Advertisement

ಬನವಾಸಿಯ ರಾಜನ ಅಳಲು

03:29 PM Apr 11, 2020 | Naveen |

ಶಿರಸಿ: ಬನವಾಸಿ ಪ್ರಾಂತದಲ್ಲಿ ಬೆಳೆಯುವ ರಾಜಾ ಅನಾನಸ್‌ಗೆ ದೆಹಲಿ, ಪಂಜಾಬ್‌ ಮಾರುಕಟ್ಟೆಯಲ್ಲಿ ಅತ್ಯಧಿಕ ಬೇಡಿಕೆ. 1970ರ ದಶಕದಲ್ಲಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಸಲಹೆ ಮೇರೆಗೆ ಆರಂಭಗೊಂಡ ಅನಾನಸ್‌ ಬೇಸಾಯ ಈ ಬಾರಿ ಕೊರೊನಾ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿದೆ.

Advertisement

ಬನವಾಸಿ ಮಾತ್ರವಲ್ಲದೇ ಶಿವಮೊಗ್ಗ ಜಿಲ್ಲೆಯ ಸೊರಬ, ಸಾಗರ ಪ್ರಾಂತದಲ್ಲೂ ಹೆಚ್ಚು ಬೆಳೆಗಾರರು ಇದ್ದಾರೆ. ಎಲ್ಲರಿಗೂ ಬನವಾಸಿಯೇ ಕೇಂದ್ರ ಮಾರುಕಟ್ಟೆ. ಇಲ್ಲಿಂದ ಗ್ವಾಲಿಯರ್‌ ದೆಹಲಿ, ಪಂಜಾಬಿನ ಇತರ ಜಿಲ್ಲೆಗಳಿಗೂ, ಉತ್ತರ ಭಾರತಕ್ಕೆ ಹೆಚ್ಚು ರಫ್ತಾಗುತ್ತಿತ್ತು. ಮಾರ್ಚ್‌ ಕೊನೆಯಿಂದ ಜೂನ್‌ ತನಕವೂ ಇದರ ಹಂಗಾಮು. ಪ್ರತಿ ಕೇಜಿ ಅನಾನಸ್‌ಗೆ 20-22 ರೂ. ತನಕ ಮಾರಾಟ ಆಗಿದ್ದೂ ಇತ್ತು. ಈ ಬಾರಿ ಕೊಯ್ಲಿನ ವೇಳೆಗೇ ಲಾಕ್‌ಡೌನ್‌ ಆರಂಭವಾಗಿದ್ದರಿಂದ ಉತ್ತರ ಭಾರತಕ್ಕೆ ರವಾನೆ ಆಗುವುದು ನಿಂತಿದೆ. ತೋಟದಲ್ಲೇ ಹಣ್ಣಾಗಿ ರೈತರ ಬೆವರಿಗೆ ಬೆಲೆ ಇಲ್ಲದಂತೆ ಆಗಿದೆ. 5-6 ರೂ. ಕೆಜಿಗೂ ಕೇಳುವವರು ಇಲ್ಲದಂತೆ ಆಗಿದೆ. ಉತ್ತರ ಭಾರತದಲ್ಲಿ ವಿಶೇಷ ಸಮಾರಂಭದಲ್ಲಿ ಅನಾನಸ್‌ಗೆ ಪ್ರಮುಖ ಸ್ಥಾನವಿತ್ತು. ರಸ್ತೆ ಅಂಚಿನಲ್ಲೂ ಅನಾನಸ್‌ ಜ್ಯೂಸ್‌ ಅಂಗಡಿಗಳು ಇದ್ದವು. ಇವೆಲ್ಲ ಬನವಾಸಿ ಭಾಗದಲ್ಲೇ ಬೆಳೆದವು ಆಗಿದ್ದವು. ಇದೀಗ ಇಲ್ಲಿಂದ ಕಳಿಸಿದರೂ ಅಲ್ಲಿ ಕೊಳ್ಳುವವರಿಲ್ಲದಂತೆ ಆಗಿದೆ.

ಫ್ಯಾಕ್ಟರಿ ಆರಂಭ: ಬೆಳೆ ಹಾನಿ ಪ್ರಮಾಣ ತಗ್ಗಿಸಲು ತಾಲೂಕಾಡಳಿತ ಕ್ರಮ ಕೈಗೊಂಡಿದೆ. ಕಂಗಾಲಾಗಿದ್ದ ನೂರಾರು ಅನಾನಸ್‌ ಬೆಳೆಗಾರಿಗೆ ಸಾಂತ್ವನ ಹೇಳಲು ಬನವಾಸಿ ಭಾಗದಲ್ಲಿ ಶನಿವಾರದೊಳಗೆ ಎರಡು ಫ್ಯಾಕ್ಟರಿ ಆರಂಭಿಸಲು ಸೂಚಿಸಿದೆ. ತೋಟಗಾರಿಕಾ, ಕೃಷಿ, ಕಂದಾಯ, ಪೊಲೀಸ್‌ ಇಲಾಖೆ ಬನವಾಸಿ ಭಾಗದಲ್ಲಿದ್ದ ಫ್ಯಾಕ್ಟರಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸ್ಯಾನಿಟೈಸರ್‌, ಗ್ಲೌಸ್‌, ಮಾಸ್ಕ್ ಬಳಸಿ ಕಾರ್ಯ ಮಾಡಲು ಸೂಚಿಸಿದ್ದಾರೆ.

ನೂರಾರು ಮಹಿಳಾ ಕಾರ್ಮಿಕರು ಅನಾನಸ್‌ ಫ್ಯಾಕ್ಟರಿಯಲ್ಲಿ ಕೆಲಸ ಆರಂಭಿಸಿದ್ದು, ಬನವಾಸಿ ಭಾಗದ ಅನಾನಸ್‌ ಹಣ್ಣಿನ ಖರೀದಿ ಆರಂಭಗೊಂಡಿದೆ. ದೆಹಲಿಗೆ ತೆರಳುವಂತೆ ಆಗಿದ್ದರೆ ನಮಗೆ ದರ ಬರುತ್ತಿತ್ತು ಎನ್ನುವ ಅನಾನಸ್‌ ಬೆಳೆಗಾರರು ಒಂದೆಡೆಗೆ ಆದರೆ, ದೆಹಲಿಗೆ ತಂದರೆ ಯಾರಿಗೆ ಮಾರೋದು? ಫ್ಯಾಕ್ಟರಿಗಳೂ ಆರಂಭವಾಗಿಲ್ಲ ಎಂಬುದು ವರ್ತಕರ ಪ್ರಶ್ನೆಯಾಗಿದೆ. ಸ್ಥಳೀಯ ಸೂತ್ರವೊಂದು ಕೆಲ ಮಟ್ಟಿಗೆ ಸಮಾಧಾನ ತಂದಿದೆ.

ಬನವಾಸಿ ಭಾಗದಲ್ಲಿ ನಿತ್ಯ 50 ಟನ್‌ ಹಾಗೂ ಸೊರಬ, ಸಾಗರ ಭಾಗದಿಂದ 400 ಟನ್‌ ಅನಾನಸ್‌ ಉತ್ಪಾದನೆ ಇದೆ. ಜಿಲ್ಲೆಯ ಅನಾನಸ್‌ಗೆ ತೊಂದರೆ ಆಗದಂತೆ ಕ್ರಮ
ಕೈಗೊಳ್ಳಲಾಗುತ್ತಿದೆ. ಗ್ವಾಲಿಯರ್‌ಗೂ 10 ಟನ್‌ ಅನಾನಸ್‌ ಪ್ರಾಯೋಗಿಕವಾಗಿ ಕಳಿಸಲಾಗಿದೆ.
ಸತೀಶ ಹೆಗಡೆ,
ತೋಟಗಾರಿಕಾ ಅಧಿಕಾರಿ

Advertisement

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅನಾನಸ್‌ ಬೆಳೆಯನ್ನು ಉತ್ತರ ಭಾರತದ ಮಾರುಕಟ್ಟೆಗೆ ಕಳುಹಿಸಲು ಸಾಧ್ಯವಾಗದೇ ಸಂಕಷ್ಟ ಎದುರಿಸುತ್ತಿರುವ ಅನಾನಸ್‌ ಬೆಳೆಗಾರರ ಸಮಸ್ಯೆ ಬಗೆಹರಿಸಲು ಎಲ್ಲಾ ಪ್ರಯತ್ನ ಮಾಡಲಾಗುವುದು. ಅನಾನಸ್‌ ಬೆಳೆಗಾರರ ಸಮಸ್ಯೆ ಬಗ್ಗೆ ಮತ್ತೂಮ್ಮೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ನಡೆಸಲಾಗುವುದು. ಉತ್ತರ ಭಾರತದ ಜ್ಯೂಸ್‌ ಫ್ಯಾಕ್ಟರಿಗಳನ್ನು ತೆರೆಯಲು ಮನವಿ ಮಾಡುವುದು ಸೇರಿದಂತೆ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು.
ಬಿ.ಸಿ. ಪಾಟೀಲ,
ಕೃಷಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next