Advertisement

Shirady: ಕಾಡಾನೆಗಳ ಸಂಚಾರ ಕೃಷಿ ಬೆಳೆಗಳಿಗೆ ತೀವ್ರ ಹಾನಿ

11:14 PM Dec 03, 2023 | Team Udayavani |

ಉಪ್ಪಿನಂಗಡಿ: ಇಲ್ಲಿನ ವಲಯ ಅರಣ್ಯ ಇಲಾಖಾ ವ್ಯಾಪ್ತಿಯ ಶಿರಾಡಿ ಗ್ರಾಮದ ಜನ ವಸತಿ ಪ್ರದೇಶದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಕಾಡಾನೆಗಳ ಸಂಚಾರ ಕಂಡು ಬರುತ್ತಿದ್ದು, ಹಾಡುಹಗಲೇ ಕೃಷಿ ಪ್ರದೇಶಕ್ಕೆ ಲಗ್ಗೆ ಇರಿಸಿ ಕೃಷಿ ಬೆಳೆಗಳನ್ನು ಹಾನಿಗೊಳಿಸುತ್ತಿರುವ ಬಗ್ಗೆ ಸ್ಥಳೀಯರು ದೂರಿದ್ದಾರೆ.

Advertisement

ಶಿರಾಡಿ ಗ್ರಾಮದ ದಾನಾಜೆ ಪರಿಸರದಲ್ಲಿ ರಾತ್ರಿ ಹಗಲೆನ್ನದೇ ಆನೆಗಳ ಹಿಂಡು ಸಂಚರಿಸುತ್ತಿದ್ದು ಸ್ಥಳೀಯರು ತಮ್ಮ ತೋಟಗಳ ನಿರ್ವಹಣೆಗೆ ತೆರಳಲು ಭೀತಿ ಪಡುವ ಸ್ಥಿತಿ ಉಂಟಾಗಿದೆ. ಈ ಕುರಿತು ಉಪ್ಪಿನಂಗಡಿ ವಲಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಆನೆಗಳು ಮಾತ್ರ ಪರಿಸರದಲ್ಲಿಯೇ ಸಂಚರಿಸುತ್ತಿವೆ ಎನ್ನುವುದು ಸ್ಥಳೀಯರ ಆಕ್ರೋಶವಾಗಿದೆ.

ರೈತರ ತೋಟಕ್ಕೆ ಆನೆಗಳು ನುಗ್ಗಿ ದಾಂಧಲೆ ನಡೆಸಿ ಲಕ್ಷಾಂತರ ರೂ. ನಷ್ಟಕ್ಕೆ ಕಾರಣವಾಗಿದೆ. ಆನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಮುಂದಾಗಬೇಕೆನ್ನುವುದು ಸ್ಥಳೀಯರ ಆಗ್ರಹವಾಗಿದೆ.

ಅಗತ್ಯ ಕ್ರಮ: ವಲಯ ಅರಣ್ಯಾಧಿಕಾರಿ ಈ ಬಗ್ಗೆ ಉಪ್ಪಿನಂಗಡಿ ವಲಯ ಆರಣ್ಯಾಧಿಕಾರಿ ಜಯಪ್ರಕಾಶ್‌ ಅವರನ್ನು ಸಂಪರ್ಕಿಸಿದಾಗ, ಕಾಡಾನೆಯ ಇರುವಿಕೆಯ ಬಗ್ಗೆ ದೂರು ಬಂದಾಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸುಡು ಮದ್ದು ಸಿಡಿಸಿ ಕಾಡಾನೆಯನ್ನು ಕಾಡಿನೊಳಕ್ಕೆ ಓಡಿಸಲಾಗಿತ್ತು. ಕಾಡಿನಲ್ಲಿ ಸಂಚರಿಸುವ ಕಾಡಾನೆಯನ್ನು ನಿಯಂತ್ರಿಸುವುದು ಕಷ್ಟಕರ ವಿಚಾರ. ಆದರೂ ನದಿ ದಂಡೆಯಿಂದ ನಾಗರಿಕರ ವಸತಿ ಪ್ರದೇಶಕ್ಕೆ ಕಾಲಿರಿಸದಂತೆ ಬ್ಯಾರಿಕೇಡ್‌ ನಿರ್ಮಿಸಲು ಇಲಾಖಾ ವರಿಷ್ಠರಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಹಾಗೂ ಕಾಡಾನೆ ಕಾಣಿಸಿಕೊಂಡ ಪ್ರದೇಶದಲ್ಲಿ ಜನತೆ ಎಚ್ಚರದಿಂದ ಇರಲು ಕಾಲ ಕಾಲಕ್ಕೆ ಸೂಚನೆಗಳನ್ನು ನೀಡಲಾಗುತ್ತಿದೆ ಎಂದವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next