ಶಿರಸಿ: ಕಾಂಗ್ರೆಸ್ ಜೆಡಿಎಸ್ ಜಿಲ್ಲಾ ಪ್ರಮುಖರು, ಅಭ್ಯರ್ಥಿ ಕುಳಿತು ಚುನಾವಣಾ ಕಾರ್ಯತಂತ್ರ ರೂಪಿಸಬೇಕಾಗಿದೆ. ಚುನಾವಣಾ ಅಲೆ ಸೃಷ್ಟಿಸಬೇಕಿದೆ. ಭಾಷಣದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಫಲಿತಾಂಶ ಏನೇ ಆದರೂ ಪರಸ್ಪರ ಆರೋಪಿಸುವುದೂ ಸರಿಯಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಸಲಹೆ ಮಾಡಿದರು.
ಅವರು ಮಂಗಳವಾರ ನಗರದ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಜೆಡಿಎಸ್, ಕಾಂಗ್ರೆಸ್ ಪ್ರಮುಖರ ಸಭೆ ನಡೆಸಿ, ಜಾತ್ಯಾತೀತತೆ ಎನ್ನುವುದು ಕೇವಲ ರಾಜಕಾರಣಕ್ಕೆ ಬಳಕೆಯಾಗಬಾರದು. ಚುನಾವಣೆ ಸಲುವಾಗಿ ನಮ್ಮನ್ನು ವಿಶ್ವಾಸಕ್ಕೆ ಪಡೆಯುವ ಕೆಲಸ ಆಗಬಾರದು. ರಾಷ್ಟ್ರಮಟ್ಟದ ಒಪ್ಪಂದಕ್ಕೆ ಅನುಗುಣವಾಗಿ ಜಿಲ್ಲೆಯ ಕಾಂಗ್ರೆಸ್ ಶಕ್ತಿ ಚುನಾವಣೆಗೆ ಬಳಕೆ ಮಾಡ್ತಿದ್ದೇವೆ. ನಮ್ಮ ಪಕ್ಷದ ಕಾರ್ಯಕರ್ತರಿಗೆ ನೋವಾಗದಂತೆ ನೋಡಿಕೊಳ್ಳಬೇಕು. ವಿಶ್ವಾಸದಲ್ಲಿ ಕಾರ್ಯ ಮಾಡಬೇಕು ಎಂದು ಸಲಹೆ ಮಾಡಿದರು.
ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ರಾಜಕೀಯ ಟೀಕೆಗಳನ್ನು ಬಿಟ್ಟು ಜಿಲ್ಲೆಗೆ ಒಳಿತನ್ನುಂಟು ಮಾಡುವ ಯೋಜನೆ ಸಿದ್ಧಪಡಿಸಿಕೊಂಡು ಜನರೆದುರು ಮತಯಾಚನೆ ಮಾಡಬೇಕು. ಬಹಳಷ್ಟು ಕಡೆಗಳಲ್ಲಿ ಸಮ್ಮಿಶ್ರ ಸರ್ಕಾರದಿಂದ ತೊಂದರೆ ಉಂಟಾಗಿದೆ. ಈವರೆಗೆ ಯಾವುದೇ ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರೈಸಿಲ್ಲ. ಬಿಜೆಪಿಗರ ಬೊಗಳೆ ಮಾತನ್ನು ಗಮನಿಸದೆ ಜಾತ್ಯಾತೀತ ಪಕ್ಷದ ಅಭ್ಯರ್ಥಿಯನ್ನು ಜನತೆ ಗೆಲ್ಲಿಸಬೇಕು ಎಂದರು.
ಜಿಡಿಎಸ್ ಜಿಲ್ಲಾಧ್ಯಕ್ಷ ಬಿ.ಆರ್ ನಾಯ್ಕ ಮಾತನಾಡಿ, ಕೋಮುವಾದಿ ಪಕ್ಷದ ವಿರುದ್ಧ ರಾಜಕೀಯ ಪಕ್ಷಗಳು ಒಂದಾಗಿ ಚುನಾವಣೆ ಎದುರಿಸಲಿದ್ದೇವೆ. ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ತಾರತಮ್ಯ, ಭಿನ್ನಮತ ಮಾಡಿಕೊಳ್ಳದೆ ಪರಸ್ಪರ ಸಹಕಾರದಿಂದ ನಮ್ಮ ಮನೆಯ ಕೆಲಸವೆಂದು ಭಾವಿಸಿ ಕೆಲಸ ಮಾಡೋಣ ಎಂದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಎಚ್ ಕೋನರೆಡ್ಡಿ, ರಾಜ್ಯಾದ್ಯಂತ ಇಂದಿನಿಂದ ಜಂಟಿ ಸಭೆಗಳು ನಡೆಯಲಿದೆ. ಮೋದಿ ನೀಡಿದ ಭರವಸೆಗಳೆಲ್ಲವೂ ಸುಳ್ಳಾಗಿದೆ. ಕೇಂದ್ರ ಸರ್ಕಾರದ ವಿರೋಧಿ ಅಲೆ ದೇಶಾದ್ಯಂತ ಇದೆ. ಮಹದಾಯಿ ನ್ಯಾಯಾಧಿಕರಣ ನೋಟಿಫಿಕೇಶನ್ ಹೊರಡಿಸಲು ಕೇಂದ್ರ ಸರ್ಕಾದಿಂದ ಆಗಿಲ್ಲ. ಸಣ್ಣಪುಟ್ಟ ಭಿನ್ನಾಭಿಪ್ರಾಯ ಮರೆತು ಕೆಲಸ ಮಾಡಬೇಕು ಎಂದರು.
ಅಭ್ಯರ್ಥಿ ಆನಂದ ಅಸ್ನೋಟಿಕರ್, ರಾಜಕಾರಣದಲ್ಲಿ ಈವರೆಗೆ ಯಾರೊಬ್ಬರಲ್ಲೂ ಅಗೌರವ ತೋರಿಲ್ಲ. ಅನಂತಕುಮಾರ ವಿರುದ್ಧ ಮೊದಲಿನಿಂದಲೂ ಹೋರಾಟ ಮಾಡುತ್ತಾ ಬಂದಿದ್ದೇನೆ. 22 ವರ್ಷ ಅನಂತಕುಮಾರ ಅಭಿವೃದ್ಧಿ ವಿಚಾರ ಮಾತನಾಡಿಲ್ಲ. ಕೇವಲ ಮೋದಿ ಹೆಸರಲ್ಲಿ ಪ್ರಚಾರ ಮಾಡ್ತಿದ್ದಾರೆ. ಜಿಲ್ಲೆಯ ಜನರಲ್ಲಿ ಅನಂತಕುಮಾರ ಧರ್ಮದ ಆಧಾರದಲ್ಲಿ ಮತಯಾಚನೆ ಮಾಡ್ತಿದ್ದಾರೆ. ಹಿಂದುಳಿದ ಯುವಕರನ್ನು ಕೋಮು ಗಲಭೆಗೆ ಬಳಸಿಕೊಂಡು ನ್ಯಾಯಾಲಯ ತಿರುಗುವ ಕೊಡುಗೆ ನೀಡಿದ್ದಾರೆ.
ಅಭಿವೃದ್ಧಿ ತನ್ನಿಂದ ತಾನೆ ಆಗುತ್ತೆ ನಾನು ಧರ್ಮ ರಕ್ಷಣೆ ಮಾಡುತ್ತೇನೆಂದು ಹೇಳುವ ಹೆಗಡೆ, ಕೈಯಲ್ಲಿ ಕತ್ತಿ ನೀಡುವ ಬದಲು ಕೆಲಸ ಕೊಡುವ ಕಾರ್ಯ ಮಾಡಬೇಕಿತ್ತು. ಹಿಂದುಳಿದ ಜನರನ್ನು ಆರ್ಥಿಕ ಸಬಲರನ್ನಾಗಿ ಮಾಡಿದರೆ ಧರ್ಮ ಉಳಿಯುತ್ತದೆ ಎಂದರು. ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಆರ್. ನಾಯ್ಕ, ಕೋಮುವಾದಿ ಶಕ್ತಿ ಹೊಡೆದೋಡಿಸಲು ಎಲ್ಲರ ಸಹಕಾರ ಬೇಕು ಎಂದರು. ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ವಂದಿಸಿದರು.