Advertisement

ಶಿರ್ಲಾಲು: ಕೆಸರುಗದ್ದೆಯಂತಾದ ಕುಕ್ಕುಜೆ ಬೈಲು ರಸ್ತೆ

10:31 PM Jun 14, 2019 | Sriram |

ಅಜೆಕಾರು: ಶಿರ್ಲಾಲು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮುಂಡ್ಲಿ ಸಂಪರ್ಕಿಸುವ ಕುಕ್ಕುಜೆ ಬೈಲು ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ಮಳೆಯ ನೀರಿಗೆ ಮಣ್ಣು ರಾಡಿ ಎದ್ದು ಕೆಸರು ಗದ್ದೆಯಂತಾಗಿದೆ.

Advertisement

ಶಿರ್ಲಾಲುವಿನಿಂದ ಮುಂಡ್ಲಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯು ಸುಮಾರು 4 ಕಿ.ಮೀ.ಯಷ್ಟು ಉದ್ದವಿದ್ದು ಇದರಲ್ಲಿ ಸುಮಾರು 2 ಕಿ.ಮೀ.ಯಷ್ಟು ಭಾಗ ಈವರೆಗೂ ಡಾಮಾರು ಕಂಡಿಲ್ಲ.

ರಸ್ತೆಯಲ್ಲಿ ಬೃಹತ್‌ ಹೊಂಡಗಳು ನಿರ್ಮಾಣವಾಗಿದ್ದು ಕಳೆದ ಬೇಸಿಗೆಯಲ್ಲಿ ಶಿರ್ಲಾಲು ಪಂಚಾಯತ್‌ನಿಂದ ಹೊಂಡಗಳಿಗೆ ಮಣ್ಣನ್ನು ಹಾಕಲಾಗಿದ್ದು ಆ ಮಣ್ಣು ರಾಡಿ ಎದ್ದು ಈಗ ಸಂಚಾರ ನಡೆಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕುಕ್ಕುಜೆ ಬೈಲು, ಮುಡಾಯಿಗುಡ್ಡೆ ಪರಿಸರದವರಿಗೆ ಸಂಪರ್ಕದ ಏಕೈಕ ರಸ್ತೆ ಇದಾಗಿದ್ದು ಅಲ್ಪ ಸಂಖ್ಯಾತರ ಹಾಗೂ ಇತರ ಸಮುದಾಯಗಳ ನೂರಾರು ಮನೆಗಳಿದ್ದು ನಿತ್ಯ ಸಂಚಾರಕ್ಕೆ ಸಂಕಟಪಡಬೇಕಾಗಿದೆ.

ಈ ರಸ್ತೆಯಲ್ಲಿ ಕಾಲ್ನಡಿಗೆಯ ಸಂಚಾರವೂ ಕಷ್ಟಕರವಾಗಿದ್ದು ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ತೆರಳಲು ಹರಸಾಹಸ ಪಡಬೇಕಾಗಿದೆ.

Advertisement

ಅಲ್ಲದೆ ರಸ್ತೆಯ ಇಕ್ಕೆಲಗಳಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದರಿಂದ ಮಳೆಯ ನೀರು ರಸ್ತೆಯಲ್ಲಿಯೇ ಹರಿಯುತ್ತಿದ್ದು ರಸ್ತೆ ಇನ್ನಷ್ಟೂ ಹದಗೆಟ್ಟು ಸಂಪರ್ಕ ಕಡಿತದ ಭೀತಿ ಸ್ಥಳೀಯರನ್ನು ಕಾಡುತ್ತಿದೆ.

ಶಿರ್ಲಾಲು ಗ್ರಾಮಸ್ಥರಿಗೆ ತಾಲೂಕು ಕೇಂದ್ರ ಕಾರ್ಕಳವನ್ನು ಸಂಪರ್ಕಿಸಲು ಅತೀ ಹತ್ತಿರದ ರಸ್ತೆ ಇದಾಗಿದ್ದು ರಸ್ತೆ ಅವ್ಯವಸ್ಥೆಯಿಂದಾಗಿ ಅಜೆಕಾರು ಮಾರ್ಗವಾಗಿ ಸುತ್ತು ಬಳಸಿ ಸಂಚರಿಸಬೇಕಾಗಿದೆ.

ಮುಂಡ್ಲಿ ಗ್ರಾಮಸ್ಥರು ಶಿರ್ಲಾಲು ಗ್ರಾಮ ಪಂಚಾಯತ್‌ ಕಚೇರಿಗೆ ತೆರಳಲು ಇದೇ ರಸ್ತೆಯನ್ನು ಅವಲಂಬಿಸಬೇಕಾಗಿದ್ದು ಸಂಚಾರ ನಡೆಸುವುದು ಅಸಾಧ್ಯವಾಗಿದೆ.

ಈ ಭಾಗಕ್ಕೆ ಬಸ್ಸು ಸಂಚಾರ ಇಲ್ಲದೆ ಇರುವುದರಿಂದ ನಿತ್ಯ ಸಂಚಾರಕ್ಕೆ ಆಟೋ ರಿಕ್ಷಾವನ್ನೇ ಅವಲಂಬಿಸಬೇಕಾಗಿದ್ದು ಹದಗೆಟ್ಟ ರಸ್ತೆಯಿಂದಾಗಿ ರಿಕ್ಷಾ ಚಾಲಕರು ಸಂಚಾರಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಸ್ಥಳೀಯರು ಕಾಲ್ನಡಿಗೆಯಲ್ಲಿಯೇ ಸಂಚರಿಸಬೇಕಾಗಿದ್ದು ಇದೀಗ ರಸ್ತೆ ಸಂಪೂರ್ಣ ರಾಡಿ ಎದ್ದಿರುವುದರಿಂದ ನಡೆದುಕೊಂಡು ಹೋಗಲೂ ಅಸಾಧ್ಯವಾಗಿದೆ ಎಂಬುದು ಸ್ಥಳೀಯರ ಅಳಲು.
ಸಂಬಂಧ ಪಟ್ಟ ಇಲಾಖಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನ ಹರಿಸಿ ಸ್ಥಳೀಯರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಈ ಭಾಗದ ಜನತೆ ಮನವಿ ಮಾಡಿದ್ದಾರೆ.

ಮನವಿಗೆ ಬೆಲೆ ಇಲ್ಲ
ರಸ್ತೆ ಅಭಿವೃದ್ಧಿಪಡಿಸುವಂತೆ ದಶಕಗಳಿಂದ ಜನಪ್ರತಿನಿಧಿಗಳಿಗೆ, ಇಲಾಖಾಧಿಕಾರಿಗಳಿಗೆ ನಿರಂತರ ಮನವಿ ಮಾಡಿದರೂ ಯಾವುದೇ ಪ್ರಯೋಜನ ಇಲ್ಲದಂತಾಗಿದೆ. ಶಿರ್ಲಾಲು ಗ್ರಾಮ ಪಂಚಾಯತ್‌ ಆಡಳಿತ ಕಳೆದ ಬೇಸಗೆಯಲ್ಲಿ ಕಾಟಾಚಾರಕ್ಕೆ ರಸ್ತೆಯ ಹೊಂಡಗಳಿಗೆ ಮಣ್ಣನ್ನು ಹಾಕಿದ್ದು ಈಗ ಮಳೆ ಬಂದು ರಸ್ತೆ ಕೆಸರಿನ ಹೊಂಡದಂತಾಗಿ ಸಂಚರಿಸುವುದೇ ಅಸಾಧ್ಯವಾಗಿದೆ.
-ನಿತಿನ್‌ ಶಿರ್ಲಾಲು, ಸ್ಥಳೀಯರು

ಟೆಂಡರ್‌
ಬಳಿಕ ಕಾಮಗಾರಿ
ಕುಕ್ಕುಜೆ ಬೈಲು ರಸ್ತೆ ಅಭಿವೃದ್ಧಿಗೆ ಶಾಸಕರ ನಿಧಿಯಿಂದ ರೂ.25 ಲಕ್ಷಕ್ಕೆ ಅನುಮೋದನೆ ದೊರೆತ್ತಿದ್ದು ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಾಮಗಾರಿ ನಡೆಸಲಾಗುವುದು.
-ಉದಯ ಕೋಟ್ಯಾನ್‌,
ಜಿಲ್ಲಾ ಪಂಚಾಯತ್‌ ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next