ಶಿವಮೊಗ್ಗ: ಇದು ಕೊನೆಯ ವಾರ್ನಿಂಗ್. ನಾಳೆಯಿಂದ ಮತ್ತೇನಾದರೂ ವಾಕಿಂಗ್, ಜಾಗಿಂಗ್, ಸೈಕ್ಲಿಂಗ್ ಹೆಸರಿನಲ್ಲಿ ಬೀದಿ ಸುತ್ತಲು ಬಂದರೆ ಬೇರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಲಾಕ್‌ಡೌನ್ ಕ್ರಮದ ಬಗ್ಗೆ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ. ಶಾಂತರಾಜ್ ಗುರುವಾರ ಖಡಕ್ ಸೂಚನೆ ನೀಡಿದರು.
ಗುರುವಾರ ಬೆಳಗ್ಗೆ ನೆಹರೂ ಕ್ರೀಡಾಂಗಣದ ಬಳಿ ವಾಕಿಂಗ್‌ಗೆ ಬಂದಿದ್ದ ಎಲ್ಲರನ್ನೂ ಒಂದೆಡೆ ಸೇರಿಸಿ ಅವರಿಗೆ ಅತ್ಯಂತ ಗೌರವದಿಂದಲೇ ಚಹಾ, ಬಿಸ್ಕೆಟ್
ಹಾಗೂ ಕುಡಿಯುವ ನೀರನ್ನು ನೀಡಿ ಇದು ಕಟ್ಟ ಕಡೆಯ ಆದೇಶ. ನಿಮ್ಮೆಲ್ಲರ ಹೆಸರು, ವಿಳಾಸ ಹಾಗೂ ಮೊಬೈಲ್ ನಂಬರ್ ಸಂಗ್ರಹಿಸಲಾಗುತ್ತದೆ ಎಂದರು. ಶಿವಮೊಗ್ಗ ನೆಹರೂ ಒಳ ಕ್ರೀಡಾಂಗಣದ ಬಳಿ ಸಾಮಾಜಿಕ ಅಂತರ ಕಾಯ್ದುಕೊಂಡು ಕುಳಿತುಕೊಳ್ಳಲು ವ್ಯವಸ್ಥೆ ಮಾಡಿದ್ದು, ಬೆಳಗಿನ ವಾಕಿಂಗ್ ಹೆಸರಿನಲ್ಲಿ ಬಂದಿದ್ದವರನೆಲ್ಲಾ ಒಂದೆಡೆ ಸೇರಿಸಿ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಅವರೊಂದಿಗೆ ಸಭೆ ನಡೆಸಿದ ಜಿಲ್ಲಾ ರಕ್ಷಣಾಧಿಕಾರಿಗಳು ಲಾಕ್ ಡೌನ್ ವ್ಯವಸ್ಥೆಯ ಅರ್ಥವನ್ನು ತಿಳಿದುಕೊಳ್ಳಿ. ಜೀವ ಇದ್ದರೆ ಒಳ್ಳೆಯದು. ಬೀದಿ ಸುತ್ತಿ ಮನೆ ಮನೆಗೆ ಕೊರೊನಾ ತೆಗೆದುಕೊಂಡು ಹೋಗಬೇಡಿ ಎಂದರು. ಇದೇ ಸಂದರ್ಭದಲ್ಲಿ ಇವರಿಗೆಲ್ಲ ಥರ್ಮಲ್ ಟೆಸ್ಟಿಂಗ್ ಮಾಡಿ ತಪಾಸಣೆ ನಡೆಸಲಾಗುವುದು. ಇದು ಕಡೆಯ ಸೂಚನೆ ಎಂದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಇದು ಕೊನೆಯ ಎಚ್ಚರಿಕೆ. ಅಂತರ್ಜಾಲದಲ್ಲಿ ಮಾಹಿತಿ ಪಡೆದುಕೊಳ್ಳಿ. ಕೋವಿಡ್ ಬಂದಿರುವ ಸ್ಥಳದಲ್ಲಿ ನಿರ್ಬಂಧ ಹೇಗಿದೆ ನೋಡಿ. ಇದು ನಮ್ಮ ಜಿಲ್ಲೆಗೆ ಬರಬಾರದು ಎಂದು ನಾವು ಹಗಲಿರುಳು ಶ್ರಮಿಸುತ್ತಿದ್ದೇವೆ. ನೀವು ಮನೆಯಲ್ಲಿದ್ದರೆ ಸಾಕು ಎಂದರು. ಸಾಮಾಜಿಕ ಅಂತರ ಕಾಪಾಡಿಕೊಂಡು ವಾಕ್ ಮಾಡಲು ಅವಕಾಶ ಮಾಡಿಕೊಟ್ಟರೆ ನೀವು ಇಷ್ಟೊಂದು ಜನ ವಾಕ್ ಮಾಡುತ್ತಿದ್ದೀರಿ. ನಮಗೆ ಬೇರೆ ಕೆಲಸಗಳು ಇವೆ. ನಿಮಗೆ ಎಷ್ಟು ಅಂತ ಎಚ್ಚರಿಕೆ ನೀಡೋದು. ಇದೇ ಕೊನೆ ಎಚ್ಚರಿಕೆ ಎಂದು ಡಿಸಿ ಹೇಳಿದರು. ಮೊದಲಿಗೆ ಇವರಿಗೆಲ್ಲಾ ಟೀ, ಬಿಸ್ಕತ್ ನೀಡಲಾಯಿತು. ಇವರದೆಲ್ಲಾ ಹೆಸರು ವಿಳಾಸ ಹಾಗೂ ಫೋನ್ ನಂಬರ್ ಬರೆದುಕೊಂಡು ಬಿಟ್ಟು ಕಳುಹಿಸಲಾಯಿತು.