Advertisement

ಬಹುಮುಖ ಪ್ರತಿಭೆಯಾಗಿ ಮಿಂಚುತ್ತಿರುವ ಅಪೂರ್ವಾ

09:18 PM Sep 25, 2020 | Karthik A |

ತುಳುನಾಡ ಜಾನಪದ ಕಲೆಗಳಲ್ಲಿ ಯಕ್ಷಗಾನವು ಮಹತ್ವದಾದದು. ಈ ಸಾಂಸ್ಕೃತಿಕ ಕಲೆಯಲ್ಲಿ ಕಲೆಗಾರರು ಎಷ್ಟು ಮುಖ್ಯವೋ, ಚೆಂಡೆ ನಾದವು ಅಷ್ಟೇ ಪ್ರಾಮುಖ್ಯ ವಹಿಸುತ್ತದೆ.

Advertisement

ಸದ್ಯ ಚೆಂಡೆನಾದನದಲ್ಲಿ ಪುರುಷರಷ್ಟೇ ಮಹಿಳೆಯರ ಭಾಗವಹಿಸುವಿಕೆ ಹೆಚ್ಚುತ್ತಿದೆ. ಬಹುಮುಖ ಪ್ರತಿಭೆಯಾಗಿ ಮಿಂಚುತ್ತಿರುವ ಅಪೂರ್ವಾ ಆರ್‌. ಸುರತ್ಕಲ್‌ ಅವರು ಈ ಸಾಲಿಗೆ ಸೇರುತ್ತಾರೆ.

ದ.ಕ. ಜಿಲ್ಲೆಯ ಸುರತ್ಕಲ್‌ನ ರಮೇಶ್‌ ಟಿ.ಎನ್‌. ಮತ್ತು ರೂಪಾ ದಂಪತಿ ಪುತ್ರಿಯಾದ ಇವರು ತನ್ನ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ವಿದ್ಯಾದಾಯಿನಿ ಸಂಸ್ಥೆಯಲ್ಲಿ ಪೂರ್ಣಗೊಳಿಸಿ, ಪ.ಪೂ. ಹಾಗೂ ಗೋವಿಂದದಾಸ್‌ ಕಾಲೇಜಿನಲ್ಲಿ ಪದವಿ , ಸೈಂಟ್‌ ಆಲೋಶಿಯಸ್‌ ಕಾಲೇಜು ಮಂಗಳೂರಿನಲ್ಲಿ ಗಣಿತ ವಿಭಾಗದಲ್ಲಿ ಎಂ.ಎ. ಓದಿ, ಪ್ರಸ್ತುತವಾಗಿ ಅಮೃತ ಕಾಲೇಜು ಪಡಿಲ್‌ನಲ್ಲಿ ಅಂತಿಮ ವರ್ಷದ ಬಿ.ಎಡ್‌. ಕಲಿಯುತ್ತಿದ್ದಾರೆ.
ಚಿಕ್ಕಂದಿನಿಂದಲೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಇವರಿಗೆ ಹೆಚ್ಚಿನ ಆಸಕ್ತಿ ಇತ್ತು.

ಚೆಂಡೆ, ಮದ್ದಳೆ ಕಲೆಗಳಲ್ಲದೇ, ಭರತನಾಟ್ಯ, ಚಿತ್ರಕಲೆ, ನಾಟಕ, ಕಾರ್ಯಕ್ರಮ ನಿರೂಪಣೆಯಲ್ಲೂ ಸೈ ಎನ್ನಿಸಿಕೊಂಡಿದ್ದಾರೆ. 2005ರಿಂದ ತೆಂಕುತಿಟ್ಟು ಯಕ್ಷಗಾನ ಹಿಮ್ಮೆಳನ ವಾದನವನ್ನು ಮಾಂಬಾಡಿ ಸುಬ್ರಹ್ಮಣ್ಯ ಭಟ್‌ ಇವರಿಂದ ಕಲಿಯಲು ಪ್ರಾರಂಭಿಸಿದರು. ಅದೇ ರೀತಿ ಚಂದ್ರಶೇಖರ ನಾವಡ ಅವರಿಂದ ಭರತನಾಟ್ಯ ತರಬೇತಿ ಪಡೆದು 300ಕ್ಕೂ ಹೆಚ್ಚು ಕಡೆ ಪ್ರದರ್ಶನ ನೀಡಿದ್ದಾರೆ. ಹಾಗೇಯೆ ಚಿತ್ರಕಲೆಯನ್ನು ಮನೋರಂಜಿನಿ ಅವರಿಂದ ಕಲಿತು ವಿಭಿನ್ನ ಶೈಲಿಯ ಚಿತ್ರವನ್ನು ಬಿಡಿಸುತ್ತಾ ಜನರ ಮೆಚ್ಚುಗೆಯನ್ನು ಪಡೆದಿದ್ದಾರೆ.

ಯಕ್ಷಗಾನ ಹಿಮ್ಮೇಳನ ವಾದನದಲ್ಲಿ ಮನೆಮಾತಾದ ಇವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಧರ್ಮಸ್ಥಳ, ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿ ಕಟೀಲು, ಶ್ರೀ ಕರ್ನಾಟಕ ಸಂಘ ಮಹಿಳಾ ಯಕ್ಷಗಾನ ಮಂಡಳಿ ಚೆನ್ನೈ ಹೀಗೆ ಹಲವಾರು ಯಕ್ಷಗಾನ ಮೇಳಗಳಲ್ಲಿ ಹಿಮ್ಮೇಳ ವಾದಕಿಯಾಗಿ ಭಾಗವಹಿಸಿ ಮಿಂಚುತ್ತಿದ್ದಾರೆ ಅಪೂರ್ವ.

Advertisement

ಕಲೆಯ ಜತೆ ಶಿಕ್ಷಣದಲ್ಲೂ ಮುಂದಿರುವ ಉಪಾನ್ಯಾಸಕಿ ಆಗಬೇಕೆಂಬ ಕನಸ ಹೊಂದಿದ್ದಾರೆ. ಹಾಗೇಯೆ ನಾನು ಕಲಿತ ಕಲೆಯನ್ನು ಇತರರಿಗೆ ಕಲಿಸಿ ಅದರಿಂದ ನಾಲ್ಕು ಜನಕ್ಕೆ ಉಪಯೋಗವಾದರೆ ನನಗದುವೇ ಖುಷಿ ಎಂಬುದು ಇವರ ಮಾತು.

ನನ್ನೆಲ್ಲಾ ಸಾಧನೆಗೂ ಹೆತ್ತವರ ಪ್ರೋತ್ಸಾಹ ಕಾರಣ ಎನ್ನುವ ಇವರು ಆಟ, ತಾಳಮದ್ದಳೆ, ಗಾನವೈಭವ, ನಾಟ್ಯವೈಭವ ಸಹಿತ ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ರಾಜ್ಯ, ಹೊರರಾಜ್ಯಗಳಲ್ಲಿ ನೀಡಿ ಹಲವಾರು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.

ಸಮ್ಮಾನ ಮತ್ತು ಪ್ರಶಸ್ತಿಗಳು
ದ.ಕ. ಜಿಲ್ಲಾ ಸಾಹಿತ್ಯ ಪರಿಷತ್‌ ಇದರಿಂದ ರಾಜ್ಯೋತ್ಸವ ಸಾಧಕ ಪುರಾಸ್ಕರ, ಕಲಾಸಂಗಮ ಸಾಂಸ್ಕೃತಿಕ ವೇದಿಕೆ ಮಂಗಳೂರು ಕಲಾಸಂಗಮ ಪುರಸ್ಕಾರ, ಜನಮಂದಾರ ಟ್ರಸ್ಟ್‌ ಇವರಿಂದ ಜನಶ್ರೀ ಪ್ರಶಸ್ತಿ, ಕರಾವಳಿ ಕೇಸರಿ ಇವರಿಂದ ಕಲಾಕೇಸರಿ ಪ್ರಶಸ್ತಿ, ಕೇರಳ ರಾಜ್ಯ ಕನ್ನಡ ಸಮ್ಮೇಳನ 2015ರಲ್ಲಿ ಸಮ್ಮಾನ, ಕೇರಳ ಕರ್ನಾಟಕ ಉತ್ಸವ ಕರಾವಳಿ 2014ರಲ್ಲಿ ಸಾಂಸ್ಕೃತಿಕ ಪ್ರತಿಷ್ಠಾನ ಪ್ರಶಸ್ತಿ, ಯಕ್ಷಮಿತ್ರರು ಬೆಳ್ಮಣ್ಣು ಇವರಿಂದ ಸಮ್ಮಾನ, ಯಕ್ಷಗಾನ ಕ್ಷೇತ್ರದಲ್ಲಿ ಅನೇಕ ಸಮ್ಮಾನಗಳು ಮತ್ತು ನೂರಕ್ಕೂ ಹೆಚ್ಚು ಪ್ರತಿಭಾ ಪುರಸ್ಕಾರಗಳನ್ನು ಅಪೂರ್ವ ಪಡೆದಿದ್ದಾರೆ.


ಶೈಲಶ್ರೀ ಬಾಯಾರ್‌, ವಿವೇಕಾನಂದ ಕಾಲೇಜು, ಪುತ್ತೂರು

 

Advertisement

Udayavani is now on Telegram. Click here to join our channel and stay updated with the latest news.

Next