Advertisement

16 ಸಾವಯವ ಕ್ಲಸ್ಟರ್  ಸ್ಥಾಪನೆ 

11:29 AM Mar 03, 2019 | Team Udayavani |

ಶಿರಸಿ: ರೈತರು ಸಾವಯವ ಪದ್ಧತಿಯಲ್ಲಿ ಬೆಳೆದ ತರಕಾರಿ, ಆಹಾರ ಧಾನ್ಯಗಳಿಗೆ ನಗರದ ಕದಂಬ ಸಂಸ್ಥೆ ಮಾರುಕಟ್ಟೆ ಒದಗಿಸಿದೆ. ರೈತರಿಂದ ಗ್ರಾಹಕರಿಗೆ ನೇರವಾಗಿ ತಲುಪಿಸುವ ಕಲ್ಪನೆಯೊಂದಿಗೆ ಸಂಸ್ಥೆ ಹಮ್ಮಿಕೊಂಡ ಸಾವಯವ ಸಂತೆಗೆ ಚಾಲನೆ ನೀಡಲಾಯಿತು.

Advertisement

ಸಸ್ಯ ಸಂತೆ ಉದ್ಘಾಟಿಸಿದ ಕೃಷಿ ಇಲಾಖೆ ಉಪನಿರ್ದೇಶಕ ನಟರಾಜ, ರೈತರು ಬೆಳೆದ ಬೆಳೆಗೆ ಯೋಗ್ಯ ಬೆಲೆ ಇಲ್ಲ. ಗ್ರಾಹಕರು ಶುದ್ಧ ಆಹಾರೋತ್ಪನ್ನಗಳು ಲಭ್ಯವಾಗುತ್ತಿಲ್ಲ ಎಂಬ ಅಳಲಿದೆ. ಸಾವಯವ ಮಾದರಿಯಲ್ಲಿ ರೈತರಿಗೆ ತರಕಾರಿ ಮತ್ತು ಆಹಾರೋತ್ಪನ್ನಗಳನ್ನು ಬೆಳೆಯಲು ನಾವು ಉತ್ತೇಜಿಸುವ ಜೊತೆಗೆ ಗ್ರಾಹಕರಿಗೂ ನೇರವಾಗಿ ರೈತರಿಂದ ಖರೀದಿಗೆ ಅವಕಾಶ ಮಾಡಿಕೊಡಬೇಕು.

ಸಾವಯವ ವಿಧಾನದಲ್ಲಿ ಬೆಳೆದ ಕೃಷಿ ಉತ್ಪನ್ನಗಳಿಗೆ ಸದಾ ಬೇಡಿಕೆ ಇದೆ. ಕದಂಬ ಮಾರ್ಕೆಟಿಂಗ್‌ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ಜಿಲ್ಲೆಯಲ್ಲಿ 16 ಕಡೆಗಳಲ್ಲಿ ಸಾವಯವ ಕ್ಲಸ್ಟರ್‌ಗಳ ಮೂಲಕ ರೈತರಿಗೆ ಪ್ರೋತ್ಸಾಹಿಸುತ್ತಿದ್ದೇವೆ. ಜೇನು, ತರಕಾರಿ, ಜೊಯಿಡಾ ತಾಲೂಕಿನಲ್ಲಿ ಅಕ್ಕಿ, ಭಟ್ಕಳ ತಾಲೂಕಿನ ಕೆಲ ಹಳ್ಳಿಗಳಲ್ಲಿ ಸಾವಯವ ಕ್ಲಸ್ಟರ್‌ ಮೂಲಕ ತೆಂಗಿನ ಎಣ್ಣೆ ಉತ್ಪಾದಿಸಿ ಗ್ರಾಹಕರಿಗೆ ತಲುಪಿಸುತ್ತಿದ್ದೇವೆ ಎಂದರು.

ಕದಂಬ ಮಾರ್ಕೆಟಿಂಗ್‌ ವ್ಯವಸ್ಥಾಪಕ ವಿಶ್ವೇಶ್ವರ ಭಟ್‌, ಪ್ರತಿ 15 ದಿನಗಳಿಗೊಮ್ಮೆ ಸಂಸ್ಥೆಯ ಆವರಣದಲ್ಲಿ ಸಾವಯವ ಸಂತೆ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ. ಇದೇ ರೀತಿ ಮಾರ್ಚ್‌ 2ರಂದು ಅಪ್ಪೆಮಿಡಿ ಮೇಳ, ಏಪ್ರಿಲ್‌ ತಿಂಗಳಿನಲ್ಲಿ ಕೋಕಂ ಮೇಳ ಮತ್ತು ಜೂನ್‌ ತಿಂಗಳ ಮೊದಲ ವಾರದಲ್ಲಿ ಹಲಸಿನ ಮೇಳ ಆಯೋಜಿಸಲಾಗುತ್ತದೆ. ಸಾವಯವ ಪದ್ಧತಿಯಲ್ಲಿ ಬೆಳೆದ ತರಕಾರಿ ಮತ್ತು ವಿವಿಧ ಕೃಷಿ ಉತ್ಪನ್ನಗಳು ಸಂತೆಯಲ್ಲಿ ಯೋಗ್ಯ ಬೆಲೆಯಲ್ಲಿ ಲಭ್ಯವಿದ್ದು. ಅಂಕೋಲಾದಿಂದ ರೈತರು ತಂದ ಕಲ್ಲಂಗಡಿ ಹಣ್ಣುಗಳು, ಸುವರ್ಣಗಡ್ಡೆ, ಗೋಕರ್ಣದ ರೈತರು ತಂದ ಮೆಣಸು, ಗೆಣಸು, ತೊಂಡೆಕಾಯಿ ಹಾಗೂ ಸೊಪ್ಪು ಅಧಿಕ ಸಂಖ್ಯೆಯಲ್ಲಿ ಇದೆ ಎಂದರು. ಕೃಷಿ ಇಲಾಖೆ ಪ್ರಮುಖರಾದ ರಶ್ಮಿ ಶಹಾಪುರಮಠ, ಪ್ರಮುಖರಾದ ಕೆ.ವಿ. ಕೊರ್ಸೆ ಮತ್ತು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next