ಬಿಗ್‌ಬಾಸ್ ವಿನ್ನರ್ ಆಗಿ ಹೊರಬಂದ ಮೇಲೆ ಹತ್ತಾರು ಸಿನಿಮಾಗಳ ಆಫರ್ ಬರುತ್ತಿರು ವುದೇನೋ ನಿಜ. ಈಗಲೂ ನನಗೆ ಬರುವ ಸಿನಿಮಾ ಆಫರ್‌ಗಳ ಕಥೆ ಕೇಳುತ್ತೇನೆ. ಒಳ್ಳೆಯ ರೈಟರ್ ತುಂಬ ಒಳ್ಳೆಯ ಕಥೆಗಳನ್ನು ತರುತ್ತಿದ್ದಾರೆ. ನನಗೆ ಅವು ಇಷ್ಟವಾದ್ರೆ, ಮುಂದೆ ಖಂಡಿತ ಅವುಗಳನ್ನು ಸಿನಿಮಾ ಮಾಡಲು ಯೋಚನೆ ಮಾಡುತ್ತೇನೆ.
ಇತ್ತೀಚೆಗಷ್ಟೆ ಬಿಗ್‌ಬಾಸ್ ಮನೆಯಿಂದ ವಿಜೇತರಾಗಿ ಹೊರಬಂದಿರುವ ಶೈನ್ ಶೆಟ್ಟಿ ಸದ್ಯ ಹೊಸ ಜೋಶ್‌ನಲ್ಲಿ ಬಿಗ್ ಸ್ಕ್ರೀನ್‌ಗೆ ಎಂಟ್ರಿಯಾಗಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಸದ್ಯ
ಶೈನ್ ಶೆಟ್ಟಿ ನಾಯಕ ನಟನಾಗಿ ಎರಡು ಚಿತ್ರಗಳಲ್ಲಿ ಅಭಿನಯಿಸಲು ರೆಡಿಯಾಗಿದ್ದು, ಆ ಚಿತ್ರಗಳ ಪ್ರೀ-ಪ್ರೊಡಕ್ಷನ್ ಕೆಲಸಗಳು ಈಗಾಗಲೇ ಭರದಿಂದ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಆ ಚಿತ್ರಗಳ ಬಗ್ಗೆ ಹೆಚ್ಚಿನ ಮಾಹಿತಿಗಳು ಹೋರಬೀಳುವ ಸಾಧ್ಯತೆ ಇದೆ. ಇದೇ ವೇಳೆ “ಉದಯವಾಣಿ’ ಜೊತೆಗೆ ಮಾತಿಗೆ ಸಿಕ್ಕ ಶೈನ್ ಶೆಟ್ಟಿ ತಮ್ಮ ಮುಂದಿನ ಸಿನಿ ನಡೆಯ ಕುರಿತು ಒಂದಷ್ಟು ಮಾತನಾಡಿದ್ದಾರೆ.
“ಬಿಗ್‌ಬಾಸ್ ಮನೆಯಿಂದ ಗೆದ್ದು ಹೊರಬಂದ ಮೇಲೆ ಸಹಜವಾಗಿಯೇ ಒಂದಷ್ಟು ಸಿನಿಮಾಗಳ ಆಫರ್ ಬರುತ್ತಿರುವುದೇನೋ ನಿಜ. ಆದ್ರೆ ಹಾಗೆ ಬಂದ ಎಲ್ಲ ಆಫರ್‌ಗಳನ್ನು ಏಕಾಏಕಿ ಒಪ್ಪಿಕೊಳ್ಳುತ್ತಿಲ್ಲ. ಈಗಾಗಲೇ ಎರಡು ಒಳ್ಳೆಯ ಸಬೆjಕ್ಟ್‌ನ ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ. ಆ ಸಿನಿಮಾಗಳ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಇದೇ ಮಾರ್ಚ್‌ನಲ್ಲೇ ಆ ಸಿನಿಮಾ ಶುರುವಾಗಬೇಕಿತ್ತು. ಆದ್ರೆ ಈಗ ಎಲ್ಲಾ ಕಡೆ ಕೊರೊನಾ ಭಯ ಇರುವುದರಿಂದ ಸ್ವಲ್ಪ ಕಾಲ ಎಲ್ಲವನ್ನೂ ಪೋಸ್ಟ್‌ಪೋನ್ ಮಾಡಲಾಗಿದೆ. ಆದಷ್ಟು ಬೇಗ ಆ ಸಿನಿಮಾಗಳ ಟೈಟಲ್, ನನ್ನ ಕ್ಯಾರೆಕ್ಟರ್ ಎಲ್ಲವನ್ನೂ ರಿವೀಲ್ ಮಾಡುತ್ತೇವೆ’ ಎನ್ನುತ್ತಾರೆ ಶೈನ್ ಶೆಟ್ಟಿ.
ಇನ್ನು ಶೈನ್ ಶೆಟ್ಟಿಗೆ ಮಾಮೂಲಿ ಕಮರ್ಷಿಯಲ್ ಸಿನಿಮಾಗಳಿಗಿಂತ ಕಂಟೆಂಟ್ ಆಧರಿತ ಚಿತ್ರಗಳ ಕಡೆಗೆ ಹೆಚ್ಚಿನ ಒಲವಿದೆಯಂತೆ. ಈ ಬಗ್ಗೆ ಅವರೇ ಹೇಳು ವಂತೆ, “ನನಗೆ ಎಲ್ಲರೂ ಮಾಡುವಂಥ ಮಾಮೂಲಿ ಕಮರ್ಷಿಯಲ್ ಸಿನಿಮಾಗಳು, ಅಂಥ ಪಾತ್ರಗಳನ್ನು ಮಾಡುವುದರಲ್ಲಿ ಆಸಕ್ತಿಯಿಲ್ಲ. ಆದಷ್ಟು ಕಂಟೆಂಟ್ ಆಧಾರಿತ, ರಿಯಾಲಿಸ್ಟಿಕ್ ಸಬ್ಜೆಕ್ಟ್ ಆಧಾರಿತ ಸಿನಿಮಾಗಳನ್ನು ಮಾಡಬೇಕು. ಅಂಥ ಸಿನಿಮಾಗಳಲ್ಲಿ ಗುರುತಿಸಿಕೊಳ್ಳಬೇಕು ಎಂಬ ಆಸೆಯಿದೆ. ಅದರಲ್ಲೂ ಬಯೋಪಿಕ್ ಮಾಡಲು ತುಂಬಾನೇ ಆಸೆ ಇದೆ. ಮುಂದೆ ಅವಕಾಶ ಸಿಕ್ಕರೆ ಖಂಡಿತ ಮಾಡ್ತೀನಿ’ ಎನ್ನುತ್ತಾರೆ.
ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಮೂಲಕವೇ ಪ್ರಸಿದ್ದಿ ಪಡೆದ ಶೈನ್ ಶೆಟ್ಟಿ ಮತ್ತೆ ಕಿರುತೆರೆ ಕಡೆಗೆ ಹೋಗುತ್ತಾರಾ ಎಂಬ ಪ್ರಶ್ನೆಗೆ ಅವರಿಂದ “ಇಲ್ಲ’ ಎನ್ನುವ ಉತ್ತರ ಬರುತ್ತದೆ. “ನಾನು ಸಂಪೂರ್ಣವಾಗಿ ಸಿನಿಮಾ ಕಡೆಗೆ ಬರಬೇಕು ಎನ್ನುವ ಉದ್ದೇಶದಿಂದಲೇ ಸೀರಿಯಲ್‌ನಿಂದ ಹೊರಬಂದೆ. ಕಿರುತೆರೆ ನನಗೆ ಸಾಕಷ್ಟು ಹೆಸರು, ಜನಪ್ರಿಯತೆ ಎಲ್ಲ ತಂದು ಕೊಟ್ಟಿದ್ದರೂ, ಮತ್ತೆ ಕಿರುತೆರೆಗೆ ಹೋಗುವ ಯಾವುದೇ ಯೋಚನೆಯಿಲ್ಲ. ಸದ್ಯಕ್ಕೆ ನನ್ನ ಗಮನ ಏನಿದ್ದರೂ ಸಿನಿಮಾದ ಕಡೆಗೆ’ ಎನ್ನುತ್ತಾರೆ ಶೈನ್ ಶೆಟ್ಟಿ.
ಸದ್ಯ ಶೈನ್ ಶೆಟ್ಟಿ ತಾವು ಒಪ್ಪಿಕೊಂಡಿರುವ ಎರಡು ಚಿತ್ರ ಗಳನ್ನು ಶುರು ಮಾಡುವುದಕ್ಕೂ ಮೊದಲು, “ದೂಂಡಾ’ ಎನ್ನುವ ಮ್ಯೂಸಿಕ್ ಆಲ್ಬಂ ಒಂದರ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಡ್ಯಾನಿಯಲ್ ಮತ್ತು ಸುಹಿತ್ ಬಂಗೇರ ಸಂಗೀತ ಸಂಯೋಜಿಸಿ, ನಿರ್ಮಿಸುತ್ತಿರುವ ಈ ಮ್ಯೂಸಿಕ್ ಆಲ್ಬಂನಲ್ಲಿ ಶೈನ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. ಬೆನ್ನಿ ದಯಾಳ್ ಈ ಮ್ಯೂಸಿಕ್ ಆಲ್ಬಂನ ಗೀತೆಗೆ ಧ್ವನಿಯಾಗಿದ್ದು, ನಾರ್ಥ್-ಈಸ್ಟ್ ರಾಜ್ಯದ ಬುಡಕಟ್ಟು ಜನರ ಮೋಡಿ ವಿದ್ಯೆಯ ಕುರಿತಾಗಿ ಮೂಡಿಬರುತ್ತಿರುವ “ದೂಂಡಾ’ ಮ್ಯೂಸಿಕ್ ಆಲ್ಬಂನ ಬಹುತೇಕ ಚಿತ್ರೀಕರಣ ನಾರ್ಥ್-ಈಸ್ಟ್ ರಾಜ್ಯಗಳ ಬುಡಕಟ್ಟು ಪ್ರದೇಶಗಳಲ್ಲೆ ನಡೆಯಲಿದೆಯಂತೆ.
“ಬಿಗ್‌ಬಾಸ್ ವಿನ್ನರ್ ಆಗಿ ಹೊರಬಂದ ಮೇಲೆ ಹತ್ತಾರು ಸಿನಿಮಾಗಳ ಆಫರ್ ಬರುತ್ತಿರುವುದೇನೋ ನಿಜ. ಈಗಲೂ ನನಗೆ ಬರುವ ಸಿನಿಮಾ ಆಫರ್‌ಗಳ ಕಥೆ ಕೇಳುತ್ತೇನೆ. ಒಳ್ಳೆಯ ರೈಟರ್ ತುಂಬ ಒಳ್ಳೆಯ ಕಥೆಗಳನ್ನು ತರುತ್ತಿದ್ದಾರೆ. ನನಗೆ ಅವು ಇಷ್ಟವಾದ್ರೆ, ಮುಂದೆ ಖಂಡಿತ ಮಾಡಲು ಯೋಚನೆ ಮಾಡುತ್ತೇನೆ. ಸದ್ಯಕ್ಕಂತೂ ಈಗ ಒಪ್ಪಿಕೊಂಡಿರುವ ಎರಡು ಸಿನಿಮಾಗಳನ್ನು ಮುಗಿಸುವುದರ ಕಡೆಗೆ ನನ್ನ ಗಮನ’ ಎನ್ನುತ್ತಾರೆ ಶೈನ್ ಶೆಟ್ಟಿ.
ಜಿ.ಎಸ್.ಕಾರ್ತಿಕ್ ಸುಧನ್