ಶಿರಸಿ: ಕೇವಲ 24 ತಾಸುಗಳಿಗೆ ಬರೋಬ್ಬರಿ 24 ಟನ್ ಗೂ ಹೆಚ್ಚು ತ್ಯಾಜ್ಯವನ್ನು ನಗರದ ಜಾತ್ರಾ ಚಪ್ಪರ ಹಾಗೂ ಅದರ ಸುತ್ತಲಿನ ಪ್ರದೇಶದಲ್ಲಿ ಗುರುವಾರ ನಗರ ಸಭೆಯ ಪೌರಕಾರ್ಮಿಕರು ಸಂಗ್ರಹ ಮಾಡಿದ್ದಾರೆ.
ಮಾರಿಕಾಂಬಾ ದೇವಿ ಜಾತ್ರೆ ಮಾ. 15 ರಿಂದ ಆರಂಭವಾಗಿದ್ದು, ಮಾ.16ರಂದು ರಥೋತ್ಸವ ನಡೆದಿದೆ. ರಥೋತ್ಸವ ವೇಳೆ ರಥಕ್ಕೆ ಎಸೆದ ಕಡಲೆ, ಬಾಳೆಹಣ್ಣು ಎಲ್ಲ ಸೇರಿ ನಾಲ್ಕು ಟನ್ ಕಸ ಆಗಿತ್ತು. ಅದನ್ನು ನಗರಸಭೆಯ ಪೌರಕಾರ್ಮಿಕರು ತಕ್ಷಣ ಶುಚಿಗೊಳಿಸಿ ರಸ್ತೆ ತೊಳೆದಿದ್ದಾರೆ.
ಈವರೆಗಿನ ಜಾತ್ರಾ ಬಯಲಿನಲ್ಲಿ ಸಿಗದಷ್ಟು ಕಸ ಗುರುವಾರ ಬೆಳಗಿನ ಜಾವ ಸಿಕ್ಕಿದೆ! ಚಪ್ಪಲಿ, ಬಟ್ಟೆ, ಕಬ್ಬಿನ ಸಿಪ್ಪೆ, ಸೀಯಾಳ, ಕಲ್ಲಂಗಡಿ ಹಾಗೂ ನೀರಿನ ಬಾಟಲಿ, ತಟ್ಟೆ ಗಳು ಯಥೇಚ್ಚ ತ್ಯಾಜ್ಯವಾಗಿ ಕಂಡು ಬಂದಿದೆ.
ಇದನ್ನೂ ಓದಿ:ಹಿರಿಯ ಸಹಕಾರಿ ಧುರೀಣ ಸವಣೂರು ಸೀತಾರಾಮ ರೈ ಅವರಿಗೆ ಪ್ರತಿಷ್ಟಿತ ಸಹಕಾರಿ ರತ್ನ ಪ್ರಶಸ್ತಿ
ನಗರಸಭೆಯ ಸುಮಾರು 60 ಪೌರ ಕಾರ್ಮಿಕರು ನಡು ರಾತ್ರಿ ವೇಳೆ ಬಿಡಕಿಬಯಲು, ಜಾತ್ರಾ ಪೇಟೆ, ಅದರ ಸುತ್ತಲಿನ ಪ್ರದೇಶ ಸ್ವಚ್ಛಗೊಳಿಸಿದ್ದಾರೆ. ರಾತ್ರಿ 1.30ರಿಂದ ಪುರುಷ ಹಾಗೂ ಮಹಿಳಾ ಸಿಬಂದಿಗಳು ಸೇರಿ 24ಟನ್ ಕಸ ಸಂಗ್ರಹಿಸಿದ್ದಾರೆ. ಗುಡಿಸಿದ ಕಸ ಎತ್ತಲು ಹಲವು ಟಿಪ್ಪರ್, ಟ್ರಾಕ್ಟರ್, ಜೆಸಿಬಿ ಕೂಡ ಬಳಸಿದ್ದಾರೆ.
ಉಡಿ ಸೇವೆ, ದೀಡ್ ನಮಸ್ಕಾರ ಹಾಕುವ ಸೇವಾ ಮಾರ್ಗ, ದೇವಸ್ಥಾನ ಸುತ್ತಲಿನಲ್ಲಿ ಪ್ರದೇಶದಲ್ಲಿ ನೀರು ಹಾಕಿ ತೊಳೆಯಲಾಗಿದೆ. ಕೆಲವಡೆ ಔಷಧ ಕೂಡ ಸಿಂಪರಣೆ ಮಾಡಲಾಗಿದೆ ಎನ್ನುತ್ತಾರೆ ಪ್ರಭಾರಿ ಅಧಿಕಾರಿ ಆರ್.ವೆಂ.ವೆರ್ಣೇಕರ್.
ಜಾತ್ರೆ ವೇಳೆ ಪೌರ ಕಾರ್ಮಿಕರ ಹಗಲು ರಾತ್ರಿ ಕಾರ್ಯಕ್ಕೆ ಸಾರ್ವಜನಿಕರ ಶ್ಲಾಘನೆ ವ್ಯಕ್ತವಾಗಿದೆ. ಇಷ್ಟು ಜಾತ್ರೆಯಲ್ಲಿ ಪ್ರಥಮ ದಿನವೇ ಇಷ್ಟು ಕಸ ಸಿಕ್ಕಿದ್ದು ಪ್ರಥಮ. ಪ್ಲಾಸ್ಟಿಕ್ ತಟ್ಟೆ, ಬಾಟಲಿಗಳೇ ಹೆಚ್ಚು.
-ಆರ್.ವೆಂ.ವೆರ್ಣೇಕರ್, ನಗರಸಭೆ ಅಧಿಕಾರಿ
ಊರು ಮಲಗಿದ ಮೇಲೆ ಪೌರಕಾರ್ಮಿಕರು ಕೆಲಸ ಮಾಡುವ ವಿಧಾನ ಅದ್ಭುತ. ಇದು ತಾಯಿಗೆ ಸಲ್ಲಿಸುವ ಅತ್ಯಂತ ದೊಡ್ಡ ಸೇವಾ ಕಾಣಿಕೆ.
– ಪ್ರದೀಪ ಎಲ್ಲನಕರ್, ಸಮಾಜದ ಪ್ರಮುಖರು