ಶಿರಹಟ್ಟಿ: ಪಟ್ಟಣದ ತಾಪಂ ಸಾಮರ್ಥ್ಯ ಸೌಧದಲ್ಲಿ ತಾಪಂ ಅಧ್ಯಕ್ಷ ಈಶ್ವರಪ್ಪ ಲಮಾಣಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಹಲವು ವಿಷಯಗಳ ಚರ್ಚೆಯಾಗಿ ಬರೀ ಕೊರೊನಾ ಮಾತುಗಳೇ ಹೆಚ್ಚಾಗಿ ಕೇಳಿಬಂದವು.
ಈ ವೇಳೆ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ಜೋಗಿ ಮಾತನಾಡಿ, ತಾಲೂಕಿನ ಪರಸಾಪುರ ಗ್ರಾಮದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟು 5 ದಿನ ಕಳೆದರೂ ಆರೋಗ್ಯ ಇಲಾಖೆ ಅಧಿ ಕಾರಿಗಳು ಸೋಂಕಿತ ವ್ಯಕ್ತಿಯನ್ನು ಕ್ವಾರಂಟೈನ್ ಮಾಡಿಲ್ಲ.ಅವರಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ಇಲಾಖೆ ವೈದ್ಯಾಧಿ ಕಾರಿಗಳು ನಿರ್ಲಕ್ಷ್ಯತೋರುತ್ತಿದ್ದಾ ರೆ. ಇದರಿಂದಾಗಿ ಸೋಂಕಿತ ವ್ಯಕ್ತಿ ನಿರ್ಭಯವಾಗಿ ಗ್ರಾಮದಲ್ಲಿ ಓಡಾಡುತ್ತಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿದೆ ಎಂದು ಸಭೆಗೆ ದೂರಿದರು.
ಈ ಪ್ರಕರಣವನ್ನು ತಾಲೂಕು ವೈದ್ಯಾಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಸೋಂಕಿತ ವ್ಯಕ್ತಿಯನ್ನು ಕ್ವಾರಂಟೈನ್‌ಗೆ ಒಳಪಡಿಸಿ, ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಆಗ್ರಹಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಂಗನವಾಡಿ ಕೇಂದ್ರಗಳಿಗೆ ಪೂರೈಸಿರುವ ಆಹಾರ ಕಳಪೆ ಗುಣಮಟ್ಟದಿಂದ ಕೂಡಿದೆ. ಲಾಕ್‌ಡೌನ್ ಸಂದರ್ಭದಲ್ಲಿ(ಏಪ್ರಿಲ್ ನಿಂದ ಜುಲೈವರೆಗೆ) ಮಕ್ಕಳಿಗೆ ಆಹಾರ ಧಾನ್ಯ ವಿತರಿಸದಿದ್ದರೂ, ಬಿಲ್ ಪಾವತಿಸಿ ಸರ್ಕಾರದ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಪರಿಶೀಲಿಸುವಂತೆ ತಾಪಂ ಅಧ್ಯಕ್ಷ ಈಶ್ವರಪ್ಪ ಲಮಾಣಿ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಪ್ರಗತಿ ಕಾಲೋನಿ ಅಭಿವೃದ್ಧಿ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಅಳವಡಿಸಿರುವ ಹೈಮಾಸ್ಟ್ ವಿದ್ಯುತ್ ದೀಪಗಳು ಒಂದೇ ವರ್ಷದಲ್ಲಿ ಹಾಳಾಗಿವೆ. ಪರಿಣಾಮ ಸರ್ಕಾರದ ಲಕ್ಷಾಂತರ ರೂ. ಅನುದಾನ ಪೋಲಾಗಿದೆ. ಕಾಮಗಾರಿ ಗುತ್ತಿಗೆ ಸಂಸ್ಥೆ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ತಾಪಂ ಸದಸ್ಯ ತಿಪ್ಪಣ್ಣ ಕೊಂಚಿಗೇರಿ ಮನವಿ ಮಾಡಿದರು.
ಸಭೆಯಲ್ಲಿ ತಾಪಂ ಉಪಾಧ್ಯಕ್ಷೆ ಪವಿತ್ರಾ ಎಸ್., ತಾಪಂ ಇಒ ನಿಂಗಪ್ಪ ಓಲೇಕಾರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.