ಶಿವಮೊಗ್ಗ: ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸುವ ಯೋಜನೆ ವಿರೋ ಧಿಸಿ ಕರೆದಿದ್ದ ಶಿವಮೊಗ್ಗ ಜಿಲ್ಲಾ ಬಂದ್ ಯಶಸ್ವಿಯಾಗಿದೆ. ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳು ಬುಧವಾರ ಕರೆ ನೀಡಿದ್ದ ಬಂದ್‌ಗೆ ಇಡೀ ಜಿಲ್ಲೆಯಲ್ಲಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ವ್ಯಾಪಕ ಬೆಂಬಲ ದೊರೆತಿದ್ದು, ಶರಾವತಿ ಉಳಿಸಿ ಎಂಬ ಕೂಗು ಮಾರ್ದನಿಸಿದೆ.
ಶಿವಮೊಗ್ಗ ನಗರ, ಭದ್ರಾವತಿ ತಾಲೂಕು ಹೊರತುಪಡಿಸಿದರೆ ಸಾಗರ, ಸೊರಬ, ತೀರ್ಥಹಳ್ಳಿ, ಶಿಕಾರಿಪುರ, ಹೊಸನಗರ, ಸೊರಬ ತಾಲೂಕು ಹಾಗೂ ಉತ್ತರ ಕನ್ನಡದ ಹೊನ್ನಾವರ ಸಂಪೂರ್ಣ ಸ್ತಬ್ಧಗೊಂಡಿತ್ತು. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಬೆಳಗ್ಗೆಯಿಂದಲೇ ಎಲ್ಲ ಅಂಗಡಿ ಮುಂಗಟ್ಟು, ಹೋಟೆಲ್ ಚಿತ್ರಮಂದಿರಗಳು ಮುಚ್ಚಿದ್ದವು. ಕೆಲವೆಡೆ ಪೆಟ್ರೋಲ್ ಬಂಕ್‌ಗಳು ಕೂಡ ಮುಚ್ಚಿದ್ದವು. ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಸರಕಾರಿ ಬಸ್ ಹಾಗೂ ಅಲ್ಲಲ್ಲಿ ಕೆಲ ಆಟೋಗಳು ಸಂಚರಿಸಿದವು. ಶಾಲೆಗಳಿಗೆ ಬುಧವಾರ ಬೆಳಗ್ಗೆ ರಜೆ ಘೋಷಣೆ ಮಾಡಲಾಗಿತ್ತು.
ಭಾರೀ ಪ್ರತಿಭಟನೆ: ಯೋಜನೆ ವಿರೋಧಿಸಿ ಜಿಲ್ಲಾ ಕೇಂದ್ರ ಶಿವಮೊಗ್ಗ ಸೇರಿದಂತೆ ಎಲ್ಲ ತಾಲೂಕುಗಳಲ್ಲಿ ಪ್ರತಿಭಟನೆ ನಡೆಯಿತು. ಬೆಳಗ್ಗೆಯಿಂದಲೇ ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೇ ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸುಮಾರು 200ಕ್ಕೂ ಹೆಚ್ಚು ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಿದವು. ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಕಾರ್ಯಕರ್ತರು, ವಿದ್ಯಾರ್ಥಿಗಳು ಸೇರಿ ಸಾವಿರಾರು ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಹೊಸನಗರದಲ್ಲಿ ಪ್ರವಾಸಿಗರಿಗೆ, ಬೇರೆ ಜಿಲ್ಲೆಗೆ ತೆರಳುತ್ತಿದ್ದವರಿಗೆ ಪ್ರತಿಭಟನಾಕಾರರು ಅಡ್ಡಿ ಮಾಡಿದ ಘಟನೆ ಕೂಡ ನಡೆಯಿತು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಶರಾವತಿ ಉಳಿಸಿ ಹೋರಾಟ ಸಮಿತಿ ಎಲ್ಲ ತಾಲೂಕುಗಳಲ್ಲಿ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸಿತು. ಸಮಿತಿಯ ಮೂರು ಹಕ್ಕೊತ್ತಾಯಗಳು ಇಂತಿವೆ:
1 – ಶರಾವತಿ ನೀರನ್ನು ಬೆಂಗಳೂರಿಗೆ ಹರಿಸುವ ಪ್ರಸ್ತಾಪವನ್ನು ಬೇಷರತ್ತಾಗಿ ಕೈ ಬಿಡಬೇಕು ಮತ್ತು ತ್ಯಾಗರಾಜ್ ವರದಿಯನ್ನು ಕೂಡಲೇ ಅ ಧಿಕೃತವಾಗಿ ತಿರಸ್ಕರಿಸಬೇಕು.
2 – ಶರಾವತಿ ಕಣಿವೆಯ ಆಸುಪಾಸಿನ ವಿವಿಧ ಯೋಜನೆಗಳ ಸಂತ್ರಸ್ತರು ಸೇರಿದಂತೆ ಶಿವಮೊಗ್ಗ ಹಾಗೂ ನೆರೆಯ ಜಿಲ್ಲೆಗಳ ಕುಡಿಯುವ ನೀರು ಮತ್ತು ಕೃಷಿ ಭೂಮಿಗೆ ನೀರು ಒದಗಿಸಲು ಇಲ್ಲಿನ ಜಲಾಶಯಗಳ ಬಳಕೆಗೆ ಆದ್ಯತೆ ನೀಡಬೇಕು. ಈ ಕುರಿತು ಸರಕಾರ ಕೂಡಲೇ ಡಿಪಿಆರ್ ತಯಾರಿಸಲು ಆದೇಶ ನೀಡಬೇಕು.
3 – ಬೆಂಗಳೂರಿನ ಬೆಳವಣಿಗೆಗೆ ಕಡಿವಾಣ ಹಾಕುವ ದಿಸೆಯಲ್ಲಿ ಅಲ್ಲಿನ ಕೈಗಾರಿಕೆಗಳು ಆಡಳಿತ ಕಚೇರಿಗಳು ಮುಂತಾದವುಗಳನ್ನು ನೀರಿರುವಲ್ಲಿ ವರ್ಗಾಯಿಸುವುದು ಸೂಕ್ತ ಪರಿಹಾರವಾಗುತ್ತದೆ. ಆ ಮೂಲಕ ಗ್ರಾಮೀಣ ಯುವಕರಿಗೆ ಉದ್ಯೋಗ ದೊರೆಯುತ್ತದೆ.