Advertisement

ಪಾಳು ಬಿದ್ದ ಹೈಟೆಕ್‌ ಶೌಚಾಲಯ

01:19 PM Feb 10, 2020 | Naveen |

ಶಿವಮೊಗ್ಗ: ನಗರದ ಸ್ವಚ್ಛತೆ ದೃಷ್ಟಿಯಿಂದ  ಮಹಾನಗರ ಪಾಲಿಕೆಯು ಲಕ್ಷಾಂತರ ರೂ. ವೆಚ್ಚದಲ್ಲಿ ಕಟ್ಟಿದ ಬಹುತೇಕ ಶೌಚಾಲಯಗಳು ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ.

Advertisement

ಸ್ವಚ್ಛ ಭಾರತ ನಿರ್ಮಾಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಾನಾ ಹೆಸರುಗಳಲ್ಲಿ ನೂರಾರು ಯೋಜನೆಗಳನ್ನು ಘೋಷಿಸಿವೆ. ಆದರೂ, ನಗರ ಪ್ರದೇಶಗಳಲ್ಲೇ ಸ್ವಚ್ಛತೆ ಮರೀಚಿಕೆಯಾಗಿದೆ. ಅನುಪಯುಕ್ತ ಶೌಚಾಲಯಗಳಿಂದಾಗಿ ನಗರದಲ್ಲಿ ಬಯಲು ಬಹಿರ್ದೆಸೆ ಪ್ರವೃತ್ತಿ ಮುಂದುವರಿದಿದೆ.

ಶಿವಮೊಗ್ಗವನ್ನು ಬಯಲು ಶೌಚಾಲಯ ಮುಕ್ತ ನಗರವನ್ನಾಗಿ ಮಾಡುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಾಲೇ ಬರುತ್ತಿದ್ದಾರೆ. ಆದರೆ, ಅವರ ಘೋಷಣೆಗಳು ಜಾರಿಗೆ ಬಾರದೆ ಒದ್ದಾಡುತ್ತಿವೆ. ಇನ್ನೊಂದು ಕಡೆ ಮಹಾನಗರ ಪಾಲಿಕೆಯಿಂದ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿದ್ದರೂ ಅವುಗಳ ನಿರ್ವಹಣೆಗೆ ಹೆಣಗಾಡುತ್ತಿದೆ. ಹೀಗಾಗಿ ನಗರದಲ್ಲಿರುವ ಬಹುತೇಕ ಸಾರ್ವಜನಿಕ ಶೌಚಾಲಯಗಳು ಇದ್ದು ಇಲ್ಲದಂತಾಗಿವೆ.

ಉಪಯೋಗಕ್ಕೆ ಅನುಪಯುಕ್ತ: ನಗರದಲ್ಲಿ ಒಟ್ಟು 20 ಸಾರ್ವಜನಿಕ ಶೌಚಾಲಯಗಳು, 10 ಸಮುದಾಯ ಶೌಚಾಲಯಗಳಿವೆ. ಇವುಗಳಲ್ಲಿ ಬುಹುತೇಕ ಶೌಚಾಲಯಗಳು ನಿರ್ವಹಣೆ ಸಮಸ್ಯೆಯಿಂದ ಬಳಲುತ್ತಿದ್ದು ಉಪಯೋಗಕ್ಕೆ ಅನುಪಯುಕ್ತವಾಗಿವೆ. ಆ ಪೈಕಿ ಕೆಲವು ಕಾರ್ಯ ನಿರ್ವಹಿಸುತ್ತಿಲ್ಲ. ಒಟ್ಟೆ ಮಾರುಕಟ್ಟೆ, ಲಷ್ಕರ್‌ ಮೊಹಲ್ಲಾದ ಮೀನು ಮಾರುಕಟ್ಟೆ, ಗಾಂ ಧಿ ಬಜಾರ್‌ನ ಸ್ವಾಗತ ಕ್ಯಾಂಟೀನ್‌, ಹೂವಿನ ಮಾರುಕಟ್ಟೆ ಪಕ್ಕದಲ್ಲಿರುವ ಶೌಚಾಲಯ, ಗಾಂಧಿ ಬಜಾರ್‌ ತರಕಾರಿ ಮಾರುಕಟ್ಟೆ, ಕೋಟೆ ರಸ್ತೆಯ ಭೀಮೇಶ್ವರ ದೇವಸ್ಥಾನ ಎದುರು ಭಾಗದಲ್ಲಿರುವ ಶೌಚಾಲಯ, ನೆಹರೂ ರಸ್ತೆ ಜೆ.ಎಚ್‌. ಪಟೇಲ್‌ ಕಾಂಪ್ಲೆಕ್ಸ್‌ ಬಳಿಯ ಶೌಚಾಲಯ, ಜಯನಗರ 1ನೇ ಕ್ರಾಸ್‌ ಶೌಚಾಲಯ, ಮೆಗ್ಗಾನ್‌ ಆಸ್ಪತ್ರೆ ಕಾಂಪೌಂಡ್‌ನ‌ಲ್ಲಿರುವ ಶೌಚಾಲಯ, ಜೈಲ್‌ ಕಾಂಪೌಂಡ್‌ ಪಕ್ಕದಲ್ಲಿರುವ ಶೌಚಾಲಯ, ಖಾಸಗಿ ಬಸ್‌ ನಿಲ್ದಾಣ ಹಿಂಭಾಗದಲ್ಲಿರುವ ಶೌಚಾಲಯ, ಉಷಾ ನರ್ಸಿಂಗ್‌ ಹೋಂ ಮುಂಭಾಗದ ಕನ್ಸರ್ವೆನ್ಸಿ ರಸ್ತೆಯಲ್ಲಿರುವ ಶೌಚಾಲಯ, ಗೋಪಾಳ ಬಸ್‌ ನಿಲ್ದಾಣದಲ್ಲಿರುವ ಶೌಚಾಲಯ, ಗೋಪಿ ವೃತ್ತ ಬಳಿ ದೇವರಾಜ್‌ ಅರಸ್‌ ವಾಣಿಜ್ಯ ಸಂಕೀರ್ಣದಲ್ಲಿರುವ ಇ-ಟಾಯ್ಲೆಟ್‌, ದಿರ್ಗಿಗುಡಿ ಮಾಕ್ಸ್‌ ಆಸ್ಪತ್ರೆ ಎದುರು ಕನ್ಸರ್ವೆನ್ಸಿಯಲ್ಲಿರುವ ಶೌಚಾಲಯ, ನೆಹರು ಕ್ರೀಡಾಂಗಣದ ಪುರುಷರ ಹಾಗೂ ಮಹಿಳಾ ಶೌಚಾಲಯಗಳು ನಿರ್ಹಹಣೆ ಸಮಸ್ಯೆಯಿಂದ ಇದ್ದೂ ಇಲ್ಲದಂತಾಗಿವೆ.

ಇವುಗಳಲ್ಲಿ ಕೆಲವು ಶೌಚಾಲಯಗಳಲ್ಲಿ ನೀರಿನ ಸಮಸ್ಯೆ ಇದ್ದರೆ, ಇನ್ನು ಹಲವೆಡೆ ನೀರಿದ್ದರೂ ಬಕೆಟ್‌ಗಳೇ ಮುರಿದು ಹೋಗಿವೆ. ಮೂತ್ರ ವಿಸರ್ಜನೆಗೆ ಹಾಕಿದ್ದ ಬೇಸಿನ್‌ಗಳೂ ಕಳಚಿ ಬಿದ್ದಿವೆ. ದುರ್ನಾತದ ನಡುವೆಯೂ ಹೇಗೋ ಮೂಗು ಮುಚ್ಚಿಕೊಂಡು ಒಳಗೆ ಹೋದರೆ, ಗೋಡೆಗಳ ಮೇಲೆ ಬರೆದಂತಹ ಆಕ್ಷೇಪಾರ್ಹ ಬರಹಗಳು ಎಂತಹವರನ್ನೂ ಮುಜುಗರಕ್ಕೀಡು ಮಾಡುತ್ತವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next