Advertisement
ಈ ವರ್ಷದ ಮಳೆಗಾಲ ದಲ್ಲಿ ಬೆಂಗಳೂರು ಹಾಗೂ ಇತರ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿಯ ದೋಣಿಗಲ್ ಬಳಿ ಕುಸಿತ, ಚಿಕ್ಕಮಗಳೂರು ಜಿಲ್ಲೆಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿ ಘಾಟಿಯ 6ನೇ ತಿರುವಿನಲ್ಲಿ ಕುಸಿತ ಕಾಣಿಸಿಕೊಂಡಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ. ಇದೀಗ ಘನ ವಾಹನಗಳಿಗೆ ಬೆಂಗಳೂರು ಕಡೆಗೆ ಸಂಚರಿಸಲು ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿ ಮಾತ್ರ ಸಂಚಾರಕ್ಕೆ ಮುಕ್ತವಾಗಿದ್ದರೂ ಈ ಮಾರ್ಗದಲ್ಲಿಯೂ ಮಡಿಕೇರಿ ಭಾಗದಲ್ಲಿ ಬಿರುಕು ಕಾಣಿಸಿಕೊಂಡಿದ್ದು ಅಲ್ಲಿಯೂ ಸಂಚಾರ ಕಷ್ಟಕರವಾಗಿದೆ.
Related Articles
Advertisement
ಮಂಗಳೂರು-ಬೆಂಗಳೂರು ರಾ.ಹೆ. 75ರಲ್ಲಿ ಶಿರಾಡಿ ಘಾಟಿಯಲ್ಲಿ ಅಡ್ಡಹೊಳೆಯಿಂದ ಸಕಲೇಶಪುರದ ಹೆಗ್ಗದ್ದೆವರೆಗೆ 23.57 ಕಿ.ಮೀ. ಸುರಂಗ ಮಾರ್ಗ ನಿರ್ಮಾಣಕ್ಕೆ ಅನುಮೋದನಾತ್ಮಕ ಪ್ರಕ್ರಿಯೆ ಗಳು ಪೂರ್ಣಗೊಂಡಿವೆ. ಅಡ್ಡಹೊಳೆ, ಗುಂಡ್ಯ, ಎಡಕುಮೇರಿ, ಕಡಗರವಳ್ಳಿ, ಮಾರನಹಳ್ಳ ಮೂಲಕ ಸಾಗುವ ಈ ಮಾರ್ಗದಲ್ಲಿ 6 ಸುರಂಗಗಳು ಮತ್ತು 10 ಸೇತುವೆಗಳು ನಿರ್ಮಾಣವಾಗಲಿವೆ. ಸುಮಾರು 8 ವರ್ಷಗಳ ಹಿಂದೆ ಇದರ ಯೋಜನಾ ವೆಚ್ಚ 10,015 ಕೋ.ರೂ. ಎಂದು ಅಂದಾಜಿಸಲಾಗಿದ್ದು ಪ್ರಸ್ತುತ ಇದು ಸುಮಾರು 20,000 ಕೋ.ರೂ. ಆಗಬಹುದು ಎಂದು ಲೆಕ್ಕಹಾಕಲಾಗಿದೆ. ಜಪಾನ್ ಇಂಟರ್‌ನ್ಯಾಶನಲ್ ಕೋ-ಆಪರೇಟಿವ್ ಏಜೆನ್ಸಿ (ಜೈಕಾ) ಇದರ ಡಿಪಿಆರ್ ಸಿದ್ಧಪಡಿಸಿತ್ತು. ಇದನ್ನು ಜೈಕಾ ಸಹಯೋಗದೊಂದಿಗೆ ಕೈಗೆತ್ತಿಕೊಳ್ಳಲು ಮೊದಲು ನಿರ್ಧರಿಸಲಾಗಿತ್ತು. ಆದರೆ ಇದೀಗ ಈ ಪ್ರಸ್ತಾವನೆಯನ್ನು ಕೈಬಿಟ್ಟು ಭಾರತ ಸರಕಾರ ಭಾರತ್ ಮಾಲಾ ಯೋಜನೆಯಲ್ಲಿ ಕೈಗೆತ್ತಿಕೊಳ್ಳುತ್ತಿದೆ.
ಶಿರಾಡಿ ಘಾಟಿ ಸುರಂಗ ಮಾರ್ಗವು ಪರಿಸರ ಸ್ನೇಹಿ ಯೋಜನೆಯಾಗಿದ್ದು, ಕಾರ್ಯಗತವಾದರೆ ಮಂಗಳೂರು- ಬೆಂಗಳೂರು ಸಂಪರ್ಕ ರಸ್ತೆಯ ಶೇ. 90ರಷ್ಟು ಸಮಸ್ಯೆಗಳು ಪರಿಹಾರವಾಗಲಿವೆ. 10 ವರ್ಷಗಳಿಂದ ಈ ಯೋಜನೆಗಾಗಿ ಪ್ರಯತ್ನಿಸುತ್ತಿದ್ದೇವೆ. ಆದಷ್ಟು ಶೀಘ್ರ ಅದು ಕಾರ್ಯಗತ ಆಗಬೇಕು. – ಐಸಾಕ್ ವಾಸ್, ಅಧ್ಯಕ್ಷರು, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಮಂಗಳೂರು
ಇದೊಂದು ಮಹತ್ವದ ಯೋಜನೆಯಾಗಿದ್ದು, ಡಿಪಿಆರ್ ತಯಾರಿಸಿ ಯೋಜನಾ ಪ್ರಸ್ತಾವವನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಕಾರ್ಯಗತಗೊಳಿಸಲು ಪ್ರಯತ್ನಿಸಲಾಗುವುದು. – ನಳಿನ್ ಕುಮಾರ್ ಕಟೀಲು, ಸಂಸದ