ಶಿರಸಿ: ಜಾಗತಿಕ ಆನ್‌ಲೈನ್‌ನ ಪ್ರತಿಷ್ಠಿತ ಸಂಸ್ಥೆಗಳಾದ ಗೂಗಲ್ ಹಾಗೂ ಬೈಜೂಸ್ ಎಜ್ಯುಕೇಷನ್‌ಗಳು ಜಂಟಿಯಾಗಿ ಹೊರತಂದಿರುವ, ಶಿಕ್ಷಣ ಸಂಸ್ಥೆಗಳಿಗಾಗಿಯೇ ಉಪಯುಕ್ತವಾಗಿ ರೂಪಿಸಿರುವ ವಿದ್ಯಾರ್ಥಾ ಡಾಟ್ ಕಾಂ ಆಪ್‌ನ ಎಲ್ಲಾ ಸೌಲಭ್ಯಗಳು ಶಿರಸಿ ಲಯನ್ಸ್ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಲಭ್ಯವಾಗಲಿದೆ.
ಶೈಕ್ಷಣಿಕ ಸಾಲಿನಲ್ಲಿ ಆನ್ಲೈನ್ ಶಿಕ್ಷಣ ವ್ಯವಸ್ಥೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸಿ ಬೈಜೂಸ್ ಅವರು ಏರ್ಪಡಿಸಿದ್ದ ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಕಾರ್ಯನಿರ್ವಹಣೆ ತೋರಿದ್ದರ ಫಲವಾಗಿ ಶಿರಸಿ ಲಯನ್ಸ್ ಶಾಲೆ ಈ ಅತ್ಯುತ್ಕೃಷ್ಟ ಯೋಜನೆಗೆ ಆಯ್ಕೆಯಾಗಿದೆ. ಆಯ್ಕೆಯಾಗಿರುವ ಶಾಲೆಗಳಲ್ಲಿ ರಾಜ್ಯ ಪಠ್ಯ ಕ್ರಮದಲ್ಲಿ ನಡೆಯುವ ಶಾಲೆಗಳಲ್ಲಿ ರಾಜ್ಯದ ಏಕೈಕ ಶಾಲೆಯು ಕೂಡ ಆಗಿದೆ.
ಈ ಸಾಲಿನಲ್ಲಿ ಲಯನ್ಸ್ ಶಾಲೆಯಲ್ಲಿ ಪ್ರವೇಶ ಪಡೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಬೈಜುಸ್‌ನವರು ಶೈಕ್ಷಣಿಕ ವಿಡಿಯೋ ಪಾಠಗಳು, ಪ್ರಶ್ನೆ ಪತ್ರಿಕೆಗಳು, ಕಾರ್ಯ ಯೋಜನೆಗಳು ಹಾಗೂ ಗೂಗಲ್ ಕ್ಲಾಸ್ ರೂಮ್ ಪಾಠಗಳು, ಜಿಮೇಲ್ ಇತ್ಯಾದಿಗಳನ್ನು ಹೊಂದಿದ ಅನಿಯಮಿತ ಸಂಗ್ರಹ (೧೦೦ ಟಿ.ಬಿ) ಇರುವ ವಿದ್ಯಾರ್ಥಿ ಸ್ನೇಹಿ ವ್ಯವಸ್ಥೆ ಲಭ್ಯವಾಗಲಿದೆ. ಅಂತರಾಷ್ಟ್ರೀಯ ವೇದಿಕೆಯಲ್ಲಿ ಶಾಲೆಯನ್ನು ಸಮರ್ಥವಾಗಿ ಪ್ರತಿನಿಧಿಸಿ, ಪರಿಣಾಮಕಾರಿ ಪ್ರದರ್ಶನದ ಫಲವಾಗಿ ಅತ್ಯಂತ ದುಬಾರಿ ವೆಚ್ಚದ ಈ ಕೊಡುಗೆಗಳು ಉಚಿತವಾಗಿ ಲಯನ್ಸ್ ಶಾಲೆಯ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಲಭಿಸುತ್ತಾ ಇದೆ. ಈ ಯೋಜನೆಯ ಸದುಪಯೋಗವನ್ನು ಎಲ್ಲಾ ಶಿರಸಿ ಲಯನ್ಸ್ ಶಾಲೆಯ ಪಾಲಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಡೆದುಕೊಳ್ಳಲು ಅನುಕೂಲವಾಗಿದೆ ಎಂದು ಶಾಲೆಯ ಮುಖ್ಯಾಧ್ಯಾಪಕ ಶಶಾಂಕ ಹೆಗಡೆ ತಿಳಿಸಿದ್ದಾರೆ.
ಶಾಲೆಯನ್ನು ಸಮರ್ಥವಾಗಿ ಜಾಗತಿಕ ವೇದಿಕೆಯಲ್ಲಿ ಪ್ರತಿನಿಧಿಸಿ ಎಲ್ಲಾ ಪಾಲಕರಿಗೆ, ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅತ್ಯುತ್ಕ್ರಷ್ಟವಾದ ಹಾಗೂ ಅತಿ ದುಬಾರಿಯಾದ ಈ ಯೋಜನೆಯನ್ನು ಸಂಪೂರ್ಣ ಉಚಿತವಾಗಿ ಲಯನ್ಸ್ ಶಾಲೆಗೆ ದೊರಕಿಸಿ ಕೊಡಲು ಕಾರಣರಾದ ಮುಖ್ಯಾಧ್ಯಾಪಕ ಶಶಾಂಕ ಹೆಗಡೆ ಅವರನ್ನು ಶಿರಸಿ ಲಯನ್ಸ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಎಲ್ಲಾ ಪದಾಧಿಕಾರಿಗಳು, ಶಿರಸಿ ಲಯನ್ಸ್ ಕ್ಲಬ್‌ನ ಬಳಗ, ಲಯನ್ಸ್ ಶಾಲೆಗಳ ಪಾಲಕ ವೃಂದ ಹಾಗೂ ಶಿಕ್ಷಕ ವೃಂದ ಅಭಿನಂದಿಸಿದೆ.