ಶಿರಸಿ: ಗೋವಿನ, ಜಾನುವಾರು ರಕ್ಷಣೆಗೆ ಮುಂದಾದರೆ ಕೃಷಿ ಕೂಡ ಸಮೃದ್ಧವಾಗುತ್ತದೆ. ಕೃಷಿಯ ಉಳಿವಿಗೆ ಅದೊಂದೇ ಮಾರ್ಗ ಎಂದು ಬಣ್ಣದ ಮಠದ ಶಿವಲಿಂಗ ಸ್ವಾಮೀಜಿ ಆಶಿಸಿದರು. ಅವರು ದಾಸನಕೊಪ್ಪದಲ್ಲಿ ಶಿರಸಿ ಎಪಿಎಂಸಿ ಹಮ್ಮಿಕೊಂಡ ರೈತ ಸಮಾವೇಶ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ನೀಡಿ ಆಶೀರ್ವಚನ ನುಡಿದರು.
ನಿಸರ್ಗ ಅರಿತು ಕೃಷಿ ಮಾಡಬೇಕು. ಅದು ಬಿಟ್ಟು ಪಾಶ್ಚಾತ್ಯ ಕೃಷಿಗೆ ಮಾರು ಹೋಗಿದ್ದು ಸಮಸ್ಯೆಗೆ ಮೂಲ ಕಾರಣ. ನಮ್ಮ ನೆಲದ ಕೃಷಿ ಪದ್ಧತಿ ನಮ್ಮ ಉಳಿವಿನ ದಾರಿ ಎಂದ ಅವರು, ಕೃಷಿಕನ ಸಾಲದ ಶೂಲಕೆ ಯಂತ್ರಗಳೂ ಕಾರಣ. ಕೃಷಿ ಅಧ್ಯಯನ ಮಾಡದೇ ಹೊರಗಿನ ಆಡಂಬರಕ್ಕಾಗಿ ರೈತ ಮುಂದಾಗಿದ್ದೇ ಹಲವು ಸಮಸ್ಯೆಗೆ ಕಾರಣ. ಇಂದು ಆತ್ಮಹತ್ಯೆಯಂತಹ ಸಮಸ್ಯೆಗೆ ಬಂದು ತಲುಪಿದ್ದೇವೆ. ಇದೇ ಮುಂದುವರಿದರೆ ಮುಂದೆ ಉಳುಮೆ ಮಾಡಲೂ ದನ ಕರುಗಳೇ ಸಿಗಲ್ಲ. ಯಂತ್ರಕ್ಕೆ ಇಂಧನ ಸಮಸ್ಯೆ ಕೂಡ ಆಗುತ್ತವೆ. ನಿಸರ್ಗದಲ್ಲಿ ಯಾಂತ್ರೀಕರಣ ಜಗತ್ತಿಗೆ ಬೀಳುವದು ತಪ್ಪಬೇಕಿದೆ ಎಂದೂ ಸಲಹೆ ಮಾಡಿದರು.
ನಮ್ಮ ಕೃಷಿ ಸವಾಲು ಹಾಗೂ ಸಮಸ್ಯೆ ನಿವಾರಣೆಗೆ ಭಾರತದ ಸನಾತನ ಪರಂಪರೆಯಲ್ಲಿ ಮಹತ್ವದ್ದಾದ ಗೋವುಗಳನ್ನು ಸಾಕಬೇಕು. ಜಾನುವಾರುಗಳಿಗೂ ಅನುಕೂಲ ಆಗುವ ಕೃಷಿ ಮಾಡಬೇಕು ಎಂದರು. ಎಪಿಎಂಸಿ ಅಧ್ಯಕ್ಷ ಸುನೀಲ ನಾಯ್ಕ ಅಧ್ಯಕ್ಷತೆ ವಹಿಸಿ, ಎರಡು ದಿನಗಳ ರೈತ ಸಮಾವೇಶದಲ್ಲಿ, ಆರೋಗ್ಯ ಶಿಬಿರ, ರೈತ ಮಾಹಿತಿ, ಕೃಷಿ ಯಂತ್ರೋಪಕರಣಗಳ ಮಾಹಿತಿ, ರೈತರು ಹಾಗೂ ವಿಜ್ಞಾನಿಗಳ ಸಮಾಗಮ ಇಲ್ಲಾಗಿದೆ ಎಂದರು. ಕೃಷಿಕ ಸಮಾಜದ ಅಧ್ಯಕ್ಷ ಎಸ್.ಎನ್. ಭಟ್ಟ ಬಿಸಲಕೊಪ್ಪ, ತಾ.ಪಂ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಉಪಾಧ್ಯಕ್ಷ ಚಂದ್ರು ಎಸಳೆ, ಜಿಪಂ ಸದಸ್ಯರಾದ ಉಷಾ ಹೆಗಡೆ, ಬಸವರಾಜ್ ದೊಡ್ಮನಿ, ರೂಪಾ ನಾಯಕ, ಧಾರವಾಡ ಒಕ್ಕೂಟ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಎಲ್.ಆರ್. ಹೆಗಡೆ ಮತ್ತಿಹಳ್ಳಿ, ರವೂಫಸಾಬ, ಪ್ರಶಾಂತ ಗೌಡ, ಸವಿತಾ ಹುಳಗೋಳ ಇತರರು ಇದ್ದರು. ಗಿರಿಧರ ಕಬ್ನಳ್ಳಿ ನಿರ್ವಹಿಸಿದರು.
ಪ್ರದರ್ಶನ: ಮೊಟೊಕಾಟ್, ಟ್ರಾಕ್ಟರ್, ಪವರ್ ಸ್ಪ್ರೆ ಸೇರದಂತೆ ಕೃಷಿ ಯಾಂತ್ರೀಕರಣ, ಕೃಷಿ ಸಂಬಂತ ವಸ್ತುಗಳ, ಕೃಷಿ ಇಲಾಖೆಗಳ, ಜಾನುವಾರುಗಳು, ನೇಗಿಲು, ಚಕ್ಕಡಿಗಾಡಿಗಳು ಪ್ರದರ್ಶನಗಳು ಗಮನ ಸೆಳೆದವು. ಮಂಗಳೂರು ದೇರಳಕಟ್ಟೆ ಆಸ್ಪತ್ರೆಯ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ಕೂಡ ನಡೆದವು.