ಶಿರಸಿ: ಗದ್ದುಗೆ ಏರಿದ ಮಾರಿಕಾಂಬೆ ದರ್ಶನಕ್ಕೆ ಪ್ರಥಮ ದಿನವೇ ನಾಡಿನ ಮೂಲ ಮೂಲೆಗಳಿಂದ ಭಕ್ತ ಸಾಗರ ಹರಿದು ಬಂದಿದ್ದು ಜಾತ್ರೆಗೆ ಇನ್ನಷ್ಟು ಕಳೆ ಕಟ್ಟಿತ್ತು. ಜಾತ್ರೆಯ ವಿಧ್ಯುಕ್ತ ಆರಂಭವಾಗಿ ಮೂರನೇ ದಿನವಾಗಿದ್ದರೂ ಮಂಗಳವಾರ ರಾತ್ರಿ ಕಲ್ಯಾಣ ಪ್ರತಿಷ್ಠೆ, ಬುಧವಾರ ಶೋಭಾಯಾತ್ರೆ ಹಾಗೂ ಗುರುವಾರದಿಂದ ವಿವಿಧ ಸೇವೆಗಳು ಆರಂಭವಾಗುವುದು ಸಂಪ್ರದಾಯವಾಗಿದೆ.
ಮುಂಜಾನೆ ಐದು ಗಂಟೆಯಿಂದಲೇ ದೇವರ ಸೇವೆಗಳು ಆರಂಭವಾಗಬೇಕಿದ್ದರೂ ಭಕ್ತರು ಬೆಳಗಿನ ಜಾವ ನಾಲ್ಕು ಗಂಟೆಯಿಂದಲೇ ತಾಯಿಯ ದರ್ಶನ ಹಾಗೂ ಉಡಿ, ಹರಕೆ ಸಲ್ಲಿಕೆಗೆ ಸರತಿಯಲ್ಲಿ ನಿಂತಿದ್ದು ವಿಶೇಷವೇ ಆಗಿತ್ತು. ಮುಂಜಾನೆಯಿಂದಲೇ ಉಡಿ, ಸೀರೆಯ ಅರ್ಪಣೆ, ಹಾರುಗೋಳಿ ಸೇವೆ, ಅಕ್ಕಿ, ಕಾಯಿಗಳ ತುಲಾಭಾರ ಸೇವೆ ಕೊಟ್ಟವರು ಹೆಚ್ಚಿದ್ದರು. ಇಪ್ಪತ್ತು ಸಾವಿರಕ್ಕೂ ಅಧಿಕ ಉಡಿಗಳು ಒಂದೇ ದಿನ ದೇವಿಯ ಪಾದ ಸೇರಿದವು. ಮನು ಪೂಜಾರಿ ಕುಟುಂಬ ಒದಗಿಸಿದ ತುಪ್ಪದ ನೆಣೆಯಿಂದ ದೇವಿಗೆ ಆರತಿ ಮಾಡಲಾಯಿತು. ದೇವಿಯ ದರ್ಶನ ಪಡೆದು ಆರತಿ ಪಡೆಯುವದು ಜಾತ್ರೆಯ ವಿಶೇಷವಾಗಿತ್ತು.
ಹಣ್ಣು ಕಾಯಿ ಒಡೆಸುವ ಭಕ್ತರೂ ಕುಂದಾಪುರ, ಮಂಗಳೂರು, ಉಡುಪಿ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶಗಳಿಂದಲೂ ಭಕ್ತರು ಆಗಮಿಸಿದ್ದರು. ಹಣ್ಣುಕಾಯಿ ಒಡೆಯುವ ಸ್ಥಳ ಈ ಬಾರಿ ವಿಸ್ತಾರ ಮಾಡಿದ್ದರಿಂದ ಅಷ್ಟು ರಶ್ ಆಗಿರಲಿಲ್ಲ. ಮರ್ಕಿ ದುರ್ಗಿ ದೇವಸ್ಥಾನದಿಂದ ಬೇವಿನ ಉಡಿ ಸೇವೆಯನ್ನು ಮಕ್ಕಳು, ಮಹಿಳೆಯರು ಕೂಡ ಸಲ್ಲಿಸಿದರು. ಕೆಲವರು ದೀಡ ನಮಸ್ಕಾರ ಹಾಕಿದರು.
ದೇವಿ ದರ್ಶನಕ್ಕೆ ಕೋಟೆಕೆರೆಯ ತನಕ ಸರತಿ ಹೋಗಿತ್ತು. ದೇವಸ್ಥಾನದಿಂದ ಕಿಲೋಮೀಟರ್ ಉದ್ದದ ತನಕ ಉದ್ದನೇಯ ನೆರಳಿನ ವ್ಯವಸ್ಥೆ ಮಾಡಿತ್ತು. ತಂಪು ಪಾನೀಯ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಶಿವಾಜಿ ಚೌಕದಲ್ಲಿ ಹಿಂದೂ ಜಾಗರಣ ವೇದಿಕೆಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು. ದೇವಸ್ಥಾನದಿಂದ ಮಾರಿಗುಡಿ ಶಾಲೆಯಲ್ಲಿ ಪ್ರಸಾದ ಭೋಜನ ವ್ಯವಸ್ಥೆ ಮಾಡಿದ್ದರು. ಸಂಬಾರ, ಪಾಯಸದ ಊಟ ರುಚಿಕರವಾಗಿತ್ತು. ಒಂಬತ್ತು ಸಾವಿರಕ್ಕೂ ಅಧಿಕ ಜನರು ಪ್ರಸಾದ ಭೋಜನ ಮಾಡಿದ್ದರು. ಅಡಕೆ ಹಾಳೆ ಪೇಟ್ ಬಳಸಿ ಪರಿಸರ ಪೂರಕ ವ್ಯವಸ್ಥೆ ಮಾಡಿದ್ದು ವಿಶೇಷವೇ ಆಗಿತ್ತು. ಹಳೆ ಬಿಇಓ ಕಚೇರಿಯಲ್ಲಿ ಖಾಸಗಿಯಾಗಿ ಕೂಟ ಊಟದ ವ್ಯವಸ್ಥೆ ಮಾಡಲಾಗಿತ್ತು.