Advertisement

ಕೋಟೆ ಮಾರಿಕಾಂಬಾ ಜಾತ್ರೆಗೆ ಭರದ ಸಿದ್ಧತೆ

01:16 PM Feb 24, 2020 | Naveen |

ಶಿವಮೊಗ್ಗ: ಕೋಟೆ ಶ್ರೀ ಮಾರಿಕಾಂಬಾ ಜಾತ್ರೆ ಫೆ.25 ರಂದು ಆರಂಭಗೊಳ್ಳುತ್ತಿದ್ದು ಸಿದ್ಧತೆ ಭರದಿಂದ ಸಾಗಿದೆ ಎಂದು ಎಂದು ಕೋಟೆ ಶ್ರೀ ಮಾರಿಕಾಂಬಾ ಸೇವಾ ಸಮಿತಿ ಅಧ್ಯಕ್ಷ ಎಸ್‌.ಕೆ. ಮರಿಯಪ್ಪ ತಿಳಿಸಿದರು.

Advertisement

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೆ.25ರಂದು ಬೆಳಗ್ಗೆ ದೇವಿಯನ್ನು ಗಾಂಧಿ  ಬಜಾರ್‌ನಲ್ಲಿರುವ ತವರು ಮನೆಗೆ ಕರೆದೊಯ್ಯಲಾಗುವುದು. ಅಲ್ಲಿಂದ ಜಾತ್ರೆಗೆ ಮೆರುಗು ಬರಲಿದೆ. ಅಲ್ಲಿ ದ್ವಾರ ಬಾಗಿಲು ಕಟ್ಟುವ ಕೆಲಸ ಪೂರ್ಣಗೊಂಡಿದೆ. ದೇವಿಯನ್ನು ಕರೆದುಕೊಂಡು ಹೋಗುವಾಗ ಮತ್ತು ಬರುವಾಗ ಬೆಂಗಳೂರಿನ ಅಣ್ಣಮ್ಮ ದೇವಿಯ ಚಂಡೆ ಬಡಿಯುವವರ ತಂಡವು ಬರಲಿದೆ. ಇದರ ಜವಾಬ್ದಾರಿಯನ್ನು ಜೆಡಿಎಸ್‌ ಮುಖಂಡ ಶ್ರೀಕಾಂತ್‌ ವಹಿಸಿಕೊಂಡಿದ್ದಾರೆ. ಅದರ ಜತೆಗೆ ಉಡುಪಿ, ಮಂಗಳೂರಿನ ಕಲಾತಂಡಗಳು ಬರಲಿವೆ ಎಂದರು.

ಕುಸ್ತಿಗೆ ಆಹ್ವಾನ: ಪ್ರತಿ ವರ್ಷ ರಾಜ್ಯ, ರಾಷ್ಟ್ರಮಟ್ಟದ ಕುಸ್ತಿಪಟುಗಳನ್ನು ಆಹ್ವಾನಿಸಲಾಗುತ್ತಿದೆ. ಈ ಬಾರಿ ಪೂನಾವರೆಗೂ ಹೋಗಿ ಗರಡಿ ಮನೆಗಳನ್ನು ಭೇಟಿ ಮಾಡಿ ಆಹ್ವಾನ ನೀಡಲಾಗಿದೆ. ಕಳೆದ 350 ಜನ ಕುಸ್ತಿಪಟುಗಳು ಭಾಗವಹಿಸಿದ್ದರು. ಈ ಬಾರಿ ಅದಕ್ಕಿಂತ ಹೆಚ್ಚಿನ ಜನ ಭಾಗವಹಿಸುವ ನಿರೀಕ್ಷೆ ಇದೆ. ಹಾವೇರಿ, ಗದಗ, ಹುಬ್ಬಳ್ಳಿಯಿಂದ ಸಹ ಆಗಮಿಸಲಿದ್ದಾರೆ. ಅಲ್ಲದೆ ಶಿವಮೊಗ್ಗದ ಪ್ರತಿಭೆಗಳು ಸಹ ಭಾಗವಹಿಸಲಿದ್ದಾರೆ. ಇಲ್ಲಿನ ಕೆಇಬಿ ನೌಕರ ನಾಗರಾಜ್‌ ಅವರ ಪುತ್ರ ಉತ್ತಮ ಕುಸ್ತಿಪಟುವಾಗಿದ್ದು, ಸಾಗರ ಮಾರಿಜಾತ್ರೆಯಲ್ಲೂ ಬಹುಮಾನ ಗೆದ್ದಿದ್ದಾರೆ. ಇಂತವರಿಗೆ ಇನ್ನಷ್ಟು ಪ್ರೋತ್ಸಾಹದ ಅಗತ್ಯವಿದೆ ಎಂದು ತಿಳಿಸಿದರು.

ಕುಸ್ತಿಗಾಗಿ ಬೆಂಗಳೂರಿನಿಂದ 1 ಕೆ.ಜಿ 50 ಗ್ರಾಂ ತೂಕದ ಬೆಳ್ಳಿಗದೆಯನ್ನು ತರಿಸಲಾಗಿದೆ. ಕುಸ್ತಿ ಪಂದ್ಯಾವಳಿಯಲ್ಲಿ 400 ಜನರನ್ನ ಕರೆಸಲಾಗಿದೆ. ಫೈನಲ್‌ ಪಂದ್ಯಾವಳಿಯಲ್ಲಿ ಗೆದ್ದ ಪಟುವಿಗೆ ಬೆಳ್ಳಿ ಗದೆ ಹಾಗೂ 25 ಸಾವಿರ ನಗದು ಬಹುಮಾನ ನೀಡಲಾಗುತ್ತಿದೆ ಎಂದರು.

ಫ್ಲೆಕ್ಸ್‌ಗೆ ತೊಂದರೆ ಇಲ್ಲ: ಜಾತ್ರೆ ಸಂಬಂಧ ಎಲ್ಲೆಡೆ ಕಟೌಟ್‌, ಫ್ಲೆಕ್ಸ್‌ ಹಾಕಲಾಗುತ್ತಿದೆ. ಪಾಲಿಕೆ ಸಹ ಇದಕ್ಕೆ ಅನುಮತಿ ಕೊಡಬೇಕೆಂದು ಮನವಿ ಮಾಡಲಾಗಿದೆ. ಹಾಗಾಗಿ ಯಾರಾದರೂ ಹಬ್ಬದ ಪ್ರಯುಕ್ತ ಫ್ಲೆಕ್ಸ್‌ ಹಾಕಬಹುದಾಗಿದೆ. ಇದು ಜಾತ್ರೆಗೆ ಮಾತ್ರ ಸೀಮಿತ ಎಂದರು.

Advertisement

ಜಾತ್ರೆ ವೇಳೆ ಕಸ ವಿಲೇವಾರಿ, ಭಕ್ತರಿಗೆ ಪಾನಕ, ಮಜ್ಜಿಗೆಯ ವ್ಯವಸ್ಥೆಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಕೆಲ ಸಂಘಟನೆಗಳು ಇದರ ಜವಾಬ್ದಾರಿ ವಹಿಸಿಕೊಂಡಿದ್ದಾರೆ ಎಂದರು. ನಂತರ ಮಾತನಾಡಿದ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ್‌, ಜಾತ್ರೆ ಮದುವೆಯ ರೀತಿಯಲ್ಲಿ ನಡೆಯಲಿದ್ದು ನಾಡಿಗ್‌ ಅವರ ಮನೆಗೆ ಹೋಗಿ ಮದುವೆಗೆ ಆಹ್ವಾನಿಸಲಾಗುವುದು. ದೇವಿಗೆ ಬಾಸಿಂಗ ಕಟ್ಟಿದ ನಂತರ ದೇವಿ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು. ವಿಶ್ವಕರ್ಮ ಸಮಾಜದಿಂದ ಗಂಗೆ ಪೂಜೆ ನಡೆಯಲಿದೆ. ಈ ಜಾತ್ರೆ ಕೇವಲ ಹಿಂದುಳಿದ ಸಮಾಜದ ಜಾತ್ರೆ ಎನಿಸಿಕೊಂಡಿತ್ತು. ಆದರೆ ಈಗ ಆ ರೀತಿ ಕರೆಯಲಾಗುತ್ತಿಲ್ಲ. ವಿವಿಧತೆಯಲ್ಲಿ ಏಕತೆಯನ್ನು ಸಾರುವ ರೀತಿಯಲ್ಲಿ ಎಲ್ಲ ಸಮಾಜ
ದವರಿಂದ ಅಮ್ಮನವರ ಪೂಜಾ ಕೈಂಕರ್ಯ ನಡೆಯಲಿದೆ ಎಂದರು.

ನಗರದ ಕಾರ್ಪೊರೇಟರ್‌ಗಳು ತಮ್ಮ ತಮ್ಮ ಬಡಾವಣೆಯ ದೀಪಾಲಂಕಾರ ತಾವೇ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಗದ್ದುಗೆಯಲ್ಲಿ ಯಾವ ಪ್ರಾಣಿ ಬಲಿಗೆ ಅವಕಾಶವಿಲ್ಲವೆಂದರು. ಗಾಂಧಿ ಬಜಾರ್‌ ಮತ್ತು ಗದ್ದುಗೆ ಬಳಿ ಹಿರಿಯರಿಗೆ ಹಾಗೂ ವಿಕಲಚೇತನರಿಗೆ ವಿಶೇಷ ದರ್ಶನವನ್ನ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 8 ರಿಂದ 12 ರ ವರೆಗೆ ವಿಕಲಚೇತನರಿಗೆ ಮತ್ತು ನಾಗರಿಕರಿಗೆ ವಿಶೇಷ ದರ್ಶನ ಐದು ದಿನ ನಡೆಯಲಿದೆ. ಪ್ರತಿ ನಿತ್ಯ ಬೆಳಗ್ಗೆ ತಿಂಡಿ, ಮದ್ಯಾಹ್ನ ಊಟ ಸಂಜೆ ಸ್ನಾಕ್ಸ್‌ ಹಾಗೂ ರಾತ್ರಿ ಊಟ ನಡೆಯಲಿದೆ ಎಂದರು.

ಗೋಷ್ಠಿಯಲ್ಲಿ ಕೆ.ಎನ್‌. ಶ್ರೀನಿವಾಸ್‌, ಎನ್‌. ಉಮಾಪತಿ, ಎಂ.ಕೆ. ಸುರೇಶ್‌ ಕುಮಾರ್‌, ಎಚ್‌.ವಿ. ತಿಮ್ಮಪ್ಪ, ಎಸ್‌. ಹನುಮಂತಪ್ಪ, ಡಿ.ಎಂ. ರಾಮಯ್ಯ, ಎನ್‌.ಸಿ. ಲೋಕೇಶ್‌, ಖೀಲ್ಲೆದಾರ್‌ ಸೀತಾರಾಮ್‌ ನಾಯಕ್‌, ಎಚ್‌.ಎ. ಸುನಿಲ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next