Advertisement
ಗುಂಡ್ಯದಿಂದ ಹೆಗ್ಗದ್ದೆ ತನಕ ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ 26 ಕಿ.ಮೀ. ಕಾಂಕ್ರೀಟ್ ರಸ್ತೆಯಲ್ಲಿ 12 ಕಡೆ ಭೂಕುಸಿತ ಸಂಭವಿಸಿತ್ತು. ಉದ್ದಕ್ಕೂ ಹೊಳೆ ಇರುವ ಬದಿಯಲ್ಲಿ ಬೃಹತ್ ಪ್ರಮಾಣದಲ್ಲಿ ಭೂಕುಸಿತವಾಗಿತ್ತು. ಇದರಿಂದ ಸುದೀರ್ಘ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.
ಕುಸಿತ ಸಂಭವಿಸಿರುವಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಇದೆ. ಒಂದು ಕಡೆ ಗುಡ್ಡ ಅಪಾಯಕಾರಿ ಸ್ಥಿತಿಯಲ್ಲಿದ್ದರೆ, ಇನ್ನೊಂದು ಬದಿ ಕುಸಿತದ ಕಾರಣ ರಸ್ತೆ ಇಕ್ಕಟ್ಟಾಗಿದೆ. ರಸ್ತೆಯ ಎರಡೂ ಬದಿಗೆ ಚರಂಡಿ ವ್ಯವಸ್ಥೆಯೂ ಇಲ್ಲ. ಸದ್ಯ ಹೆದ್ದಾರಿಯಲ್ಲಿ ವಾಹನಗಳ ಒತ್ತಡ ಕೂಡ ಹೆಚ್ಚಿದ್ದು ಮಳೆ ಸುರಿದರೆ ಅಪಾಯದ ಸಾಧ್ಯತೆ ಇಲ್ಲದಿಲ್ಲ. ಒಂಬತ್ತು ತಿಂಗಳು ಬಂದ್
ಶಿರಾಡಿ ಹೆದ್ದಾರಿಯನ್ನು ಎರಡನೇ ಹಂತದ ಕಾಂಕ್ರೀಟ್ ಕಾಮಗಾರಿಗಾಗಿ ಕಳೆದ ವರ್ಷ ಜ. 19ರಿಂದ ಬಂದ್ ಮಾಡಲಾಗಿತ್ತು. ಜೂ. 15ರ ವೇಳೆಗೆ ಲಘು ವಾಹನಗಳಿಗೆ ಸಂಚರಿಸಲು ಅವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ಭಾರೀ ಮಳೆಯಾಗಿ ಭೂಕುಸಿತವಾದ ಕಾರಣ ಮತ್ತೆ ಸಂಚಾರ ನಿಷೇಧಿಸಲಾಯಿತು. ಬಳಿಕ ತಾತ್ಕಾಲಿಕ ದುರಸ್ತಿ ಕಾಮಗಾರಿ ನಡೆಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಬಳಿಕ ಇಲ್ಲಿ ಶಾಶ್ವತ ಕಾಮಗಾರಿಗಳು ನಡೆದಿಲ್ಲ. ಕಾಂಕ್ರೀಟ್ ಕಾಮಗಾರಿ, ಭೂಕುಸಿತ ಇತ್ಯಾದಿಗಳಿಂದ ಸುಮಾರು ಒಂಬತ್ತು ತಿಂಗಳು ಸಂಚಾರ ಬಂದ್ ಆಗಿದ್ದರಿಂದ ಪರಿಸರದ ಲಾರಿ ಚಾಲಕ- ಮಾಲಕರು, ಗುಂಡ್ಯ, ನೆಲ್ಯಾಡಿ, ಮಾರನಹಳ್ಳಿ ಮುಂತಾದೆಡೆಯ ರಸ್ತೆ ಬದಿ ಅಂಗಡಿ ವ್ಯಾಪಾರಸ್ಥರು ಭಾರೀ ನಷ್ಟಕ್ಕೆ ಒಳಗಾಗಿದ್ದರು. ವಿದ್ಯಾರ್ಥಿಗಳು ಮತ್ತು ಉದ್ಯೋಗಸ್ಥರಿಗೂ ತೊಂದರೆಯಾಗಿತ್ತು. ಈ ಮಳೆಗಾಲ ಇದೇ ಪರಿಸ್ಥಿತಿ ಮರುಕಳಿಸುವುದೇ ಎಂಬ ಭೀತಿ ಅವರದು.
Related Articles
ಶಿರಾಡಿ ಘಾಟಿ ರಸ್ತೆ ಮತ್ತೆ ತೊಂದರೆಗೀಡಾದಲ್ಲಿ ಕರಾವಳಿ ಜಿಲ್ಲೆಗಳು ತೊಂದರೆ ಎದುರಿಸಬೇಕಾ ಗುತ್ತದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ. ಹೀಗಾಗಿ ರಸ್ತೆಯನ್ನು ಮಳೆಗಾಲ ಆರಂಭಕ್ಕೆ ಮುನ್ನ ಶಾಶ್ವತವಾಗಿ ಅಭಿವೃದ್ಧಿ ಗೊಳಿಸಬೇಕಿದೆ. ಸರಕಾರ, ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳುವ ಆವಶ್ಯಕತೆಯಿದೆ.
Advertisement
ಶಿರಾಡಿ ರಸ್ತೆಯಲ್ಲಿ ಭೂಕುಸಿತ ಸಂಭವಿಸಿದ ಸ್ಥಳಗಳ ವೀಕ್ಷಣೆಗೆ ಹೈದರಾಬಾದ್‌ನ ವಿಶೇಷ ತಜ್ಞರ ತಂಡ ವಾರದೊಳಗೆ ಭೇಟಿ ನೀಡಲಿದೆ. ವರದಿ ಆಧರಿಸಿ ಕ್ರಮಕ್ಕೆ ಸರಕಾರಕ್ಕೆ ತಿಳಿಸುತ್ತೇವೆ. ಮಳೆಗಾಲಕ್ಕೆ ಮುನ್ನ ಅಗತ್ಯ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳುತ್ತೇವೆ.ಸುಬ್ಬರಾವ್ ಹೊಳ್ಳ, ಸಹಾಯಕ ಅಭಿಯಂತ, ರಾ.ಹೆ. ವಿಭಾಗ, ಮಂಗಳೂರು ಪ್ರತಿ ಮಳೆಗಾಲ ಈ ರಸ್ತೆಯಲ್ಲಿ ಭೂಕುಸಿತ ಸಂಭವಿಸಿ ರಸ್ತೆ ಬಂದ್ ಆಗಿ ಪ್ರಯಾಣಿಕರಿಗೆ ತೊಂದರೆ ಆಗುತ್ತಿರುತ್ತದೆ. ರಸ್ತೆ ಬದಿ ಸುರಕ್ಷಿತವಾಗಿಲ್ಲ. ಇದಕ್ಕೆ ದೂರದೃಷ್ಟಿಯ ಕೊರತೆ ಕಾರಣ. ಶಾಶ್ವತ ಪರಿಹಾರ ಕ್ರಮಗಳ ಆವಶ್ಯಕತೆ ಇದೆ.
ಡಾ| ಶ್ರೀವತ್ಸ, ಪ್ರಯಾಣಿಕರು ಬಾಲಕೃಷ್ಣ ಭೀಮಗುಳಿ