ಶಿವಮೊಗ್ಗ: ಜಿಲ್ಲೆ ಅದರಲ್ಲೂ ಶಿವಮೊಗ್ಗ ನಗರ ಇನ್ನಷ್ಟು ಅಭಿವೃದ್ಧಿಯಾಗುವ ಅಗತ್ಯವಿದೆ. ಈ ಹಿನ್ನಲೆಯಲ್ಲಿ ವಿಮಾನ ನಿಲ್ದಾಣ, ವರ್ತುಲ ರಸ್ತೆ, ಹಳೆ ಜೈಲು ಸ್ಥಳದ ಅಭಿವೃದ್ಧಿ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಸರ್ವಾಂಗೀಣ ಅಭಿವೃದ್ಧಿಗೆ ಈಗಾಗಲೇ ಸಾಕಷ್ಟು ಬಾರಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ನಿಂತಿರುವ ಕಾಮಗಾರಿಗಳ ಮಾಹಿತಿ ಪಡೆದು ಬಿಡುಗಡೆಯಾಗಬೇಕಿರುವ ಅನುದಾನದ ವರದಿಯನ್ನು ಸೂಚಿಸಿದ್ದೇನೆ ಎಂದರು. ಶಿವಮೊಗ್ಗ ಜಿಲ್ಲೆ ಸಮಗ್ರವಾಗಿ ಅಭಿವೃದ್ಧಿಯಾಗಬೇಕಾದರೆ ಪ್ರಮುಖವಾಗಿ ಇಲ್ಲಿಗೆ ಕೈಗಾರಿಕೆಗಳು ಬರಬೇಕು. ಉದ್ಯೋಗಾವಾಶ ಹೆಚ್ಚಳವಾಗಬೇಕು ಎಂಬ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಆದಷ್ಟು ಬೇಗ ಆರಂಭವಾಗಲಿದೆ. ಈಗಾಗಲೇ 39 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದರು.
ಹಳೆ ಜೈಲು ಆವರಣದ ಅಭಿವೃದ್ಧಿ: ಹಳೇ ಜೈಲು ಆವರಣದಲ್ಲಿ ಸುಂದರ ಪಾರ್ಕ್, ಆಟದ ಮೈದಾನ ನಿರ್ಮಿಸಲಿದ್ದು, ಸಾರ್ವಜನಿಕ ಉಪಯೋಗಕ್ಕೆ ಅವಕಾಶ ಕಲ್ಪಿಸಲಾಗುವುದು. ಅಧಿಕಾರಿಗಳು ಈಗಾಗಲೇ ನೀಲನಕ್ಷೆ ಸಿದ್ಧಪಡಿಸಿದ್ದು, ಅದಕ್ಕೆ ಅಗತ್ಯವಾದ ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಶಿವಮೊಗ್ಗ ನಗರದಲ್ಲಿ ವರ್ತುಲ ರಸ್ತೆಯೂ ಬಹುದಿನದ ಬೇಡಿಕೆಯಾಗಿದೆ. ಇದರಿಂದ ಸಂಪೂರ್ಣವಾಗಿ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದು, ಅಗತ್ಯ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು. ಒಟ್ಟಾರೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.
ತೀರ್ಥಹಳ್ಳಿ ಸೇರಿದಂತೆ ಜಿಲ್ಲೆಯ ಅನೇಕ ಅತಿವೃಷ್ಟಿ ಹಾನಿಯ ಬಗ್ಗೆ ನೆರವನ್ನು ಮತ್ತಷು ಚುರುಕುಗೊಳಿಸಲಾಗುವುದು. ಈಗಾಗಲೇ ಕೇಂದ್ರದ ತಂಡ ಸಮೀಕ್ಷೆ ನಡೆಸಿದೆ. ಹೆಚ್ಚು ನೆರವಿನ ನಿರೀಕ್ಷೆಯಲ್ಲಿದ್ದೇವೆ. ಸುಮಾರು 1 ಲಕ್ಷ ಮನೆಗಳ ನಿರ್ಮಾಣವಾಗಬೇಕಿದೆ. ಕೇಂದ್ರದಿಂದ ಹೆಚ್ಚಿನ ನೆರವು ಆದ್ಯತೆ ಮೇರೆಗೆ ಸಿಗಲಿದೆ. ಸ್ವಲ್ಪ ತಾಳ್ಮೆ ಇರಬೇಕಷ್ಟೇ ಎಂದರು.
ಸೆ. 7, 8 ರಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬೆಂಗಳೂರಿಗೆ ಬರಲಿದ್ದು, ಅವರಿಗೆ ರಾಜ್ಯದಲ್ಲಿ ಅತಿವೃಷ್ಟಿಯಿಂದಾದ ಅನಾಹುತ, ಹಾನಿಯ ಬಗ್ಗೆ ತಿಳಿಸಿ ಹೆಚ್ಚಿನ ನೆರವು ನೀಡಲು ಮನವಿ ಮಾಡಲಾಗುವುದು ಎಂದರು. ಶಾಸಕರಾದ ಆರಗ ಜ್ಞಾನೇಂದ್ರ, ಕುಮಾರ್ ಬಂಗಾರಪ್ಪ, ಹರತಾಳು ಹಾಲಪ್ಪ, ರುದ್ರೇಗೌಡ, ಸಂಸದ ರಾಘವೇಂದ್ರ, ಡಿ.ಎಸ್. ಅರುಣ್, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಎಸ್.ಪಿ. ಶಾಂತರಾಜ್, ಸಿಇಒ ವೈಶಾಲಿ ಮತ್ತಿತರರು ಇದ್ದರು.