ಶಿರಸಿ: ಮಕ್ಕಳು ಜಗತ್ತಿನ ಭವಿಷ್ಯ. ಅವರ ಬದುಕು ಸುಂದರವಾಗಿರಬೇಕು ಎಂದು ಮಕ್ಕಳ ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ ಹೇಳಿದರು.
ಅವರು ಶನಿವಾರ ಶಿರಸಿ ಲಯನ್ಸ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಶಿರಸಿ ಲಯನ್ಸ್ ಕ್ಲಬ್, ಶಿರಸಿ ರೋಟರಿ ಕ್ಲಬ್‌ಗಳ ಸಹಯೋಗದೊಂದಿಗೆ ಮುನ್ನಡೆಯಲಿರುವ ಲಯನ್ಸ್ ಲೋಚನ’ ವಾರಾಂತ್ಯದ ಅಂತರ್ಜಾಲ ಸಂಚಿಕೆಗಳ ಪ್ರಸಾರದ ಪ್ರಥಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಲೋಚನ ಎಂಬುದು ಅದ್ಭುತ ಪರಿಕಲ್ಪನೆಯ ಕಾರ್ಯಕ್ರಮ .ಲೋಚನ ಅಂದರೆ ಕಣ್ಣು. ಕಣ್ಣು ಎರಡಾದರೂ ದೃಷ್ಟಿ ಒಂದೆ. ನಕಾರಾತ್ಮಕ ಚಿಂತನೆಯಿಂದ ಜನರು ನರಳಾಡುತ್ತಿದ್ದಾರೆ, ಸಕಾರಾತ್ಮಕ ಚಿಂತನೆಯಿಂದ ಬದುಕನ್ನು ಸುಂದರ ಸುಖಕರವನ್ನಾಗಿ ಮಾಡಿಕೊಳ್ಳಬೇಕು. ಶರೀರದ ಎರಡು ಕಣ್ಣುಗಳು ಚಿಕ್ಕದಾದರೂ ಬದುಕಿನಲ್ಲಿ ಅದರ ಮಹತ್ವ ದೊಡ್ಡದು. ಆದ್ದರಿಂದ ಸಕಾರಾತ್ಮಕ ವಿಶಾಲ ದೃಷ್ಠಿಕೋನ ಬೆಳೆಸಿಕೊಂಡು ಜಗತ್ತಿನಲ್ಲಿ ಮುಂದುವರೆಯಬೇಕು. ಜಗತ್ತನ್ನು ನೋಡುವ ದೃಷ್ಟಿ ಬದಲಾಗಬೇಕು. ಶಿಕ್ಷಣದಲ್ಲಿ ಕೇವಲ ಪುಸ್ತಕದ ಬದನೆಕಾಯಿಗಳಾಗಿ ಮಕ್ಕಳನ್ನು ತಯಾರಿ ಮಾಡುತ್ತಿರುವ ಇಂದಿನ ದಿನದಲ್ಲಿ ಮಕ್ಕಳಲ್ಲಿ ಸಕಾರಾತ್ಮಕ ದೃಷ್ಠಿಕೋನ ಬೆಳೆಸುವಲ್ಲಿ ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಶಿರಸಿ ಲಯನ್ಸ್ ಶಿಕ್ಷಣ ಸಂಸ್ಥೆಗಳ ಈ ಪ್ರಯತ್ನ ಶ್ಲಾಘನೀಯ ಎಂದರು.
ಮಕ್ಕಳಲ್ಲಿ ಸಕಾರಾತ್ಮಕ ದೃಷ್ಠಿಕೋನ ಬೆಳೆಯ ಬೇಕಾದರೆ ಆರೋಗ್ಯಪೂರ್ಣ ಆಹಾರ, ಧ್ಯಾನ, ಪ್ರಾಣಾಯಾಮಗಳು ಬೇಕು. ಮೊದಲಿಗೆ ಗುರುಕುಲ ಪದ್ಧತಿಯಲ್ಲಿ ಗುರುವಿನ ಸ್ಥಾನ ಶ್ರೇಷ್ಠವಾಗಿತ್ತುಎಂದ ಅವರು, ಮಕ್ಕಳಿಗೆ ಒಳ್ಳೆಯ ಆಹಾರ, ಶಿಕ್ಷಣ, ಆರೈಕೆ, ಯೋಗ, ಪ್ರಾಣಾಯಾಮ ಇವುಗಳ ಜೊತೆ ನೈತಿಕ ಮೌಲ್ಯಗಳನ್ನು ನೀಡುವ ನೀತಿ ಶಿಕ್ಷಣವೂ ಬೇಕಿದೆ. ಉತ್ತಮ ಸಂಸ್ಕಾರ ಅವಶ್ಯವಾಗಿದೆ. ಮಕ್ಕಳಿಗೆ ಭದ್ರತೆ, ವಾತ್ಸಲ್ಯ, ಮಾರ್ಗದರ್ಶನ, ಶಿಕ್ಷಣ ಹಾಗೂ ಸಂಸ್ಕಾರ ನೀಡುವುದು ಪಾಲಕರ, ಶಿಕ್ಷಕರ ಹಾಗೂ ಸರ್ವರ ಜವಬ್ದಾರಿ ಎಂದರು.
ಶಿರಸಿ ಲಯನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್. ವಿ. ಜಿ. ಭಟ್, ಶಿರಸಿ ಲಯನ್ಸ್ ಕ್ಲಬ್ ಅಧ್ಯಕ್ಷ ಉದಯ ಸ್ವಾದಿ, ಗೌರವ ಕಾರ್ಯದರ್ಶಿ ರವಿ ನಾಯಕ, ಶಿರಸಿ ರೋಟರಿ ಅಧ್ಯಕ್ಷ ಪಾಂಡುರಂಗ ಪೈ, ನೇತ್ರತಜ್ಞರಾದ ರೊಟೇರಿಯನ್ ಡಾ| ಕೆ.ವಿ. ಶಿವರಾಮ್, ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಪ್ರಭಾಕರ ಹೆಗಡೆ, ಲಯನ್ಸ್ ಕ್ಲಬ್ ಕಾರ್ಯದರ್ಶಿ ವಿನಯ ಹೆಗಡೆ ಬಸವನಕಟ್ಟೆ ಉಪಸ್ಥಿತರಿದ್ದರು.
ರಮಾ ಪಟವರ್ಧನ್ ಪರಿಚಯಿಸಿದರು. ಮುಖ್ಯಾಧ್ಯಾಪಕ ಶಶಾಂಕ ಹೆಗಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿಯರಾದ ಮುಕ್ತಾ ನಾಯ್ಕ, ರೇಷ್ಮಾ ಮಿರಾಂದಾ ನಿರ್ವಹಿಸಿದು. ಲಯನ್ಸ್ ಶಾಲೆಯ ಯೂಟ್ಯೂಬ್ ವಾಹಿನಿ ಹಾಗೂ ಜೂಮ್ ಆಪ್ ಮೂಲಕ ಪ್ರಸಾರವಾದ ಈ ಕಾರ್ಯಕ್ರಮವನ್ನು ನಾಲ್ಕು ಸಾವಿರಕ್ಕೂ ಮಿಕ್ಕಿ ಮಕ್ಕಳು, ಪಾಲಕರು, ಶಿಕ್ಷಕರು ಹಾಗೂ ಶಿಕ್ಷಣಾಸಕ್ತರು ವೀಕ್ಷಿಸಿದರು.