Advertisement

ಹಡಗಿನ ಬೆಂಕಿ ನಂದಿಸುವ ಕಾರ್ಯಾಚರಣೆ 10ನೇ ದಿನಕ್ಕೆ; ಕರ್ನಾಟಕ ಕರಾವಳಿಗೆ ಅಪಾಯವಿಲ್ಲ

11:20 AM Jul 29, 2024 | Team Udayavani |

ಮಂಗಳೂರು: ಗುಜರಾತ್‌ ನಿಂದ ಶ್ರೀಲಂಕಾದ ಕೊಲಂಬೋಗೆ ಸರಕುಗಳನ್ನು ಸಾಗಿಸುತ್ತಿದ್ದ ಪನಾಮಾ ದೇಶದ ಮಾಯರಿಸ್ಕ್ ಫ್ರಾಂಕ್‌ಫ‌ರ್ಟ್‌ ಹೆಸರಿನ ಹಡಗಿನ (ಕಂಟೈನರ್‌ ವಾಹಕ ನೌಕೆ) ಬೆಂಕಿ ನಂದಿಸುವ ಹಾಗೂ ಸಂಭಾವ್ಯ ಸಮುದ್ರ
ಮಾಲಿನ್ಯ ತಡೆಗಟ್ಟುವ “ಸಹಾಯತಾ’ ಕಾರ್ಯಾಚರಣೆ ರವಿವಾರ 10ನೇ ದಿನ ಪೂರೈಸಿದೆ.

Advertisement

ಸದ್ಯ ಹಡಗು ಮಂಗಳೂರಿನಿಂದ ನೈಋತ್ಯಕ್ಕೆ 50 ನಾಟಿಕಲ್‌ ಮೈಲು ಹಾಗೂ ಸಮುದ್ರ ತೀರದಿಂದ 37 ನಾಟಿಕಲ್‌ ಮೈಲು ದೂರದಲ್ಲಿದೆ. ಕರ್ನಾಟಕ ಭಾಗದಲ್ಲಿ ಸಮುದ್ರ ಮಾಲಿನ್ಯ ಅಥವಾ ಇತರ ಯಾವುದೇ ರೀತಿಯ ಅಪಾಯಗಳಿಲ್ಲ ಎಂದು
ಕರಾವಳಿ ರಕ್ಷಣ ಪಡೆ ತಿಳಿಸಿದೆ.

ಈ ಹಡಗು ಜು.19ರಂದು ಗೋವಾದಿಂದ 80 ನಾಟಿಕಲ್‌ ಮೈಲು ದೂರದಲ್ಲಿ ಸಂಚರಿಸುತ್ತಿದ್ದಾಗ ಸರಕುಗಳು ತುಂಬಿದ್ದ ಕಂಟೈನರ್‌ ಗೆ ಬೆಂಕಿ ಹತ್ತಿಕೊಂಡಿತ್ತು. ಇದರಲ್ಲಿ 21 ಮಂದಿ ವಿದೇಶಿ ಸಿಬಂದಿ ಇದ್ದು, ಈ ಪೈಕಿ ಓರ್ವ ನಾಪತ್ತೆಯಾಗಿದ್ದಾರೆ. ಉಳಿದವರು ಸುರಕ್ಷಿತರಾಗಿದ್ದಾರೆ.ಹಡಗು ಕೂಡ ಸ್ಥಿರವಾಗಿದೆ ಎಂದು ಕರಾವಳಿ ರಕ್ಷಣ ಪಡೆ ತಿಳಿಸಿದೆ.

ಕರಾವಳಿ ರಕ್ಷಣ ಪಡೆಯ 5 ಹಡಗುಗಳು, 2 ಎಎಲ್‌ಎಚ್‌ ಹೆಲಿಕಾಪ್ಟರ್‌ಗಳು ಮತ್ತು 1 ಡಾರ್ನಿಯರ್‌ ಏರ್‌ಕ್ರಾಫ್ಟ್‌ ಗಳು ಸಹಾಯತಾ ಕಾರ್ಯಾಚರಣೆ ನಡೆಸಿದ್ದು, ಇದುವರೆಗೆ ಬೆಂಕಿ ನಂದಿಸುವುದಕ್ಕಾಗಿ 1,200 ಕೆ.ಜಿಗೂ ಅಧಿಕ ಡ್ರೈ ಕೆಮಿಕಲ್‌ ಪೌಡರನ್ನು ಸುರಿಯಲಾಗಿದೆ.

Advertisement

ಮಾಲಿನ್ಯ ನಿಯಂತ್ರಣಕ್ಕಾಗಿ ಇರುವ ಕರಾವಳಿ ರಕ್ಷಣ ಪಡೆಯ ವಿಶೇಷ ಹಡಗು “ಸಮುದ್ರ ಪ್ರಹಾರಿ’ ಕೂಡ ಕಾರ್ಯಾಚರಣೆಯಲ್ಲಿದ್ದು, ಈ ಹಡಗು ಡೈನಾಮಿಕ್‌ ಪೊಸಿಸನಿಂಗ್‌ ಸಿಸ್ಟಂ ಅನ್ನು ಹೊಂದಿದೆ. ಹಡಗಿನ ತುಂಬಾ ಸನಿಹದಿಂದಲೇ ಬೆಂಕಿ ನಂದಿಸುವ ಕಾರ್ಯಾಚರಣೆ ಕೂಡ ನಡೆಸುತ್ತದೆ. ಈಗಾಗಲೇ ಶಿಪ್ಪಿಂಗ್‌ ಡಿಜಿ, ರಾಜ್ಯ ಸರಕಾರ, ಬಂದರುಗಳು, ಸಾಲ್ವೇಜ್‌ ಏಜೆನ್ಸಿ, ಶಿಪ್‌ ಮಾಲಕರೊಂದಿಗೆ ಕರಾವಳಿ ರಕ್ಷಣ ಪಡೆ ಸಮನ್ವಯತೆ ಸಾಧಿಸುತ್ತಿದ್ದು, ಶೀಘ್ರ ಬೆಂಕಿ ನಂದಿಸುವ ವಿಶ್ವಾಸವಿದೆ ಎಂದು ಕರಾವಳಿ ರಕ್ಷಣ ಪಡೆ ತಿಳಿಸಿದೆ.

ಹೆಚ್ಚುವರಿ ಟಗ್‌ಗಳು ಕೂಡ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿವೆ. ಅಲ್ಲದೆ ಶಾರ್ಜಾದಿಂದ ಎಚ್‌ಟಿಎಸ್‌ ಹಡಗು ಕೂಡ
ಜು.30ರಿಂದ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ನಾಪತ್ತೆಯಾದ ಓರ್ವನ ಪತ್ತೆಗೂ ಕಾರ್ಯಾಚರಣೆ ನಡೆಯುತ್ತಿದೆ.

ಸಮುದ್ರ ಪ್ರಕ್ಷುಬ್ಧಗೊಂಡಿರುವುದು ಕಾರ್ಯಾಚರಣೆಗೆ ಸವಾಲಾಗಿದೆ. ಬೆಂಕಿಯನ್ನು ಶೀಘ್ರದಲ್ಲೇ ಪೂರ್ಣ ವಾಗಿ ನಂದಿಸುವ ವಿಶ್ವಾಸವಿದೆ. ಅದೇ ರೀತಿ ಯಾವುದೇ ಮಾಲಿನ್ಯ ತಡೆಯಲು ಕೂಡ ಅಗತ್ಯ ಕಾರ್ಯಾಚರಣೆ ನಡೆಯುತ್ತಿದೆ ಎಂದು ಕರಾವಳಿ ಕಾವಲು ಪಡೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next