Advertisement

ಕೋಸ್ಟಲ್‌ವುಡ್‌ಗೆ ‘ಪಂಚಮ’ಕಿರೀಟ..!

12:40 PM Apr 19, 2018 | |

ಕೋಸ್ಟಲ್‌ವುಡ್‌ನ‌ಲ್ಲಿ ಸಿನೆಮಾ ಚಟುವಟಿಕೆ ಬಿರುಸಿನಿಂದ ನಡೆಯುತ್ತಿದೆ. ನೂರಾರು ಕಲಾವಿದರು, ಸಾವಿರಾರು ತಂತ್ರಜ್ಞರು ಹಾಗೂ ಪರಿಣತರು ಶ್ರಮಿಸುತ್ತಿದ್ದಾರೆ. ಕೆಲವೊಂದು ಸಿನೆಮಾಗಳಂತೂ ಯಶಸ್ವೀ ಪ್ರದರ್ಶನದ ಮೂಲಕ ಗಮನಸೆಳೆಯುತ್ತಿದ್ದರೆ, ಇನ್ನೂ ಕೆಲವು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಿವೆ. ಇವೆಲ್ಲದಕ್ಕೆ ಮುಕುಟವೆಂಬಂತೆ ಈಗ ತುಳುವಿಗೆ ಮತ್ತೆ ರಾಷ್ಟ್ರೀಯ ಗೌರವ ಪ್ರಾಪ್ತಿಯಾಗಿದೆ.

Advertisement

ಕಡಲ ತೀರದ ಮೀನುಗಾರರ ಕಥೆಯನ್ನು ಆಧರಿಸಿ ಕಾರ್ಕಳದ ನಿತ್ಯಾನಂದ ಪೈ ನಿರ್ಮಾಣ ಹಾಗೂ ಅಭಯಸಿಂಹ ನಿರ್ದೇಶಿಸಿದ ತುಳುವಿನ ‘ಪಡ್ಡಾಯಿ’ ಸಿನೆಮಾ 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಪ್ರಾದೇಶಿಕ ಚಿತ್ರ ವಿಭಾಗದ ತುಳುವಿನಲ್ಲಿ ರಾಷ್ಟ್ರೀಯ ಗೌರವ ಪಡೆದುಕೊಂಡಿದೆ. 

ತುಳುವಿನಲ್ಲಿ ‘ಪಡ್ಡಾಯಿ’ ಅಂದರೆ ಪಶ್ಚಿಮ ಎಂದರ್ಥ. ಕರಾವಳಿ ಭಾಗದ ಮೀನುಗಾರರು ಪಶ್ಚಿಮದ ಕಡಲಿಗೆ ಮೀನುಗಾರಿಕೆಗೆ ಹೋಗುವುದನ್ನು ‘ಪಡ್ಡಾಯಿ’ಗೆ ಹೋಗುವುದು ಎಂದೇ ಹೇಳುತ್ತಾರೆ. ಇಂತಹ ಜನಜೀವನ ದಲ್ಲೂ ಪಾಶ್ಚಾತ್ಯ ಕಲ್ಪನೆಗಳ ನೆರಳಿನಿಂದ ಬದಲಾವಣೆಯಾಗಿದೆ. ಆ ಸಮುದಾಯದ ಇಂತಹ ಚಿತ್ರಣವೇ ಪಡ್ಡಾಯಿ ಸಿನೆಮಾ. ಪ್ರಸಿದ್ಧ ನಾಟಕಕಾರ ಶೇಕ್ಸ್‌ಪಿಯರ್‌ ರಚಿಸಿದ ‘ಮ್ಯಾಕ್‌ಬೆತ್‌’ ನಾಟಕದಿಂದ ಸ್ಫೂರ್ತಿ ಪಡೆದು ಈ ಸಿನೆಮಾ ಮಾಡಲಾಗಿದೆ. ಮೇ ಕೊನೆ ಅಥವಾ ಜೂನ್‌ ಮೊದಲ ವಾರದಲ್ಲಿ ಈ ಸಿನೆಮಾ ಕರಾವಳಿಯಲ್ಲಿ ರಿಲೀಸ್‌ ಆಗಲಿದೆ.

ಅಂದಹಾಗೆ, ಈ ಮೊದಲು, ತುಳುವಿನ ‘ಬಂಗಾರ್‌ ಪಟ್ಲೆರ್‌’, ‘ಕೋಟಿ ಚೆನ್ನಯ’, ‘ಗಗ್ಗರ’ ಹಾಗೂ ‘ಮದಿಪು’ ಸಿನೆಮಾವು ರಾಷ್ಟ್ರೀಯ ಪ್ರಶಸ್ತಿಯನ್ನು ಮುಡಿಗೇರಿಸಿದೆ.

‘ಬಂಗಾರ್‌ ಪಟ್ಲೆರ್‌’ಗೆ ಮೊದಲ ಕಿರೀಟ..!
ರಾಜಲಕ್ಷ್ಮೀ ಫಿಲಂಸ್‌ನಲ್ಲಿ ನಾರಾಯಣ ಶೆಟ್ಟಿ ಅವರ ‘ಸತ್ಯ ಬತ್ತಲೆ’ ಎಂಬ ತುಳು ನಾಟಕದ ಕಥೆಗೆ ರಿಚರ್ಡ್‌ ಕ್ಯಾಸ್ಟಲಿನೋ ಅವರು ಚಿತ್ರಕಥೆ ಬರೆದು ‘ಬಂಗಾರ್‌ ಪಟ್ಲೇರ್‌’ ಎಂದು ತುಳುವಿನ 25ನೇ ಸಿನೆಮಾವನ್ನು 1993ರಲ್ಲಿ ನಿರ್ಮಿಸಲಾಗಿತ್ತು. ಈಸ್ಟ್‌ಮನ್‌ ಕಲರಿನ ಪ್ರಥಮ ಸಿನೆಮಾಸ್ಕೋಪ್‌ ತುಳುಚಿತ್ರ ಇದಾಗಿತ್ತು. ಈ ಚಿತ್ರಕ್ಕೆ ತುಳುವಿನ ಮೊದಲ ರಾಷ್ಟ್ರೀಯ ಪ್ರಶಸ್ತಿ ದೊರಕಿತ್ತು.

Advertisement

ಕೋಟಿ ಚೆನ್ನಯಕ್ಕೂ ಗೌರವ
ಪ್ರಾರ್ಥನಾ ಕ್ರಿಯೇಶನ್ಸ್‌ ಮಂಗಳೂರು ಇವರ ಆರ್‌. ಧನ್‌ರಾಜ್‌ ನಿರ್ಮಾಣ, ಆನಂದ ಪಿ. ರಾಜು ನಿರ್ದೇಶನದ ‘ಕೋಟಿ ಚೆನ್ನಯ’ 33ನೇ ತುಳು ಚಿತ್ರಕ್ಕೆ ರಾಷ್ಟ್ರೀಯ ಗೌರವ ದೊರಕಿದ್ದು, 2006ರಲ್ಲಿ ಈ ಚಿತ್ರ ತೆರೆಕಂಡಿತ್ತು.

ಹಾಡುಗಳಿಲ್ಲದ ‘ಗಗ್ಗರ’
2008ರಲ್ಲಿ ‘ಗಗ್ಗರ’ ತುಳು ಚಿತ್ರಕ್ಕೆ ರಾಷ್ಟ್ರೀಯ ಪ್ರಾದೇಶಿಕ ಭಾಷಾ ಚಲನಚಿತ್ರ ಪ್ರಶಸ್ತಿ ದೊರಕಿದೆ. ಗುರುದತ್ತ ಹಾಗೂ
ಎಂ. ದುರ್ಗಾನಂದ ನಿರ್ಮಾಣದ ಶಿವಧ್ವಜ್‌ ನಿರ್ದೇಶಿಸಿದ ಈ ಚಿತ್ರವು ಹಾಡುಗಳಿಲ್ಲದೆ ನಿರ್ಮಾಣವಾಗಿರುವುದು ವಿಶೇಷ. ಚಿತ್ರವು ಪೂರ್ಣವಾಗಿ ಕಾರ್ಕಳದ ಪಳ್ಳಿಯಲ್ಲಿ ಚಿತ್ರೀಕರಣವಾಗಿದೆ.

ಕಳೆದ ವರ್ಷ ‘ಮದಿಪು’ವಿಗೆ ದೊರೆತ ಪುರ್ಸಾದ!
ತುಳುನಾಡಿನ ಶ್ರೀಮಂತಿಕೆಯನ್ನು ಸಾರಿದ ‘ಮದಿಪು’ ಸಿನೆಮಾಕ್ಕೆ ಕಳೆದ ವರ್ಷ ರಾಷ್ಟ್ರೀಯ ಗೌರವ ದೊರೆತಿದೆ.
ಆಸ್ಥಾ ಪೊಡಕ್ಷನ್‌ ಲಾಂಛನದಲ್ಲಿ ತಯಾರಾದ ‘ಮದಿಪು’ ಚಿತ್ರದ ಕಥೆ, ಚಿತ್ರಕಥೆ, ಕಲಾ ನಿರ್ದೇಶನವನ್ನು ಚೇತನ್‌
ಮುಂಡಾಡಿ ನಡೆಸಿದ್ದು, ಸಂದೀಪ್‌ ಕುಮಾರ್‌ ನಂದಳಿಕೆ ನಿರ್ಮಾಪಕರು.

 ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next