ಸ್ವಕಲ್ಯಾಣ, ಪರಕಲ್ಯಾಣದ ಆತ್ಮಸಾಧನೆಯು ಸರ್ವರಿಗೂ ಸುಖ- ಶಾಂತಿಯನ್ನು ನೀಡುತ್ತದೆ. ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ. ಪ್ರಾಣಿದಯೆ, ಕರುಣೆ, ಸಹಬಾಳ್ವೆ, ಕ್ಷಮೆ, ಮೃದು ಸ್ವಭಾವ, ಸರಳ ಸಾತ್ವಿಕ ಜೀವನ, ಶ್ರದ್ಧಾವಂತ, ವಿವೇಕವಂತ ಸಾಧಕರ ಲಕ್ಷಣ. ಭಕ್ತ ಹಾಗೂ ಭಗವಂತನ ನಡುವೆ ಕಂದರ ಸಲ್ಲದು. ಜೀವಹಿಂಸೆಯಿಂದ, ರಕ್ತಪಾತದಿಂದ, ಪ್ರಾಣಿಗಳನ್ನು ನೋಯಿಸುವುದರಿಂದ, ಅತಿ ಭಾರಾರೋಪಣೆ ಮಾಡುವುದರಿಂದ, ಮೂಕಪ್ರಾಣಿಗಳ ವೇದನೆಯು ಭವ- ಭವದಲ್ಲಿ ನಮ್ಮ ದುಃಖವನ್ನು ಹೆಚ್ಚಿಸುತ್ತದೆ.
ಜೀವದಯಾ ಪರವಾದ ಅಹಿಂಸೆಯೇ ಪರಮಧರ್ಮ. ನೀವೂ ಬದುಕಿ, ಇತರರನ್ನೂ ಬದುಕಗೊಡಿ ಎಂಬುದು ಜನಪ್ರಿಯ ಸಂದೇಶ. ಜ್ಞಾನವಂತ, ಗುಣವಂತರೊಂದಿಗೆ ಮೈತ್ರಿಯನ್ನೂ; ದುಃಖೀ ಜೀವಿಗಳೊಂದಿಗೆ ಕರುಣೆಯೂ; ವಿಪರೀತದ ವ್ಯಕ್ತಿತ್ವದವರೊಂದಿಗೆ ಉದಾಸೀನ ಭಾವನೆಯೂ; ಹೃದಯದಲ್ಲಿ ಸದಾ ಸರ್ವಜ್ಞ ವೀತರಾಗನ ನೆನಪೂ, ಸಜ್ಜನರ ಲಕ್ಷಣ. ಹಿಂಸೆಯಿಂದ ಅಶಾಂತಿ, ಅಹಿಂಸಾ ಧರ್ಮಪಾಲನೆಯಿಂದ ಜಗತ್ತು ಸುಖೀ.
ಆಕ್ರಮಣ ಮನೋಭಾವ, ವಂಚನೆ, ಕೋಪ, ತಾಪ, ಕಲಹ, ನಿಂದನೆ, ಕಪಟತನ, ವೈರ, ಪರನಿಂದೆ, ಕ್ರೂರಭಾವನೆಗಳು, ಕ್ಷತ್ರಿಯರಿಗೆ- ಸಭ್ಯ ರಾಜಕಾರಣಿಗೆ ಭೂಷಣವಾಗಲಾರದು. ಸುಳ್ಳು, ಮೋಸ, ಕಲಬೆರಕೆ, ವಂಚನೆ, ಸ್ವಪ್ರಶಂಸೆ, ಉತ್ತಮ ವ್ಯಾಪಾರಿಗೆ ಹಾನಿ. ನಿರಂತರ ಓದು, ಆಲಸ್ಯವನ್ನು ಬಿಡುವುದು, ನೀತಿಯುಕ್ತ ಧರ್ಮಗ್ರಂಥಗಳ ಪಠಣ, ಸದಾಚಾರದಿಂದ ಸರ್ವರೂ ಜಗತ್ತಿನ ಜೀವಿಗಳೊಂದಿಗೆ ಮೈತ್ರಿಯಿಂದ ಇರುವುದು, ಗುರು- ಹಿರಿಯರಿಗೆ ಗೌರವ, ದೀನ- ದಲಿತರಿಗೆ ಸಹಕರಿಸುವುದು, ಮನುಷ್ಯನ ಕರ್ತವ್ಯ.
ದೇವಪೂಜೆ, ಗುರುಗಳಲ್ಲಿ ವಿನಯ, ಕರ್ಮದಿಂದ ಬಿಡುಗಡೆಗೊಳಿಸುವ, ಮೋಕ್ಷದ ಮಾರ್ಗವನ್ನು ತಿಳಿಸುವ ಗ್ರಂಥಗಳ ಓದು, ಪಂಚೇಂದ್ರಿಯಗಳ ಸಂಯಮ, ನಡೆದಾಡುವಾಗ- ವಸ್ತುಗಳನ್ನು ತೆಗೆದು ಕೊಳ್ಳುವಾಗ ಪ್ರಾಣಿಗಳಿಗೆ ನೋವಾಗದಂತೆ ವರ್ತಿಸುವುದು, ಚಂಚಲತೆಯ ನಿಗ್ರಹ, ಸಮತಾ ಭಾವದ ತಪಸ್ಸು, ಅಭಯದಾನ, ಔಷಧ ದಾನ, ವಿದ್ಯಾದಾನ, ಅನ್ನದಾನವನ್ನು ನಿರಂತರವಾಗಿ ಮಾಡುತ್ತಿರಬೇಕೆಂದು ಭಗವಾನ್ ಮಹಾವೀರರು, 2600 ವರ್ಷಗಳ ಹಿಂದೆಯೇ ಬೋಧಿಸಿದ್ದರು.
ಶತ್ರುಗಳು ಹೊರಗೆ ಎಲ್ಲೂ ಇಲ್ಲ. ನಮ್ಮೊಳಗೇ ಇರುವ ಕಾಮ, ಕ್ರೋಧ, ಮದ, ಮತ್ಸರ, ಮೋಹಗಳನ್ನು ಅಣುವ್ರತ, ಗುಣವ್ರತ, ಶಿಕ್ಷಾವ್ರತ ಆಚರಿಸುವ ಮೂಲಕ, ಜೀವನದ ನಿಜವಾದ ಸಂತೋಷವನ್ನು ಕಾಣೋಣ. ಶರೀರವು ನೌಕೆಯಂತೆ. ಆತ್ಮ ನಾವಿಕನಂತೆ. ಸಂಸಾರ ಸಮುದ್ರವಿದ್ದಂತೆ. ಈ ಸಂಸಾರ ಸಾಗರವನ್ನು, ಯೋಗ್ಯ ಜ್ಞಾನ, ತಪಸ್ಸಿನ ಸದ್ವಿವೇಕದ ಮೂಲಕ ಅಪಾಯವಿಲ್ಲದೆ ಸುಖವಾಗಿ ದಾಟೋಣ.
* ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಜೈನಮಠ, ಮೂಡಬಿದ್ರಿ