Advertisement

ಓಂ ಹಿಂದೂ ಮಹಾಗಣಪತಿ ವಿಸರ್ಜನೆ

03:55 PM Sep 16, 2019 | Naveen |

ಶಿರಾಳಕೊಪ್ಪ : ಪಟ್ಟಣದ ಓಂ ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆ ಶನಿವಾರ ಶಾಂತಯುತವಾಗಿ ನಡೆಯಿತು.

Advertisement

ಪಟ್ಟಣದ ಬಸ್‌ ನಿಲ್ದಾಣದ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಗಣಪತಿ ಮೂರ್ತಿ ಮೆರವಣಿಗೆಗೆ ಮಧ್ಯಾಹ್ನ ಸಂಸದ ಬಿ.ವೈ. ರಾಘವೇಂದ್ರ ಹಿಂದೂ ಮಹಾಗಣಪತಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಹಿಂದೆ ಊರಿನ ಪ್ರತಿ ಗಲ್ಲಿಯಲ್ಲೂ ಸಹ ಗಣಪತಿ ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು. ಆದರೆ, ಕಳೆದ 3 ವರ್ಷದಿಂದ ಊರಿಗೆ ಒಂದೇ ಗಣಪತಿಯನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಒಗಟ್ಟನ್ನು ಪ್ರದರ್ಶಿಸುವ ಕಾರ್ಯವನ್ನು ಹಿಂದೂ ಸಮಾಜದ ಪ್ರಮುಖರು ಮಾಡಿದ್ದರು. ಅದರಂತೆ ಈ ವರ್ಷವು ಕೂಡ ಒಂದೇ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿತ್ತು.

ರಸಮಂಜರಿ, ನೃತ್ಯ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳು ಕೂಡ ಯಶಸ್ವಿಯಾಗಿ ಜರುಗಿದವು.

ಈ ಬಾರಿ ಮೆರವಣಿಗೆಯು ಬಸ್‌ ನಿಲ್ದಾಣದ ವೃತ್ತದಿಂದ ಶಿಕಾರಿಪುರ ರಸ್ತೆ, ಹೊಂಡದ ಕೇರಿ, ಹಿರೆಕೆರೂರು ರಸ್ತೆ, ಸೊರಬ ರಸ್ತೆ ಮಾರ್ಗವಾಗಿ ಸಂಚರಿಸಿತು. ಪಟ್ಟಣದ ಪ್ರಮುಖ ಬೀದಿಯಲ್ಲಿ ನಾಗರಿಕರು ರಸ್ತೆಗೆ ನೀರು ಹಾಕಿ ರಂಗವಲ್ಲಿಯಿಂದ ಸಿಂಗರಿಸಿ ಗಣೇಶನ ಮೆರವಣಿಗೆಗೆ ಸ್ವಾಗತ ಕೋರಿದರು. ಮನೆಕಟ್ಟೆಯ ಮೇಲೆ ನಿಂತು ಮಹಿಳೆಯರು ಮೆರವಣಿಗೆ ವೀಕ್ಷಿಸಿದರು.

Advertisement

ಎರಡನೇ ಶನಿವಾರವಿದ್ದ ಕಾರಣ ಕಚೇರಿಗಳಿಗೆ ರಜೆ ಇತ್ತು. ಶಾಲಾ- ಕಾಲೇಜುಗಳಿಗೆ ಮಧ್ಯಾಹ್ನ ರಜೆ ಇದ್ದ ಕಾರಣ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ನೃತ್ಯ ಮಾಡಿದರು.

ಪ್ರಮುಖ ವೃತ್ತಗಳಲ್ಲಿ ಸಿಡಿಮದ್ದು ಸಿಡಿಸಲಾಯಿತು. ಮೆರವಣಿಗೆಯಲ್ಲಿ ಜಾಂಜ್‌ ಮೇಳಗಳು, ಧ್ವನಿರ್ವಧಕಗಳ ಹಾಡಿಗೆ ಯುವಕರು ಕುಣಿದು ಕುಪ್ಪಳಿಸಿದರು. ವಿವಿಧ ಗ್ರಾಮಗಳ ಯುವಕರು ಹಾಗೂ ಭಕ್ತಾಗಳು ಪಾಲ್ಗೊಂಡಿದ್ದರು.

ಓಂ ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷ ರಾಘವೇಂದ್ರ ಮೋಗವೀರ್‌ ಈ ಬಾರಿ ಗಣೇಶನ ಹಬ್ಬಕ್ಕೆ ಎಂದು ಸಂಗ್ರಹಿಸಲಾದ ಹಣದಲ್ಲಿ ಉಳಿದಿದ್ದನ್ನು ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಹಾಗು ಬುದ್ಧಿಮಾಂದ್ಯ ಮಕ್ಕಳ ಕಾರ್ಯಕ್ರಮಕ್ಕೆ ವಿನಿಯೋಗಿಸಲು ತೀರ್ಮಾನಿಸಿದ್ದೇವೆ ಎಂದು ಪತ್ರಿಕೆಗೆ ತಿಳಿಸಿದರು.

ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎ. ಶ್ರೀನಿವಾಸಲು, ತಹಶೀಲ್ದಾರ್‌ ಕವಿರಾಜ್‌, ವೃತ್ತ ನಿರೀಕ್ಷ ಬಸವರಾಜ್‌, ಸಬ್‌ ಇನ್ಸ್‌ ಪೆಕ್ಟರ್‌ ವಸಂತ ಸೇರಿದಂತೆ 6 ಸಿಪಿಐ, 17 ಪಿಎಸ್‌ಐ, 39ಎಎಸ್‌ಐ, 3 ಕೆಎಸ್‌ಆರ್‌ಪಿ ತುಕಡಿ, 3 ಡಿಎಆರ್‌ ತುಕಡಿ ಸೇರಿದಂತೆ 321 ಹೆಚ್ಚು ಸಿಬ್ಬಂದಿ ಭದ್ರತೆ ಕಾರ್ಯಕ್ಕೆ ನಿಯೋಜನೆ ಮಾಡಲಾಗಿತ್ತು.

ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೆ ಶಾಂತ ರೀತಿಯಿಂದ ರಾತ್ರಿ 10:30ಕ್ಕೆ ಅರಣ್ಯ ಇಲಾಖೆಯ ಹತ್ತಿರದ ಹೊಂಡದಲ್ಲಿ ವಿಸರ್ಜನೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next