ಶಿರಸಿ: ಗ್ರಾಮ ದೇವಿ, ಶಕ್ತಿ ದೇವತೆ ಶಿರಸಿ ಮಾರಿಕಾಂಬೆಗೆ ಭಕ್ತರು ನಡೆಸುವ ದಕ್ಷಿಣ ಭಾರತದ ಅತಿ ದೊಡ್ಡ ಜಾತ್ರೆ ಶಿರಸಿ ಮಾರಿ ಜಾತ್ರೆಗೆ ಬುಧವಾರ ಸಾಂಪ್ರದಾಯಿಕ ವಿಧಾನಗಳ ಮೂಲಕ ಭಕ್ತಿ ಭಾವದ ವಿದಾಯ ಹೇಳಲಾಯಿತು.
ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಕಳೆದ ಮಾ.3 ರಿಂದ ಆರಂಭಗೊಂಡು ಒಂಬತ್ತನೇ ದಿನ ಜಾತ್ರೆ ಗದ್ದುಗೆಯಿಂದ ಏಳುವ ಮೂಲಕ ವಿಸರ್ಜನಾ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.
ಬಿಡಕಿಬಯಲಿನ ಜಾತ್ರಾ ಗದ್ದುಗೆ ಮೇಲೆ ವಿರಾಜಮಾನಳಾಗಿದ್ದ ತಾಯಿಗೆ ಭಕ್ತರು ಬುಧವಾರ ಬೆಳಗ್ಗೆ 10:18ರ ತನಕ ಸೇವೆ, ಉಡಿ ಸಲ್ಲಿಸಿದರು. ಬಳಿಕ ಬಂದ ಭಜಕರು ಉಡಿ ಸಲ್ಲಿಸಲಾಗದೇ, ಕೊನೇ ಮಂಗಳಾರತಿ ಪಡೆಯಲಾಗದೇ ಮಮ್ಮಲ ಮರಗುತ್ತಿದ್ದ ದೃಶ್ಯಗಳೂ ಕಂಡು ಬಂದವು. ನಾಡಿಗ ಮನೆತನದವರ ಕೊನೆಯ ಮಂಗಳಾರತಿ ಬಳಿಕ ದೇವಿಯನ್ನು ನಾಡಿಗರು, ಬಾಬುದಾರರು, ಧರ್ಮದರ್ಶಿ ಮಂಡಳಿಗಳು ಅಮ್ಮನನ್ನು ಗದ್ದುಗೆಯಿಂದ ಎಬ್ಬಿಸಿದರು. ಸುಮಾರು 11:20ರ ಸುಮಾರಿಗೆ ರಂಗ ಮಂಟಪದಲ್ಲಿ ಹಾಕಲಾದ ರಂಗೋಲಿ ಮೇಲೆ ದಾರಿಯಲ್ಲಿ ಹಾಕಲಾದ ಬಿಳೆ ಬಟ್ಟೆ ಮೇಲೆ ದೇವಿಯನ್ನು ಕರೆತಂದು ಚಪ್ಪರದ ನಡುವೆ ಕೂಡ್ರಿ ಸಲಾಯಿತು. ಅಲ್ಲಿ ಅಡ್ಡ ಪಟ್ಟಿ ಕಟ್ಟಿ ವಿಸರ್ಜನಾ ಪೀಠಕ್ಕೆ ಒಯ್ಯುವ ಸಿದ್ಧತೆ ಮಾಡಿಕೊಳ್ಳಲಾಯಿತು. ಅಸಾದಿಗಳು ಹುಲುಸಿನ ಕಾರ್ಯಕ್ರಮ ನಡೆಸಿದರು. ರೈತರಿಗೆ ಹುಲುಸು ಹಂಚಿದ ಬಳಿಕ ಅವರು ಗದ್ದೆಗೆ ಹಂಚಿ ವಾಪಸ್ಸಾದ ಬಳಿಕ ಅಸಾದಿ ಮೇತ್ರಿಗಳು ಗಾವದ ವಿಧಾನ ನಡೆಸಿದರು.
ಚಪ್ಪರದಿಂದ ದೇವಿಯನ್ನು ಎಬ್ಬಿಸುವ ಮೊದಲು ಪೂಜಾರಿ ಆರತಿ ಮಾಡಿದ ಬಳಿಕ ಮತ್ತೆ ಜಯಘೋಷಗಳು ಮೊಳಗಿದವು. ಇದೇ ವೇಳೆ ಅಮ್ಮ ಚಪ್ಪರ ಬಿಡುತ್ತಿದ್ದಂತೆ ಮಾತಂಗಿ ಚಪ್ಪರಕ್ಕೆ ಬೆಂಕಿ ಹಾಕಲಾಯಿತು. ದೇವಿಯನ್ನು ಮೆರವಣಿಗೆ ಮೂಲಕ ದೇವಸ್ಥಾನದ ಪೂರ್ವಗಡಿಯಲ್ಲಿರುವ ಗದ್ದಿಗೆ ಬಳಿ ಅಟ್ಟದಲ್ಲಿ ಕೂಳಿಸಿಕೊಂಡು ಒಯ್ದು ವಿಸರ್ಜನಾ ಪ್ರಕ್ರಿಯೆ ನಡೆಸಿದರು.
ಹೆಪ್ಪು ವಿಧಾನಗಳೂ ನಡೆಯಲಿವೆ. ಮೇಟಿ ದೀಪವನ್ನು ದೇವಸ್ಥಾನದ ಗರ್ಭಗುಡಿಯಲ್ಲಿ ಇಟ್ಟರು. ದೇವಿಯ ವಿಸರ್ಜನಾ ವಿಧಾನ ವೀಕ್ಷಣೆಗೆ, ಈ ಕ್ಷಣ ಕಣ್ತುಂಬಿಕೊಳ್ಳಲು 50 ಸಾವಿರಕ್ಕೂ ಅಧಿಕ ಭಕ್ತರು ನೆರೆದಿದ್ದರು. ಆರಕ್ಷಕ ಅಧೀಕ್ಷಕ ಗೋಪಾಲಕೃಷ್ಣ ನಾಯಕ ನೇತೃತ್ವದಲ್ಲಿ ಬಂದೋಬಸ್ತ ಮಾಡಲಾಗಿತ್ತು. ಭಕ್ತರು ತೊಟ್ಟಿಲು ಏರಿಯೂ ವಿಸರ್ಜನಾ ವಿಧಾನ ವೀಕ್ಷಿಸಿದರು. ಬಾಬುದಾರ ಪ್ರಮುಖರಾದ ಜಗದೀಶ ಗೌಡ, ರಮೇಶ ದಬ್ಬೆ, ಆಡಳಿತ ಮಂಡಳಿ ಅಧ್ಯಕ್ಷ ವೆಂಕಟೇಶ ನಾಯ್ಕ, ಉಪಾಧ್ಯಕ್ಷ ಮನೋಹರ ಮಲ್ಮನೆ, ಟ್ರಸ್ಟಿಗಳಾದ ಲಕ್ಷ್ಮಣ ಕಾನಡೆ, ಶಾಂತಾರಾಮ ಹೆಗಡೆ, ಚಂದ್ರಕಲಾ ಹೊಸ್ಪಟ್ಟಣ ಇತರರು ಇದ್ದರು.
ಮಧ್ಯಾಹ್ನ 12:46ರ ಗಂಟೆಯ ಬಳಿಕ ಅಮ್ಮನಿಲ್ಲದ ಗದ್ದಗೆ ಬಿಕೋ ಎನ್ನುತ್ತಿತ್ತು. ಕೊರೋನಾದಂತಹ ರೋಗದ ಭೀತಿಯಲ್ಲೂ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾಗಿದ್ದು ಈ ಬಾರಿಯ ವಿಶೇಷವೇ ಆಗಿತ್ತು. ಜಾತ್ರೆಯ ರಂಗು ಮಾ.18ರ ತನಕ ಇಲ್ಲಿ ಅಂಗಡಿಗಳ ಮೂಲಕ ಇರಲಿದೆ.