ಶಿವಮೊಗ್ಗ: ಕನಕದಾಸರ ಸಾಹಿತ್ಯ ಮತ್ತಷ್ಟು ಶ್ರೀಮಂತಗೊಳಿಸುವ ಹಾಗೂ ಮುಂದಿನ ಪೀಳಿಗೆಯು ಈ ಸಾಹಿತ್ಯದೆಡೆಗೆ ಅಧ್ಯಯನಶೀಲರಾಗುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ವಿಶ್ವವಿದ್ಯಾಲಯಗಳಲ್ಲಿ ಕನಕದಾಸರ ಸಾಹಿತ್ಯ ಅಧ್ಯಯನ ಪೀಠ ಸ್ಥಾಪಿಸಬೇಕೆಂದು ವಕೀಲ ಮತ್ತು ವಾಗ್ಮಿ ಎಂ.ಆರ್. ಸತ್ಯನಾರಾಯಣ್ ಮನವಿ ಮಾಡಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಶ್ರೀಗಂಧ ಸಂಸ್ಥೆ ಹಮ್ಮಿಕೊಂಡಿದ್ದ ಕನಕದಾಸರ ಕೃತಿಗಳ ಬಿಡುಗಡೆ ಮತ್ತು ಗಾಯನ – ವ್ಯಾಖ್ಯಾನ ಕಾರ್ಯಕ್ರಮ “ಕೇಶವ ಸಂಪದ’ದಲ್ಲಿ ಮಾತನಾಡಿದ ಅವರು, ಹಲವು ಶತಮಾನಗಳ ಬಳಿಕವೂ ಕನಕದಾಸರು ನಮ್ಮೆಲ್ಲರಲ್ಲಿ ಉಳಿದಿದ್ದಾರೆ ಎಂದರೆ ಅದಕ್ಕೆ ಅವರ ಗಟ್ಟಿ ಚಿಂತನೆಯ ಸಾಹಿತ್ಯ ಕಾರಣ. ಕನಕದಾಸರ ಕೃತಿಗಳನ್ನು ಪುಸ್ತಕ ರೂಪದಲ್ಲಿ ತರಬೇಕು ಎಂದರು.
ಕೃತಿಗಳನ್ನು ಬಿಡುಗಡೆಗೊಳಿಸಿದ ಕನಕ ಗುರುಪೀಠ ಕಾಗಿನೆಲೆ ಮಹಾ ಸಂಸ್ಥಾನದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ, ಮಸ್ತಕ ಚನ್ನಾಗಿರುವವರು ಪುಸ್ತಕ ಬರೆಯಲು ಸಾಧ್ಯ. ಶ್ರೀಕೃಷ್ಣನ ಆರಾಧಕ, ಧರ್ಮ, ಸಮಾಜ ಮತ್ತು ಸಂಸ್ಕೃತಿಯ ಹಿತಚಿಂತಕನಾದ ಕನಕದಾಸ ಒಬ್ಬ ಭಕ್ತಸಂತ. ಹರಿಹರರನ್ನು ಸಮಾನವಾಗಿ ಕಂಡ ಅವರು “ವಿಷ್ಣುವಿನ ಭಕ್ತನಾದ ನಾನು ಶಿವನ ಪೂಜೆ ಮಾಡದಿದ್ದರೆ ಆದಿಕೇಶವನಾಣೆ’ ಎಂದಿದ್ದಾರೆ ಎಂದು ಕಾವ್ಯದ ಸಾಲುಗಳನ್ನು ಹೇಳಿದರು. ಶ್ರೀಗಂಧ ಸಂಸ್ಥೆ ಅಧ್ಯಕ್ಷರೂ ಆದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು.
ಕಾಗಿನೆಲೆ ಅಭಿವೃದ್ಧಿ ಪ್ರಾ ಧಿಕಾರ ಪ್ರಕಟಿತ ಕನಕದಾಸರ “ಶ್ರೀ ಹರಿಭಕ್ತಸಾರ’ದ ವ್ಯಾಖ್ಯಾನದ ಸಂಪುಟ, ಭಾರತೀಯ ಸಂವಿಧಾನ ಹಾಗೂ ವಿಶ್ವ ಮಾನವ ಹಕ್ಕುಗಳ ಘೋಷಣೆಗಳಲ್ಲಿ ಕನಕದಾಸರ ಚಿಂತನೆಯ ಹೊನಲು, ಮೋಹನ ತರಂಗಿಣಿ (ವ್ಯಾಖ್ಯಾನ – ವಿಶ್ಲೇಷಣೆ) 3ನೇ ಸಂಪುಟಗಳನ್ನು ಬಿಡುಗಡೆಗೊಳಿಸಲಾಯಿತು. ಸಮಾರಂಭದ ಬಳಿಕ ಕನಕದಾಸರ ಗೀತೆಗಳ ವಿಶೇಷ ಗಾಯನ – ವ್ಯಾಖ್ಯಾನ ನಡೆಯಿತು.