Advertisement

ಶಿರಸಿ: ಭಾರತೀಯ ಸೇನಾ ಲೆಫ್ಟಿನೆಂಟ್ ಕೇವಲ್ ಹೆಗಡೆಗೆ ಸನ್ಮಾನ

07:03 PM Dec 07, 2021 | Team Udayavani |

ಶಿರಸಿ: ದೇಶಸೇವೆಗಾಗಿ ತಾಯ್ನಾಡಿಗೆ ಮರಳಿದೆ ಎಂದು ಭಾರತೀಯ ಸೇನೆಯ 15 ಗ್ರೆನೆಡರ್ಸ್ ಲೆಫ್ಟಿನೆಂಟ್ ಕೇವಲ್ ಹೆಗಡೆ ಹೇಳಿದರು.

Advertisement

ಸೋಮವಾರ ಅವರು ಶಿರಸಿ ಲಯನ್ಸ್ ಶಾಲೆಯ ಹಿರಿಯ ವಿದ್ಯಾರ್ಥಿ ಭಾರತೀಯ ಸೇನಾ ಲೆಫ್ಟಿನೆಂಟ್ ಕೇವಲ್ ಹೆಗಡೆಗೆ ಲಯನ್ಸ್ ಶಾಲೆಯ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಹೊರ ದೇಶಕ್ಕಿಂತಲೂ ಸ್ವದೇಶದಲ್ಲಿ ಏನನ್ನಾದರೂ ಸಾಧನೆ ಗೈದು  ದೇಶಕ್ಕೆ ಕೊಡುಗೆ ಕೊಡಬೇಕೆಂಬ  ಹಂಬಲ ತಾವು ಈ ಸ್ಥಾನಕ್ಕೆ ಬರಲು ಕಾರಣವಾಯಿತು.

ವಿದೇಶದಲ್ಲಿದ್ದು ಬೇಕಾದಷ್ಟು  ಗಳಿಕೆ ಮಾಡಿದರೂ ತನ್ನತನದ ಎನ್ನುವುದನ್ನು ಬದಿಗಿಟ್ಟು, ಆ ದೇಶದ ದ್ವಿತೀಯ ದರ್ಜೆಯ ಪ್ರಜೆಯ ಸ್ಥಾನ ಪಡೆದು ಒಟ್ಟಾರೆ ನಡೆಸುವ ಬಾಳ್ವೆಗಿಂತ ಇಡಿಯ ರಾಷ್ಟ್ರ ತನ್ನನ್ನು ಗುರುತಿಸುವ ರೀತಿಯಲ್ಲಿ ತಾನೇನಾದರೂ ಸಾಧನೆ ಮಾಡಬೇಕೆಂಬ ಹಂಬಲ ಭಾರತೀಯ ಸೇನಾ ನೇಮಕಾತಿಯ ಎಸ್.ಎಸ್.ಬಿ.ಪರೀಕ್ಷೆಗೆ ಕುಳಿತುಕೊಳ್ಳುವಲ್ಲಿ ಪ್ರೇರೇಪಣೆ  ನೀಡಿತು ಎಂದರು.

ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ಅವರಲ್ಲಿ ಸೇನೆಯಲ್ಲಿ ಸೇರಿದಾಗ ಅವರ ಮೂಲ ಪ್ರೇರಣೆ ಯಾರು ? ಎಂಬ ಪ್ರಶ್ನೆಗೆ ’ನನಗೆ ನಾನೇ ಪ್ರೇರಣೆ’ ಎಂಬ ಮಾರ್ಮಿಕ ಉತ್ತರ ಕೊಟ್ಟರು. ಸೈನ್ಯದಲ್ಲಿ ತನ್ನನ್ನು ನಂಬಿ ಧೈರ್ಯದಿಂದ ಮುನ್ನಡೆಯುವ ತನ್ನ ಮುಂದಿನ ಸೈನಿಕರುಗಳಿಗೆ ತನ್ನ ದಿಟ್ಟತನದ ಗಟ್ಟಿತನದ ವ್ಯಕ್ತಿತ್ವ ಪ್ರೇರಣೆಯಾಗಬೇಕೆನ್ನುವ ತನ್ನ ಅಂತಃಸತ್ವವೇ ತನಗೆ ಪ್ರೇರಣೆ ಎಂದು ಮಕ್ಕಳಿಗೆ ವಿವರಿಸಿದರು.

Advertisement

ಅಷ್ಟೊಂದು ಕಲಿತು.. ಬಹುದೊಡ್ಡ ಕಂಪನಿಯಲ್ಲಿ ಒಳ್ಳೆಯ ಗಳಿಕೆಯಲ್ಲಿ ಇರಬಹುದಾದ ಸಂದರ್ಭದಲ್ಲಿಯೂ ಸೇನೆಗೆ ಸೇರುವ ತಮ್ಮ ನಿರ್ಧಾರಕ್ಕೆ ಹೆತ್ತವರ ತಡೆ ಬಂದಿಲ್ಲವೇ? ಎಂಬ ಮಕ್ಕಳ ಪ್ರಶ್ನೆಗೆ, ಕೇವಲ್ ಅವರ ತಂದೆ ನಿವೃತ್ತ ಜೀವನ ನಡೆಸುತ್ತಿರುವ ಡಾಕ್ಟರ್ ಜೀ.ವಿ. ಹೆಗಡೆ ಉತ್ತರಿಸಿದರು. ಬದುಕಿನಲ್ಲಿ ಹೇಗೆ ಮುಂದುವರಿಯಬೇಕು, ಯಾವುದನ್ನು ಆಯ್ಕೆ ಮಾಡಬೇಕು ಎಂದು ನಿರ್ಧಾರಿಸುವುದು ಮಕ್ಕಳ ಆಯ್ಕೆಗೆ ಬಿಟ್ಟಿದ್ದು, ಮಗನ ಸ್ವತಂತ್ರ ನಿರ್ಧಾರವನ್ನು ತಾನು ಗೌರವಿಸಿದೆ ಎಂಬ ನೇರ ಉತ್ತರವನ್ನು ನೀಡಿದರು.

ತಾಯಿ, ಪ್ರಾಂಶುಪಾಲೆ ಕೋಮಲಾ ಭಟ್, ಮಗನ ನಿರ್ಧಾರದಿಂದ ತಾವು ಕೊಂಚ ಭಾವುಕರಾಗಿದ್ದು ನಿಜ, ಆದರೆ ಕೋಟ್ಯಂತರ ಜನರ ನಡುವೆ ತನ್ನ ಹೆಜ್ಜೆಯ ಗುರುತು ಮೂಡಿಸಿ- ಸರ್ವರಿಗೂ ಮಾದರಿಯಾಗುವ ರೀತಿಯಲ್ಲಿ ಬಾಳುವ ಮಗನ ನಿರ್ಧಾರವನ್ನು ತಾನು ಗೌರವಿಸಿದೆ,  ಹಾರೈಸಿದೆ ಎಂದರು. ಲೆಫ್ಟಿನೆಂಟ್ ಕೇವಲ್ ಅವರು ಭಾರತೀಯ ಸೇನೆಯ ತರಬೇತಿ ಚಟುವಟಿಕೆಗಳ ಚಿತ್ರಣವನ್ನು ದೃಶ್ಯೀಕರಿಸಿ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿಕೊಟ್ಟರು. ಚೆನ್ನೈನಲ್ಲಿ ತಾವು ತರಬೇತಿ ಪಡೆಯುವಾಗ ತಾವು ಪಡೆದ ಅನುಭವಗಳನ್ನು, ರೋಚಕ ಕ್ಷಣಗಳನ್ನು ಸೆರೆ ಹಿಡಿದ ಚಿತ್ರಣವನ್ನು ವಿದ್ಯಾರ್ಥಿಗಳಿಗೆ ಪ್ರದರ್ಶಿಸಿ ಮಕ್ಕಳ ಮನಗೆದ್ದರು.

ಅಧ್ಯಕ್ಷತೆ ವಹಿಸಿದ್ದ ಲಯನ್ ಎನ್.ವಿ.ಜಿ ಭಟ್ ಕೇವಲ ಹೆಗಡೆಯವರ ಅವರ ವ್ಯಕ್ತಿತ್ವ ಮುಂದಿನ ವಿದ್ಯಾರ್ಥಿಗಳಿಗೆ  ಮಾದರಿಯಾಗಲಿ ಎಂದರು. ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಪ್ರೊಫೆಸರ್ ರವಿ ನಾಯಕ್, ನಮ್ಮಲ್ಲಿ ಕಲಿತ ವಿದ್ಯಾರ್ಥಿ ಇಂದು ಇಂತಹ ಹಿರಿಮೆ-ಗರಿಮೆಯನ್ನು ಸಾಧಿಸಿ ಸಮಾಜಕ್ಕೆ ಮಾದರಿಯಾಗಿರುವುದು ಸ್ತುತ್ಯಾರ್ಹ, ಮುಂದಿನ ಎಳೆಯರಿಗೆ ಕೇವಲ ವ್ಯಕ್ತಿತ್ವ ಮಾದರಿಯಾಗಲಿ ಎಂದರು.

ಶಾಲೆಯ ಮುಖ್ಯಾಧ್ಯಾಪಕ ಶಶಾಂಕ ಹೆಗಡೆ ಸ್ವಾಗತಿಸಿದರು. ಸಹಶಿಕ್ಷಕಿ ಮುಕ್ತ ನಾಯಕ್ ನಿರ್ವಹಿಸಿದರು. ಚೈತ್ರ ಹೆಗಡೆ ವಂದಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಪ್ರಭಾಕರ್ ಹೆಗಡೆ, ಶಿಕ್ಷಣ ಸಂಸ್ಥೆಯ ಸದಸ್ಯ ಕೆ.ಬಿ.ಲೋಕೇಶ್ ಹೆಗಡೆ, ಕ್ಲಬ್ಬಿನ ಖಜಾಂಚಿ ಅನಿತಾ ಹೆಗಡೆ, ಲಯನ್ಸ್ ಕ್ಲಬ್ಬಿನ ಕಾರ್ಯದರ್ಶಿ ವಿನಯ್ ಹೆಗಡೆ, ಜ್ಯೋತಿ ಭಟ್, ತ್ರಿವಿಕ್ರಮ್ ಪಟವರ್ಧನ್, ಅಶೋಕ್ ಹೆಗಡೆ, ಅಶ್ವತ್ಥ ಹೆಗಡೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next