ಚಿಕ್ಕೋಡಿ: ತಾಲೂಕಿನ ಶಿರಗಾಂವ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಸಂಪೂರ್ಣವಾಗಿ ಶಿಥಿಲವಾಗಿದ್ದು, ಮಕ್ಕಳು ಅಪಾಯದ ಸ್ಥಿತಿ ಎದುರಿಸುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಗಡಿ ಭಾಗದ ಕನ್ನಡ ಶಾಲೆಗಳತ್ತ ಲಕ್ಷ್ಯ ಕೊಡುತ್ತಿಲ್ಲ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಚಿಕ್ಕೋಡಿ ನಗರದಿಂದ 10 ಕಿ.ಮೀ. ದೂರದಲ್ಲಿರುವ ಶಿರಗಾಂವ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಚಿಕ್ಕೋಡಿ-ಸದಲಗಾ ಕ್ಷೇತ್ರದ ನಿಪ್ಪಾಣಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಗೆ ಬರುತ್ತದೆ. 1 ರಿಂದ 7ನೆಯ ತರಗತಿಯವರೆಗೆ 530 ಮಕ್ಕಳು ಇಲ್ಲಿ ಅಧ್ಯಯನ ಮಾಡುತ್ತಾರೆ. ಆದರೆ ಈ ಶಾಲೆಯ ಕಟ್ಟಡದ ಗೋಡೆಗಳು ಅಲ್ಲಲ್ಲಿ ಬಿರುಕು ಬಿಟ್ಟಿವೆ. ಯಾವುದೇ ಸಂದರ್ಭದಲ್ಲಿ ಮೇಲ್ಛಾವಣಿ ಹಾಗೂ ಗೋಡೆ ಕುಸಿದು ಬೀಳುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ 18 ಕೊಠಡಿಗಳಲ್ಲಿ 6 ಕೊಠಡಿಗಳ ಬಾಗಿಲು ಮುಚ್ಚಲಾಗಿದೆ. 6 ಕೊಠಡಿಗಳು ಸಂಪೂರ್ಣ ಕುಸಿಯುವ ಹಂತ ತಲುಪಿವೆ. ಕೇವಲ 6 ಕೊಠಡಿಗಳಲ್ಲಿ ಮಾತ್ರ ತರಗತಿಗಳು ನಡೆಯುತ್ತಿವೆ. ಒಂದೊಂದು ವರ್ಗ ಕೋಣೆಯಲ್ಲಿ 75 ರಿಂದ 80 ಮಕ್ಕಳು ಕಿಕ್ಕಿರಿದು ಕುಳಿತು ಅಧ್ಯಯನ ಮಾಡುತ್ತಿದ್ದಾರೆ. ನಾಲ್ಕೈದು ವರ್ಷಗಳಿಂದ 6 ಕೊಠಡಿಗಳ ಮೇಲ್ಛಾವಣಿ ಸಂಪೂರ್ಣ ಕುಸಿದಿವೆ. ಎರಡು ವರ್ಷಗಳಿಂದ 6 ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು, ಪೋಷಕರು ಆತಂಕದಿಂದಲೇ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುತ್ತಿದ್ದಾರೆ. ಕಟ್ಟಡ ಕುಸಿಯುವ ಆತಂಕದಿಂದ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಭಯವಾಗುತ್ತಿದೆ ಎನ್ನುತ್ತಾರೆ ಪೋಷಕರು.
ಶಿರಗಾಂವ ಕನ್ನಡ ಶಾಲೆಯಲ್ಲಿ 530 ಮಕ್ಕಳು ದಾಖಲಾತಿ ಪಡೆದುಕೊಂಡು ಇಡೀ ನಿಪ್ಪಾಣಿ ವಲಯದಲ್ಲಿಯೇ ಹೆಚ್ಚಿನ ಮಕ್ಕಳ ಸಂಖ್ಯೆ ಹೊಂದಿರುವ ಹೆಗ್ಗಳಿಕೆ ಹೊಂದಿದೆ. ಆದರೆ ಸರ್ಕಾರ ಮಾತ್ರ ಇಂತಹ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮೀನಮೇಷ ಅನುಸರಿಸುತ್ತಿದೆ.
ವರ್ಗ ಕೋಣೆಯಲ್ಲಿ ಮಳೆ ನೀರು: ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮೂಲ ಸೌಲಭ್ಯ ಕೊರತೆಯಿಂದ ನಲುಗುತ್ತಿದೆ. ಮಳೆ ನೀರಿನಿಂದ ವರ್ಗ ಕೋಣೆಗಳು ಸಂಪೂರ್ಣ ವಾಗಿ ಸೋರುತ್ತಿವೆ. ಮಳೆಗಾಲ ಆರಂಭವಾದಾಗಿನಿಂದ ವರ್ಗ ಕೋಣೆಯಲ್ಲಿ ಮಳೆ ನೀರು ನಿಂತು ಮಕ್ಕಳು ನಿತ್ಯ ಪರದಾಡುತ್ತಿದ್ದಾರೆ. ಮಳೆ ನೀರಿನಿಂದ ಪಠ್ಯಪುಸ್ತಕಗಳನ್ನು ರಕ್ಷಣೆ ಮಾಡುವುದು ದೊಡ್ಡ ಸವಾಲಾಗಿದೆ. ನೀರು ಆವರಿಸಿಕೊಂಡಿರುವುದರಿಂದ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಮಕ್ಕಳು ಅಳಲು ತೋಡಿಕೊಂಡರು.
ಶೌಚಾಲಯ ಕೊರತೆ: ಶಾಲೆಯಲ್ಲಿರುವ 280 ವಿದ್ಯಾರ್ಥಿನಿಯರಿಗೆ ಶೌಚಾಲಯದ ಕೊರತೆ ಇದೆ. ಸ್ಥಳೀಯ ಶಾಲೆಯ ಅನುದಾನ ಬಳಸಿ ಶೌಚಾಲಯ ದುರಸ್ತಿ ಮಾಡಿದರೂ ಅದು ಸುವ್ಯವಸ್ಥಿತವಾಗಿಲ್ಲ. ಹೀಗಾಗಿ ನಮಗೆ ಶೌಚಾಲಯ ಅವಶ್ಯಕ ಇದೆ ಎನ್ನುತ್ತಾರೆ ವಿದ್ಯಾರ್ಥಿನಿಯರು.
•ಮಹಾದೇವ ಪೂಜೇರಿ