Advertisement
ಈ ಕುರಿತು ಬೆಂಗಳೂರಿನ ಮಾರತಹಳ್ಳಿಯ ಟೆಕ್ ಗ್ರಾಮದಲ್ಲಿರುವ ಶಿಯೊಮಿ ಕಂಪೆನಿ ಕಚೇರಿಯ ಪ್ರತಿನಿಧಿ ಸಮೀರ್ ಬಿ.ಎಸ್. ರಾವ್ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ ಚಂದನಗೌಡರ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠ ಪ್ರತಿವಾದಿಗಳಿಗೆ ತುರ್ತು ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ. ಸದ್ಯದ ಮಟ್ಟಿಗೆ ಜಪ್ತಿಗೆ ಆದೇಶಿಸಲಾಗಿರುವ ಬ್ಯಾಂಕ್ ಖಾತೆಗಳಲ್ಲಿರುವ ಹಣವನ್ನು ಕಂಪೆನಿಯು ತನ್ನ ದೈನಂದಿನ ಖರ್ಚು ವೆಚ್ಚಗಳಿಗಾಗಿ ಬಳಸಬಹುದು. ಜಾರಿ ನಿರ್ದೇಶನಾಲಯದ ಆದೇಶಕ್ಕೆ ಮಧ್ಯಾಂತರ ತಡೆ ನೀಡಿ ವಿಚಾರಣೆಯನ್ನು ಮೇ 12ಕ್ಕೆ ಮುಂದೂಡಿತು.
ಶಿಯೊಮಿ ಇಂಡಿಯಾ ಕಂಪೆನಿಯು ಭಾರತದಲ್ಲಿ ಗಳಿಸಿದ ಹಣವನ್ನು ರಾಯಧನ ನೀಡುವ ನೆಪದಲ್ಲಿ ವಿದೇಶಿ ಕಂಪೆನಿಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡುತ್ತಿದೆ. ಆದ್ದರಿಂದ, ಇದು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಎಂಬುದು ಇ.ಡಿ ಆರೋಪ. ಈ ಆರೋಪಗಳಿಗೆ ಸಂಬಂಧಿಸಿದಂತೆ ಬೆಂಗಳೂರಿನ ಇ.ಡಿ. ಕಚೇರಿಯ ಸಹಾಯಕ ನಿರ್ದೇಶಕ ಎನ್. ಸೋಮಶೇಖರ್, ಶಿಯೊಮಿ ಕಂಪೆನಿಯು ಬೆಂಗಳೂರು ನಗರದಲ್ಲಿನ ಸಿಟಿ ಬ್ಯಾಂಕ್, ಐಡಿಬಿಐ ಬ್ಯಾಂಕ್, ಡ್ವಾಯಿಷ್ ಬ್ಯಾಂಕ್, ಎಚ್‌ಎಸ್‌ಬಿಸಿ ಬ್ಯಾಂಕ್‌ಗಳ ಚಾಲ್ತಿ ಖಾತೆ ಮತ್ತು ನಿಶ್ಚಿತ ಠೇವಣಿಗಳಲ್ಲಿ ಹೊಂದಿರುವ 5,551.27 ಕೋಟಿ ರೂ. ಬೃಹತ್ ಮೊತ್ತವನ್ನು ಜಪ್ತಿ ಮಾಡಬೇಕು ಎಂದು 2022ರ ಎ. 29ರಂದು ಆದೇಶಿಸಿದ್ದರು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.