ಶಿರಸಿ: ಒಂದೇ ಒಂದು ಅಣೆಕಟ್ಟು ಇಲ್ಲದೇ ಜೀವಂತವಾಗಿದ್ದ ಅಘನಾಶಿನಿ ನದಿಗೆ ಸಂಚಕಾರ ಕಾಡುವಂತಾಗಿದೆ. ಇಲ್ಲಿನ ನದಿಯ ನೀರನ್ನು ತಿರುಗಿಸಿ ಮಹಾ ನಗರದ ಕುಡಿಯುವ ನೀರಿನ ಯೋಜನೆಗೆ ಸೇರ್ಪಡೆಗೊಳಿಸಲು ಸಚಿವರ ಹೇಳಿಕೆಯ ಬೆನ್ನಲ್ಲೇ ಎಲ್ಲೆಡೆ ಬಿಸಿ ಬಿಸಿ ಚರ್ಚೆ ಪ್ರಾರಂಭವಾಗಿದೆ.
ಶಿರಸಿಯ ಶಂಕರ ಹೊಂಡದಲ್ಲಿ ಜನಿಸಿದ ಅಘನಾಶಿನಿ ನದಿ ಕರಾವಳಿಯಲ್ಲಿ ಸಮುದ್ರ ಸೇರುತ್ತದೆ. ಕುಮಟಾದಲ್ಲಿ ಅಘನಾಶಿನಿ ಸಮುದ್ರ ಸೇರುವ ಮೊದಲು ಅನೇಕ ಕುಟುಂಬಗಳಿಗೂ ಜೀವನಾಧಾರವಾಗಿದೆ. ಈ ನದಿ ಜೀವಂತಿಕೆಯ ಹರಿವಾಗಿದ್ದು, ಇದು ಸಾವಿರಾರು ಊರುಗಳನ್ನು ಜೀವಂತವಾಗಿರಿಸಿದ್ದೂ ಇದೇ ನದಿಯಾಗಿದೆ.
ಅಘನಾಶಿನಿಗೆ ಈವರೆಗೆ ಒಂದೂ ಅಣೆಕಟ್ಟು ಇಲ್ಲ. ಕಳೆದ ದಶಕಗಳಿಗೆ ಹೋಲಿಸಿದರೆ ಬೇಸಿಗೆಯಲ್ಲಿ ನೀರಿನ ಹರಿವು ತೀರಾ ಇಳಿಕೆಯಾಗಿದೆ. ಶಿರಸಿ ನಗರಕ್ಕೆ ಇದರಿಂದಲೂ ಮಾರಿಗದ್ದೆ ಎಂಬಲ್ಲಿಂದ ನೀರು ತರಲಾಗಿದೆ. ಈಗಾಗಲೇ ಕೃಷಿ ನೀರಾವರಿಗೂ ಆಸರೆಯಾಗಿರುವ ನದಿಯ ನೀರನ್ನು ಬಹುಪಾಲು ರಾಜಧಾನಿಗೆ ಹರಿಸಿದರೆ ಮಲೆನಾಡು ಮರಳು ನಾಡಾಗುತ್ತವೆ ಎಂಬ ಆತಂಕ ಪರಿಸರ ಪ್ರಿಯರನ್ನು ಕಾಡುವಂತಾಗಿದೆ.
ಅಘನಾಶಿನಿ ನದಿ ತನ್ನ ಸುತ್ತಲೂ ಯಾರೂ ಕಾಣದ ಅಪರೂಪದ ಕ್ಷಣ ಭಂಗುರ ನಿಧಿಗಳನ್ನು ಒಳಗೊಂಡಿದೆ. ಪಶ್ಚಿಮ ಘಟ್ಟದಲ್ಲಿನ ಅಳಿವನಂಚಿನ ಅನೇಕ ವನಸ್ಪತಿಗಳಿಗೂ ಆಶ್ರಯ ತಾಣ ಇದೇ ಆಗಿದೆ. ಸಹ್ಯಾದ್ರಿ ತಪ್ಪಲಿನ ಈ ನದಿ ನೀರನ್ನು ಒಯ್ಯುವ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಕಳೆದ ಆರೆಂಟು ವರ್ಷಗಳ ಹಿಂದೆಯೂ ಅಘನಾಶಿನಿ ನದಿ ನೀರನ್ನು ಶರಾವತಿ ನದಿಗೆ ಸೇರಿಸಿ ಶಿವಮೊಗ್ಗದ ಮೂಲಕ ಬೆಂಗಳೂರು ಒಯ್ಯುವ ಪ್ರಸ್ತಾಪ ಇತ್ತು. ಆಗಲೂ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಅಘನಾಶಿನಿ ನದಿಗೆ ಅಣೆಕಟ್ಟು ನಿರ್ಮಾಣದ ಪ್ರಸ್ತಾಪ ಕೂಡ ಇದ್ದವು. ಈ ಕಾರಣದಿಂದ ಅಂದಿನ ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಅಶೀಸರ ಅಘನಾಶಿನಿ ತಟವನ್ನು ಅಧ್ಯಯನ ನಡೆಸಿ ಸಂರಕ್ಷಿತ ಸ್ಥಾನ ಎಂದು ಘೋಷಿಸಿದ್ದರು. ಇನ್ನು ಮುಂದೆ ಇಂತಹ ಪ್ರಸ್ತಾಪ ಬರದು ಎಂಬ ಭರವಸೆ ಕೂಡ ವ್ಯಕ್ತವಾಗಿತ್ತು. ಆದರೆ, ಇದೀಗ ಮತ್ತೆ ಇಂತಹ ಪ್ರಸ್ತಾಪ ಕೇಳಿ ಬಂದಿದ್ದು ಇನ್ನೊಂದು ಪರಿಸರ ಚಳವಳಿಗೆ ನಾಂದಿ ಹಾಡಿದೆ.
ಪಶ್ಚಿಮ ಘಟ್ಟಕ್ಕೆ ಗಾಯ
ಅಘನಾಶಿನಿ ತಟದಲ್ಲಿ ಸಾವಿರಾರು ಕುಟುಂಬಗಳು ಕೃಷಿ ಮಾಡುತ್ತಿವೆ. ಸಮುದ್ರದ ಮುಖಜ ಭೂಮಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾರೆ. ಈಗಾಗಲೇ ಸಮುದ್ರದ ಉಪ್ಪು ನೀರು ಒಳ ನುಗ್ಗುತ್ತಿದ್ದು, ನದಿಯ ನೀರನ್ನು ಒಮ್ಮೆಲೆ ಎತ್ತಿದರೆ ಉಪ್ಪು ನೀರು ಇನ್ನೂ ಒಳ ಸೇರುವ ಆತಂಕ ಮನೆ ಮಾಡಿದೆ. ಇದೂ ಅಲ್ಲದೇ ನೀರು ಒಯ್ಯಲು ಚಾನೆಲ್ ಮಾಡಿದಾಗ ಪಶ್ಚಿಮ ಘಟ್ಟಕ್ಕೆ ಗಾಯಗಳಾಗಲಿವೆ. ಕಾಲುವೆ ತೋಡಿದಾಗ ಅನೇಕ ಅಧ್ವಾನಗಳಿಗೂ ಇದು ಸೃಷ್ಟಿಗೆ ಕಾರಣವಾಗಲಿದೆ.
ನಮ್ಮ ಶಂಕರ ಹೊಂಡದಿಂದ ಉಗಮಗೊಂಡ ಅಘನಾಶಿನಿಯನ್ನು ಅದರಷ್ಟಕ್ಕೆ ಹರಿಯಲು ಬಿಡಬೇಕು. ಇಂತಹ ನದಿಗೆ ಅಣೇಕಟ್ಟು ನಿರ್ಮಾಣ, ನದಿ ನೀರು ಒಯ್ಯುವದನ್ನು ಬಿಡಬೇಕು. ಅಂತರ್ಜಲ ಹೆಚ್ಚಳಕ್ಕೆ ಕೊರತೆ ಇದ್ದಲ್ಲಿ ಕ್ರಮ ಕೈಗೊಳ್ಳಬೇಕು.
•
ಶ್ರೀನಿವಾಸ ಹೆಬ್ಟಾರ
ಜೀವ ಜಲ ಕಾರ್ಯಪಡೆ ಅಧ್ಯಕ್ಷ
ಅಘನಾಶಿನಿ ನದಿ ನೀರನ್ನು ಇನ್ನೊಂದು ಕಡೆ ಒಯ್ಯುವ ಕುರಿತು ನಮ್ಮ ಇಲಾಖೆಗೆ ಯಾವುದೇ ಮಾಹಿತಿ ಇಲ್ಲ.
•
ಎಸ್.ಜಿ. ಹೆಗಡೆ
ಉಪ ಅರಣ್ಯ ಸಂರಕ್ಷಣಾಧಿಕಾರಿ