Advertisement

ಅಮ್ಮನ ಸೇವೆಯಲ್ಲಿ “ಯುವ’ಪಡೆ

07:56 PM Mar 07, 2020 | Naveen |

ಶಿರಸಿ: ಮಾರಿಕಾಂಬಾ ದೇವಿ ಎಂದರೆ ನಾಡಿನ ಸಕಲ ಭಕ್ತರಿಗೂ ತಾಯಿ. ಅಮ್ಮಾ ಕಾಪಾಡು ಎಂದು ಕೈ ಮುಗಿದು ಪ್ರಾರ್ಥಿಸಿದರೆ ಕರಗುವ ಮಾತೆ. ಈ ದೇವಿಯ ಜಾತ್ರಾ ಮಹೋತ್ಸವದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಲು ಯುವ ಪಡೆ ಕೈ ಜೋಡಿಸಿದೆ.

Advertisement

ದೇವಿ ಆರಾಧನೆಯಲ್ಲಿ ಬಾಬುದಾರರು ಮಾಡಬೇಕಾದ ಕೆಲಸಗಳೇ ಹೆಚ್ಚು. ದೇವಿಗೆ ಹರಕೆ ಒಪ್ಪಿಸಲು ಬರುವ ಭಕ್ತರ ಹಣ್ಣುಕಾಯಿ ಒಡೆಯುವುದು, ಪ್ರಸಾದ ಕೊಡುವುದು ಒಂದೆರೆಡೇ ಅಲ್ಲ. ಜಾತ್ರೆಗೂ ಮೊದಲು ರಥಕ್ಕೆ ಮರ ತರುವ ಕಾರ್ಯದಿಂದ ಹಿಡಿದು ಜಾತ್ರೆ ವಿಸರ್ಜನೆ ಎಲ್ಲ ವಿ ಧಿ ವಿಧಾನಗಳಲ್ಲೂ ತೊಡಗಿಕೊಳ್ಳುತ್ತಾರೆ.

ದೇವಿ ಜಾತ್ರೆಗೆ ಬಾಬುದಾರರು ಇಲ್ಲದೇ ಆಗುವುದೇ ಇಲ್ಲ. ನೌಕರಿಗೆ ರಜೆ ಹಾಕಿ..: ಇಂಥ ಜವಾಬ್ದಾರಿ ಕಾರ್ಯದಲ್ಲಿ ಹಲವು ಕುಟುಂಬಗಳು ಬಾಬುದಾರಿಕೆ ಸೇವೆ ಮಾಡುತ್ತಿದ್ದಾರೆ. ಕಾಯಿ ಒಡೆಯುವುದರಿಂದ ಮಂಟಪದೊಳಗಿನ ಅನೇಕ ನಿರ್ವಹಣೆಗಳನ್ನೂ ಹೊತ್ತಿವೆ. ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಮಡಿಕೇರಿಗಳಲ್ಲಿ ಕೆಲಸ ಮಾಡುತ್ತಿರುವ ಯುವಕರು ವಾರಗಳ ಕಾಲ ಉದ್ಯೋಗಕ್ಕೆ ರಜೆ ಹಾಕಿ ಬಂದಿದ್ದಾರೆ.

ದೇವಿ ಸೇವೆಯಲ್ಲಿ ನಮಗೆ ಸಾರ್ಥಕ ಕಾಣುತ್ತದೆ ಎನ್ನುವಾಗ ಅವರ ಮೊಗದಲ್ಲಿ ಧನ್ಯತಾ ಭಾವ ಇತ್ತು. ಅಲ್ಲದೇ ಸರತಿ ಸಾಲಿನಲ್ಲಿ ಪಾನಕ ಕೊಡಲು, ಕ್ಯೂ ನೋಡಿಕೊಳ್ಳಲು, ಒಳಾಂಗಣದಲ್ಲಿ ಇತರ ಸೇವೆಗಳಿಗೆ ಸ್ವಯಂ ಸೇವಕರು, ಸ್ಕೌಟ್ಸ್‌ ಹಾಗೂ ಗೈಡ್ಸ್‌ ಮಕ್ಕಳೂ ತೊಡಗಿಕೊಂಡಿದ್ದಾರೆ. ಅಮ್ಮನ ಸೇವೆಗೆ ಹಳಬರ ಜೊತೆಗೆ ಅದೇ ಬಾಬುದಾರರ ಕುಟುಂಬದ ಹೊಸಬರೂ ಸೇರಿ 600ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ.

ಗುರುವಾರ ರಾತ್ರಿ ಕೂಡ ಭಕ್ತರು ನಡು ರಾತ್ರಿ 1-2 ಗಂಟೆ ತನಕ ಓಡಾಟ ಮಾಡಿದರು. ರಾತ್ರಿ
ಹಗಲು ಎನ್ನದೇ ಜಾತ್ರಾ ಬಯಲು ಆಗಿತ್ತು. ಮೊಬೈಲ್‌ ಕೆಮರಾಗಳು ಗದ್ದುಗೆ ಎದುರು, ತೊಟ್ಟಿಲ ಬಳಿ ನೆನಪಿಗಾಗಿ ಚಿತ್ರಕ್ಕಾಗಿ ಕ್ಲಿಕ್‌ ಆದವು. ದೇವಸ್ಥಾನ ಹಾಗೂ ಇತರ ಖಾಸಗಿಯವರೂ ನೀಡಿದ ಅನ್ನದಾನ ಸೇವೆಯಲ್ಲಿ ಭಕ್ತರು ಊಟ ಮಾಡಿದರು. ಹಾಲಕ್ಕಿ, ಲಂಬಾಣಿ ಮಹಿಳೆಯರೂ ಜಾತ್ರೆಯಲ್ಲಿ ದೇವಿ ದರ್ಶನ ಪಡೆದರು.

Advertisement

ದೇವಸ್ಥಾನದಿಂದ ಎಳ್ಳು ಬೆಲ್ಲದ ಪಾನಕ ಸೇವೆ ನಡೆದರೆ, ಇತ್ತ ಹಿಂದೂ ಜಾಗರಣ ವೇದಿಕೆಯವರೂ ಶುಕ್ರವಾರ ಉಚಿತವಾಗಿ ಮಜ್ಜಿಗೆ ಸೇವೆ ನೀಡಿದರು. ಗ್ರಾಮೀಣ ಭಾಗದಿಂದಲೂ ರೈತರು ಮಜ್ಜಿಗೆ ತಂದು ಸೇವೆಗೆ ಸಹಕರಿಸಿದರು.

ಸುಸೂತ್ರ ಟ್ರಾಫಿಕ್‌: ಶಿರಸಿ ಮಾರಿಕಾಂಬಾ ದೇವಿ ಜಾತ್ರೆ ಎಂದರೆ ಟ್ರಾಫಿಕ್‌ ಜಾಮ್‌ ಎಲ್ಲರ ಕಣ್ಮುಂದೂ ಬರುತ್ತಿದ್ದವು. ಆದರೆ, ಈ ಬಾರಿ ಪೊಲೀಸರು ಕೈಗೊಂಡ ನಿವಾರಣಾ ಸೂತ್ರಗಳು ಅನೇಕ ಅನುಕೂಲ ಮಾಡಿಕೊಟ್ಟವು.

ವಿಕಲಚೇತನರಿಗೆ ಆಟೋ: ಇಲ್ಲಿನ ಪ್ರದೀಪ ಜ್ಯುವೆಲರೀಸ್‌ ಮಾಲೀಕ ಪ್ರದೀಪ ಎಲ್ಲನಕರ ಕಳೆದ ಮೂರು ದಿನಗಳಿಂದ ಜಾತ್ರೆಗೆ ಬರುವ ಭಕ್ತರಿಗೆ ಉಚಿತ ಆಟೋ ಸೇವೆ ನೀಡಿದ್ದು ಶ್ಲಾಘನೆಗೆ ಕಾರಣವಾಗಿದೆ. ಐದು ರಸ್ತೆಯಿಂದ ಅಮ್ಮನ ಗದ್ದುಗೆ ತನಕ ಆಟೋ ತಂದು ಅಲ್ಲಿಂದ ದೇವರ ದರ್ಶನ ಮಾಡಿಸಿ ವಾಪಸ್‌ ಕರೆದುಕೊಂಡು ಹೋಗಿ ಬಿಡುವುದು ಹಾಗೂ ಕೋಟೆಕೆರೆ ಕ್ರಾಸ್‌ನಿಂದಲೂ ಇನ್ನೊಂದು ಆಟೋ ಮೂಲಕ ಈ ಸೇವೆ ಒದಗಿಸುತ್ತಿರುವುದು ಮೆಚ್ಚುಗೆಗೆ ಕಾರಣವಾಗಿದೆ.

ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next