Advertisement

ಅಧ್ಯಕ್ಷರ ವಿರುದ್ಧ ಸಿಡಿದೆದ್ದ ಸದಸ್ಯ ಬಹಿಷ್ಕಾರ

11:39 AM Dec 30, 2018 | Team Udayavani |

ಶಿರಸಿ: ತಾಲೂಕಿನ ಬದನಗೋಡ ಗ್ರಾಪಂನ ದಾಸನಕೊಪ್ಪದಲ್ಲಿ ನಡೆದ ಸಾಮಾನ್ಯ ಸಭೆ ಬಹಿಷ್ಕರಿಸಿ, ಪ್ರತಿಭಟನೆ ನಡೆಸಿದ ಕೆಲ ಸದಸ್ಯರು ಹಾಲಿ ಅಧ್ಯಕ್ಷರನ್ನು ಕೆಳಗಿಳಿಸಿ, ಉಪಾಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಸಬೇಕು ಎಂದು ಆಗ್ರಹಿಸಿ ಪಿಡಿಒ ಗಣೇಶ ಲಂಬಾಣಿಗೆ ಮನವಿ ಸಲ್ಲಿಸಿದರು.

Advertisement

ವೈಯಕ್ತಿಕ ಆರೋಪ, ಪ್ರತ್ಯಾರೋಪಗಳಿಂದ ಕಳೆದೆರಡು ತಿಂಗಳಿನಿಂದ ಗ್ರಾ.ಪಂ ಸಾಮಾನ್ಯ ಸಭೆಯನ್ನು ಕೆಲ ಸದಸ್ಯರು ಬಹಿಷ್ಕರಿಸುತ್ತಿದ್ದು, ಕೋರಂ ಕೊರತೆಯಿಂದ ಮುಂದೂಡಲ್ಪಡುತ್ತಿದೆ. ಇದರಿಂದಾಗಿ ಗ್ರಾ.ಪಂ ವ್ಯಾಪ್ತಿಯ ಹಲವು ಜ್ವಲಂತ ಸಮಸ್ಯೆಗಳು ಪರಿಹಾರ ಕಾಣುತ್ತಿಲ್ಲ ಎಂದು ಜನ ಆರೋಪಿಸಿದರು.

ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಯಿಸಿದ ತಾಲೂಕಿನ ಬದನಗೋಡ ಗ್ರಾಪಂ ಅಧ್ಯಕ್ಷ ಬಸವರಾಜ ನಂದಿಕೇಶ್ವರಮಠ, ಗ್ರಾಪಂನಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ ಎಂದು ತಾಪಂ ವರದಿ ನೀಡಿದೆ. ಸದಸ್ಯರು ಸುಳ್ಳು ಆರೋಪ ಮಾಡಿದ್ದಾರೆ. 21 ಅಧಿ ಕಾರಿಗಳು ಇಲ್ಲಿಯ ತನಕ ಬದಲಾಗಿದ್ದಾರೆ. ವಯಕ್ತಿಕ ಕಾರಣದಿಂದ ಈ ವಿರೋಧವಾಗಿದೆ ಎಂದರು.

ಸೋಲಾರ್‌ ಲೈಟ್‌, ಜೇನು ಪೆಟ್ಟಿಗೆ, ಪಶು ಭಾಗ್ಯ, ಕುರಿ ಭಾಗ್ಯ ಇತ್ಯಾದಿ ಎಲ್ಲದರಲ್ಲಿಯೂ ಸದಸ್ಯರು ದುಡ್ಡು ಹೊಡೆಯುವ ಕೆಲಸಕ್ಕೆ ಅಡ್ಡಿಯಾಗಿದ್ದಕ್ಕೆ ಈ ಪ್ರತಿಭಟನೆ ನಡೆಸುತ್ತಿದ್ದಾರೆ. ರಸ್ತೆ ನಿರ್ಮಾಣವಾಗುತ್ತಿದೆ. ಅನುದಾನ ಸೋರಿಕೆಗೆ, ಅವ್ಯವಹಾರಕ್ಕೆ ಅವಕಾಶ ಇರದಿರುವುದೇ ಅವರಿಗೆ ತೊಂದರೆಯಾಗಿದೆ ಎಂದರು.

ರಾಜಕೀಯ ದುರುದ್ದೇಶದಿಂದ ಅಧ್ಯಕ್ಷ ಸ್ಥಾನದಿಂದ ಇಳಿಸುವ ಪ್ರಯತ್ನ ನಡೆಸುತ್ತಿದ್ದಾರೆ. 2 ಸದಸ್ಯರು ಅಹಂಭಾವದಿಂದ ವ್ಯವಸ್ಥೆ ಹಾಳು ಮಾಡಿದ್ದಾರೆ. ಯಾವುದೇ ಅಭಿವೃದ್ಧಿ ಚಿಂತನೆ ಮಾಡದೇ ವಯಕ್ತಿಕ ಹಿತಾಸಕ್ತಿ, ಲಾಭಕ್ಕೆ ಚರ್ಚಿಸುವುದೇ ಉದ್ದೇಶವಾಗಿದೆ. ಕಳೆದ ಒಂದೂವರೆ ತಿಂಗಳಿಂದ ಬದನಗೋಡದ ನೀರಿನ ಸಮಸ್ಯೆ ಪರಿಹಾರ ಆಗಿಲ್ಲ. ಅಭಿವೃದ್ಧಿ ದೃಷ್ಟಿಯಿಂದ ಸರಕಾರ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Advertisement

ಗ್ರಾ.ಪಂ. ಸದಸ್ಯೆ ಆತ್ಮಾದೇವಿ ಮಾತನಾಡಿ, ಪ್ರತಿ ಸಭೆಯಲ್ಲಿ ತಕರಾರು ಬಿಟ್ಟು ಅಭಿವೃದ್ಧಿಗೆ ಅವಕಾಶ ನೀಡುತ್ತಿಲ್ಲ. ಹಳ್ಳಿ ಅಭಿವೃದ್ಧಿಯಿಂದ ವಂಚಿತವಾಗಿದೆ. ಕಳೆದ ಒಂದು, ಒಂದೂವರೆ ತಿಂಗಳಿನಿಂದ ಕುಡಿಯಲು ನೀರಿಲ್ಲ. ತಕರಾರು ಮಾಡುವುದೇ ಇವರ ಕೆಲಸ. ಇದು ಅಭಿವೃದ್ಧಿಗೆ ಮಾರಕವಾಗಿದೆ. ತಕರಾರಿನಿಂದ ಶಾಲಾ ಆವರಣ ಗೋಡೆಯ ನಿರ್ಮಾಣದ 13 ಲಕ್ಷ ರು.ಗಳನ್ನು ತಡೆಹಿಡಿದಿದ್ದಾರೆ ಎಂದರು.

ಸದಸ್ಯ ಗಣೇಶ ಕ್ಷತ್ರಿಯ ಮಾತನಾಡಿ, ಬಹುಮತ ಇಲ್ಲದ ಅಧ್ಯಕ್ಷರು ಕರೆದ ಸಾಮಾನ್ಯ ಸಭೆ ವಿರೋಧಿಸಿ, ಬಹಿಷ್ಕರಿಸಿ ಹೊರಬಂದಿದ್ದೇವೆ. ಭ್ರಷ್ಟಾಚಾರ ಮಾಡುವ ಅಧ್ಯಕ್ಷರು ಅಭಿವೃದ್ಧಿ ಬಿಟ್ಟು ಬಹುಮತ ಇಲ್ಲದೇ ಕುಳಿತಿದ್ದಾರೆ ಎಂದರು.

ಸದಸ್ಯ ಮಂಜುನಾಥ ಪಾಟೀಲ್‌ ಮಾತನಾಡಿ, 21 ಸದಸ್ಯರ ಗ್ರಾಪಂ ಇದಾಗಿದೆ. 2-3 ತಿಂಗಳಿನಿಂದ ಸಭೆ ಮುಂದೂಡಲಾಗಿದೆ. 13 ಲಕ್ಷ ಅಭಿವೃದ್ಧಿ ಹಣ ಮರಳಿ ಹೋಗುವಂತಾಗಿದೆ. ಸದಸ್ಯರಿಗೆ ಕಷ್ಟವಾಗಿದೆ. 8 ಗ್ರಾಮದ ಎಲ್ಲ ಶಾಲೆಗಳಿಗೂ ನೀರಿನ ಸಮಸ್ಯೆಯಿದೆ. ಕುಪ್ಪಗಡ್ಡೆ ಶಾಲೆಯ ಬೋರ್‌ ಸಮಸ್ಯೆಯಾಗಿದೆ, ದುರಸ್ತಿ ಮಾಡಲು ಆಗುತ್ತಿಲ್ಲ. ವಾಟರ್‌ಮನ್‌ ಬಿಲ್‌ ನಾವು ಕೊಟ್ಟಿಲ್ಲ. ಸಾಮಾನ್ಯ ಸಭೆ ಪ್ರತಿ ತಿಂಗಳು ಕರೆಯುತ್ತಿಲ್ಲ, ಅಭಿವೃದ್ಧಿ ಆಗುತ್ತಿಲ್ಲ ಎಂದೂ ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next