Advertisement

ಹಡಗು ದುರಂತ: 12 ಮಂದಿ ಮಾನವ ಕಳ್ಳಸಾಗಣೆದಾರರ ಸೆರೆ

09:05 PM Jun 19, 2023 | Team Udayavani |

ಕರಾಚಿ: ಪಾಕಿಸ್ತಾನದ ವಿವಿಧ ಭಾಗಗಳಲ್ಲಿ ಮಾನವ ಕಳ್ಳಸಾಗಣೆಯಲ್ಲಿ ತೊಡಗಿದ್ದ ಕನಿಷ್ಠ 12 ಮಂದಿಯನ್ನು ಅಲ್ಲಿನ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

Advertisement

ಗ್ರೀಸ್‌ ಹಡುಗು ದುರಂತದಿಂದ ಎಚ್ಚೆತ್ತುಕೊಂಡ ಪಾಕಿಸ್ತಾನ ಸರ್ಕಾರ ಮಾನವ ಕಳ್ಳಸಾಗಣೆದಾರರ ಹೆಡೆಮುರಿ ಕಟ್ಟುವ ನಿಟ್ಟಿನಲ್ಲಿ ಭದ್ರತಾ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ.

ಸುಮಾರು 750 ಮಂದಿ ಅಕ್ರಮ ವಲಸಿಗರನ್ನು ಹೊತ್ತು ಯೂರೋಪ್‌ನತ್ತ ತೆರಳುತ್ತಿದ್ದ ದೊಡ್ಡ ಮೀನುಗಾರಿಕೆ ದೋಣಿಯೊಂದು, ಅತಿ ಭಾರದಿಂದ ಗ್ರೀಸ್‌ನ ಸಮುದ್ರದಲ್ಲಿ ಜೂ.14ರ ಮಧ್ಯರಾತ್ರಿ ಮುಳುಗಿತು. ಈ ದುರಂತದಲ್ಲಿ 500ಕ್ಕೂ ಹೆಚ್ಚು ವಲಸಿಗರು ಮೃತಪಟ್ಟರು. ಅಕ್ರಮ ವಲಸಿಗರ ಪೈಕಿ ಪಾಕಿಸ್ತಾನಿಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ದುರಂತದಲ್ಲಿ ಪಾಕಿಸ್ತಾನದ 300ಕ್ಕೂ ಹೆಚ್ಚು ವಲಸಿಗರು ಮೃತಪಟ್ಟಿದ್ದಾರೆ. 12 ಮಂದಿ ಬದುಕುಳಿದಿದ್ದಾರೆ ಎಂದು ವರದಿಗಳು ತಿಳಿಸಿವೆ.

ದೋಣಿ ದುರಂತದಲ್ಲಿ ಮೃತಪಟ್ಟವರಿಗಾಗಿ ಭಾನುವಾರ ಪಾಕಿಸ್ತಾನದಲ್ಲಿ ಶೋಕಾಚರಣೆ ನಡೆಸಲಾಯಿತು. ಇನ್ನೊಂದೆಡೆ, ಕರಾಚಿಯ ವಿಮಾನ ನಿಲ್ದಾಣದಿಂದ ದುಬೈಗೆ ಪರಾರಿಯಾಗಲು ಮುಂದಾಗಿದ್ದ ಕನಿಷ್ಠ 12 ಮಂದಿ ಮಾನವ ಕಳ್ಳಸಾಗಣೆದಾರರನ್ನು ಪೊಲೀಸರು ಬಂಧಿಸಿದ್ದಾರೆ. ಇವರ ಪೈಕಿ ಯೂರೋಪ್‌ಗೆ ದೋಣಿಯಲ್ಲಿ ವಲಸಿಗರನ್ನು ಸಾಗಿಸುತ್ತಿದ್ದವರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next