Advertisement

ಗುಡಿ ಕೈಗಾರಿಕೆಗಳ ಉಳಿವಿಗೆ ಕ್ರಮ ಅಗತ್ಯ

04:16 PM Nov 04, 2019 | Naveen |

ಶಿವಮೊಗ್ಗ: ಅವನತಿಯ ಅಂಚಿನಲ್ಲಿರುವ ಗುಡಿ ಕೈಗಾರಿಕೆಗಳಿಗೆ ಸಾಲ ಸೌಲಭ್ಯ ನೀಡುವ ಬಗ್ಗೆ ಸರಕಾರ ಯೋಚಿಸಬೇಕಾಗುತ್ತದೆ. ಈಗ ನಡೆಸಲಾಗುತ್ತಿರುವ ಸತ್ಯಾಗ್ರಹವು ಯಾವುದೇ ರಾಜಕೀಯ ಪಕ್ಷ ಹಾಗೂ ವ್ಯಕ್ತಿಯ ವಿರುದ್ಧ ಅಲ್ಲ. ಇದು ಜನಪರವಾಗಿದ್ದು, ಎಲ್ಲರೂ ಬೆಂಬಲಿಸಬೇಕು ಎಂದು ಚಿಂತಕ ಪ್ರಸನ್ನ ಒತ್ತಾಯಿಸಿದರು.

Advertisement

ನಗರದ ಕಟೀಲು ಪೈ ಮೆಮೋರಿಯಲ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಗ್ರಾಮ ಸೇವಾ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ‘ಪವಿತ್ರ ಆರ್ಥಿಕತೆ ಸತ್ಯಾಗ್ರಹ ಮುಂದುವರಿಕೆಗಾಗಿ ಶಿವಮೊಗ್ಗದಲ್ಲಿ ಸಮಾವೇಶ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗುಡಿ ಕೈಗಾರಿಕೆಗಳು, ಗ್ರಾಮೀಣ ಪ್ರದೇಶದಲ್ಲಿರುವ ಉದ್ದಿಮೆಗಳಿಗೆ ತೆರಿಗೆ ವಿನಾಯಿತಿ ನೀಡಬೇಕು. ಸುವ್ಯವಸ್ಥಿತ ಅರ್ಥವ್ಯವಸ್ಥೆಯಲ್ಲಿ ರೈತರ ಬದುಕು ಹಸನಾಗಿಸುವ ಬಗ್ಗೆಯೂ ಯೋಚಿಸಬೇಕಿದೆ. ರೈತರು ಬೆಳೆಯುವ ಉತ್ಪನ್ನಗಳು ಮಾರುಕಟ್ಟೆಗೆ ಹೋಗುವ ಮುನ್ನ ಅವರಿಗೆ ಬೇಕಾದ ಅವಶ್ಯಕತೆಗಳು ಸಿಗಬೇಕು.

ಆದರೆ, ನಮ್ಮಲ್ಲಿ ಬೆಳೆದ ರೈತರೇ ಕಷ್ಟ ಪಡುವ ಸ್ಥಿತಿ ಇದೆ. ಜಾತಿ ವ್ಯವಸ್ಥೆ, ಅರ್ಥ ವ್ಯವಸ್ಥೆಯಲ್ಲಿ ಪ್ರತ್ಯೇಕತೆ ಸರಿಯಲ್ಲ. ಎಲ್ಲ ವರ್ಗಗಳನ್ನು ಪರಿಗಣಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.

ನಿರುದ್ಯೋಗ ಸಾಮಾಜಿಕ ಸಮಸ್ಯೆಯಾಗಿ ಮಾರ್ಪಾಟು ಆಗಿದೆ. ಕೇವಲ ಜಿಡಿಪಿ ಅಂಕಿ ಅಂಶದ ಆಧಾರದ ಮೇಲೆ ದೇಶದ ಬಲಿಷ್ಠತೆಯನ್ನು ಅಳತೆ ಮಾಡಲಾಗದು.

Advertisement

ಜಿಡಿಪಿ ಬಲಿಷ್ಠವಾಗಿದ್ದರೂ ದೇಶದಲ್ಲಿ ಬಡತನ, ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆ ಇದೆ ಎಂದು ಪ್ರತಿಪಾದಿಸಿದರು. ಯೋಜನೆಗಳನ್ನು ರೂಪಿಸುವ ಮುನ್ನ ವೈಜ್ಞಾನಿಕ ಅಳತೆಗೋಲು ಅನುಸರಿಸಬೇಕು ಎಂದರು.
ಬಜೆಟ್‌ ಕೇವಲ ನಗರ ಹಾಗೂ ಉದ್ಯಮ ಕೇಂದ್ರಿತವಾಗಿ ಪರಿವರ್ತನೆಯಾಗಿವೆ. ಗ್ರಾಮೀಣ ಪ್ರದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಹೆಚ್ಚು ಒತ್ತು ನೀಡಲಾಗುತ್ತಿಲ್ಲ ಎಂದು ರೈತ ಮುಖಂಡ ಕೆ.ಟಿ. ಗಂಗಾಧರ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಸರಕಾರಗಳು ಜಾರಿಗೆ ತರಲಾಗುತ್ತಿರುವ ಯೋಜನೆಗಳು ಗ್ರಾಮೀಣ ಸಮಸ್ಯೆಗಳಿಗೆ ಪೂರಕವಾಗಿ ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತಿವೆ ಎನ್ನುವುದನ್ನು ಅಂಕಿ- ಅಂಶಗಳೇ ಬಹಿರಂಗ ಪಡಿಸುತ್ತವೆ. ಯೋಜನಾ ಆಯೋಗದಲ್ಲೂ ಕೆಲವು ತಪ್ಪುಗಳಿವೆ. ಅದನ್ನು ಅರ್ಥ ಮಾಡಿಕೊಳ್ಳುವಲ್ಲಿ ಸರಕಾರಗಳು ವಿಫಲವಾಗಿವೆ ಎಂದು ಹೇಳಿದರು.

80 ದಶಕದಲ್ಲಿ ರೈತ ಚಳವಳಿ ಆರಂಭವಾಗಿದ್ದು, ಹೋರಾಟಗಳೊಂದಿಗೆ ಮೂರು ಅಂಶಗಳಿಗೆ ಒತ್ತು ನೀಡಲಾಗಿದೆ. ರೈತರು ಎದುರಿಸುತ್ತಿರುವ ಸಮಸ್ಯೆಗಳು ಅದಕ್ಕೆ ಸಿಗಬೇಕಾದ ತಾತ್ಕಾಲಿಕ ಪರಿಹಾರ ಮತ್ತು ಶಾಶ್ವತ ಪರಿಹಾರಗಳೇನು? ಇವುಗಳ ಬಗ್ಗೆ ಸದಾ ಚಿಂತಿಸಲಾಗಿದೆ ಎಂದು ತಿಳಿಸಿದರು.

ಆರ್ಥಿಕ ವಿಂಗಡಣೆಯಲ್ಲೂ ವ್ಯತ್ಯಾಸಗಳಿವೆ. ಹಳ್ಳಿಗಳಲ್ಲಿ ನಿರಂತರ ಶ್ರಮಿಸುತ್ತಿದ್ದರೂ ಏಕೆ ಬಡತನ ನಿವಾರಣೆಯಾಗಿಲ್ಲ? ಈ ಎಲ್ಲ ವಿಷಯಗಳ ಬಗ್ಗೆ ಅರಿತುಕೊಳ್ಳಲು ಸತ್ಯಾಗ್ರಹ ರೂಪದ ಚಳವಳಿಯು ಪೂರಕವಾಗಲಿದೆ ಎಂದರು.

ರೈತ ನಾಯಕ ಕಡಿದಾಳು ಶಾಮಣ್ಣ, ಪರಿಸರ ತಜ್ಞ ಸಿ. ಯತಿರಾಜ್‌ ಇತರರಿದ್ದರು. ಪ್ರಕಾಶ್‌, ಕೇಶವಮೂರ್ತಿ ಚರ್ಚೆಯಲ್ಲಿ ಪಾಲ್ಗೊಂಡರು. ಲೇಖಕ ರಾಜೇಂದ್ರ ಚನ್ನಿ ಸ್ವಾಗತಿಸಿದರು. ಗ್ರಾಮ ಸೇವಾ ಸಂಘದ ಸಂಚಾಲಕ ಲಕ್ಷ್ಮೀ ನಾರಾಯಣರಾವ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next