಸಂಸದರು, ಶಾಸಕರು ತಡೆಯಬೇಕು ಎಂದೂ ಹಕ್ಕೊತ್ತಾಯ ಮಾಡಿದ್ದಾರೆ. ಈ ಕುರಿತು ರಾಜ್ಯ ವನ್ಯಜೀವಿ ಮಂಡಳಿ ಅಧ್ಯಕ್ಷರಿಗೆ ಜಿಲ್ಲಾ ಅರಣ್ಯ ಅಧಿಕಾರಿ ಮೂಲಕ ಜೂ.11ರಂದು ಶಿರಸಿಯಲ್ಲಿ ಅಹವಾಲು ಸಲ್ಲಿಕೆ ಕೂಡ ಮಾಡಲಾಗುತ್ತದೆ ಎಂದೂ ತಿಳಿಸಿದ್ದಾರೆ.

ಕಳೆದ 4 ತಿಂಗಳಲ್ಲಿ ಚುನಾವಣೆಯಲ್ಲಿ ನಿರತವಾಗಿರುವ ಹೊತ್ತಿಗೆ ರಾಜ್ಯ ವನ್ಯಜೀವಿ ಅರಣ್ಯ ಇಲಾಖೆ ಉತ್ತರ ಕನ್ನಡ ಜಿಲ್ಲೆಯ ಅರಣ್ಯಗಳನ್ನು ಶಿವಮೊಗ್ಗ ಅರಣ್ಯ ಇಲಾಖೆಗೆ ಸೇರ್ಪಡೆ ಮಾಡುವ ಪ್ರಸ್ತಾವನೆ ತಯಾರಿಗೆ ಮುಂದಾಗಿತ್ತು. 2019, ಜ.9ರಂದು ರಾಜ್ಯ ವನ್ಯಜೀವಿ ಮಂಡಳಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ಸೇರಿತ್ತು. ಅಂದು ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯ ಶರಾವತಿ ಅಭಯಾರಣ್ಯಕ್ಕೆ ಕೆನರಾ ಅರಣ್ಯ ವೃತ್ತದ ಅಘನಾಶಿನಿ ಕಣಿವೆಯ 30000 ಹೆಕ್ಟೇರ್‌ ಅರಣ್ಯ ಪ್ರದೇಶ ಸೇರ್ಪಡೆ ಮಾಡುವ ಪ್ರಸ್ತಾವನೆಯನ್ನು ಅರಣ್ಯ ಇಲಾಖೆ ಮಂಡಿಸಿ ಅನುಮೋದನೆ ಕೂಡ ಪಡೆದಿದೆ. ವನ್ಯಜೀವಿ ಇಲಾಖೆ ಮಾರ್ಚ್‌, ಏಪ್ರಿಲ್ ತಿಂಗಳಲ್ಲಿ ಈ ಕುರಿತ ವಿವರ ವರದಿಯನ್ನೂ ಸಿದ್ಧಗೊಳಿಸಿದೆ. ಬೆಂಗಳೂರು, ಶಿವಮೊಗ್ಗ, ಜೋಗಗಳಲ್ಲಿ ಅರಣ್ಯ ಅಧಿಕಾರಿಗಳ ಸಭೆ ನಡೆಸಿತು. ನಕಾಶೆ, ತಾಂತ್ರಿಕ ಪ್ರಸ್ತಾವನೆ ಅಖೈರುಗೊಳಿಸಿದೆ ಎಂದು ಅಶೀಸರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೀಗ ಅಧಿಕೃತ ಸರ್ಕಾರಿ ಆದೇಶ ಹೊರಡಿಸಲು ವನ್ಯಜೀವಿ ಅರಣ್ಯ ಇಲಾಖೆ ಮುಂದಾಗಿದೆ. ಕರಡು ನೋಟಿಫಿಕೇಶನ್‌ ಪ್ರಕಾರ ಶರಾವತಿ ಅಭಯಾರಣ್ಯ ಸಾಗರ ತಾಲೂಕು ವ್ಯಾಪ್ತಿಯಲ್ಲಿದೆ. ಈಗ ಉ.ಕ ಜಿಲ್ಲೆಯ ಅರಣ್ಯಗಳನ್ನು ಸೇರಿಸಿ ಶರಾವತಿ ಸಿಂಗಳೀಕ ಅಭಯಾರಣ್ಯ ಎಂದು ಘೋಷಿಸಲು ಸರ್ಕಾರ ಹೊರಟಿದೆ. ಸಾಗರ ತಾಲೂಕಿನ 3000 ಹೆಕ್ಟೇರ್‌ ಅರಣ್ಯ ಪ್ರದೇಶಗಳು ಶರಾವತಿ ಅಭಯಾರಣ್ಯಕ್ಕೆ ಸೇರ್ಪಡೆ ಆಗಲಿವೆ. ಜೊತೆಗೆ ಉ.ಕ ಜಿಲ್ಲೆಯ ಅಘನಾಶಿನಿ ಸುಮಾರು 30000 ಹೆಕ್ಟೇರ್‌ ಸಂರಕ್ಷಿತ ಪ್ರದೇಶವನ್ನು ಶರಾವತಿ ಅಭಯಾರಣ್ಯಕ್ಕೆ ಸೇರ್ಪಡೆ ಮಾಡುವ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ನೀಡಿದೆ ಎಂದೂ ಹೇಳಿದ್ದಾರೆ.

2012ರಲ್ಲಿ ಪಶ್ಚಿಮಘಟ್ಟ ಕಾರ್ಯಪಡೆ ಶಿಫಾರಸಿನಂತೆ ಅಘನಾಶಿನಿ ಸಿಂಗಳೀಕ ಸಂರಕ್ಷಿತ ಪ್ರದೇಶ ಎಂದು ವನ್ಯಜೀವಿ ಕಾಯಿದೆ ಅಡಿಯಲ್ಲಿ ಘೋಷಿಸಲಾಗಿತ್ತು. ಇದನ್ನು ಸ್ಥಳೀಯ ಜನತೆಯ ಕೋರಿಕೆಯಂತೆ, ಅಭಿಪ್ರಾಯ, ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಈಗ ಏಕಪಕ್ಷೀಯವಾಗಿ, ಸ್ಥಳೀಯರು, ಜನಪ್ರತಿನಿಧಿಗಳು, ಪರಿಸರ, ವನ್ಯಜೀವಿ ಕಾರ್ಯಕರ್ತರ ಅಭಿಪ್ರಾಯ ಕೇಳದೆ ಈ ನಿರ್ಧಾರ ಕೈಗೊಂಡಿದ್ದು ಸರಿಯಲ್ಲ ಎಂದು ವೃಕ್ಷಲಕ್ಷ ಅಭಿಪ್ರಾಯ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next