Advertisement

ಶಿವಮೊಗ್ಗ: “ಸಂಸ್ಕೃತಿ ರಕ್ಷಣೆಯಲ್ಲಿ ಕಲಾವಿದರ ಸಾಧನೆ ಅಪಾರ’

03:42 PM Apr 10, 2024 | Nagendra Trasi |

■ ಉದಯವಾಣಿ ಸಮಾಚಾರ
ಶಿವಮೊಗ್ಗ: ಹಿಂದುತ್ವ, ಸಂಸ್ಕಾರ, ಸಂಸ್ಕೃತಿಯನ್ನು ಉಳಿಸುವಲ್ಲಿ ಭಾರತೀಯ ಕಲಾವಿದರ ಸಾಧನೆ ಅವಿರತವಾಗಿದೆ ಎಂದು ಹಿರಿಯ ಯಕ್ಷಗಾನ ಕಲಾವಿದ, ರಾಜ್ಯೋತ್ಸವ ಪುರಸ್ಕೃತ ಎಂ.ಕೆ. ರಮೇಶ್‌ ಆಚಾರ್ಯ ಬಣ್ಣಿಸಿದರು.

Advertisement

ಕುವೆಂಪು ರಂಗಮಂದಿರದಲ್ಲಿ ಶ್ರೀ ವಿಶ್ವಕರ್ಮ ಯಕ್ಷಾಭಿಮಾನಿ ವೇದಿಕೆಯಿಂದ ಭಾನುವಾರ ಶಿಲ್ಪಿಗಳಾದ ಅರುಣ್‌ ಯೋಗಿರಾಜ್‌ ಮತ್ತು ರಾಜ ಗೋಪಾಲ್‌ ಆಚಾರ್ಯ ಅವರಿಗೆ ಹಮ್ಮಿಕೊಂಡಿದ್ದ ಗೌರವ ಸನ್ಮಾನ ಹಾಗೂ ಭಾವಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಿರಂತರ ಸಾಧನೆಯಿಂದ ವ್ಯಕ್ತಿಗಳಿಗೆ ಸಿದ್ಧಿ ದೊರಯಲಿದೆ. ಸಿದ್ಧಿಯಿಂದ ಶ್ರೇಷ್ಠರಾಗುತ್ತಾರೆ. ಅದಕ್ಕೆ ಶಿಲ್ಪ ಕಲಾವಿದ ಅರುಣ್‌ ಯೋಗಿರಾಜ್‌ ಮತ್ತು ರಾಜಗೋಪಾಲ್‌ ಆಚಾರ್ಯ ಸಾಕ್ಷಿ ಎಂದು ತಿಳಿಸಿದರು.

ವಿದ್ಯೆಗೆ ವಿನಯವೇ ಭೂಷಣವಾಗಿದೆ. ವಿದ್ಯೆ ಜತೆಗೆ ಅಹಂಕಾರ ಬೆರೆತರೆ ಬೆಳವಣಿಗೆ ಅಸಾಧ್ಯ. ಜೀವನದಲ್ಲಿ ಯಾವಾಗಲೂ ಅವಕಾಶಗಳು ಸಿಗುವುದಿಲ್ಲ. ಒಮ್ಮೆ ಸಿಕ್ಕಾಗ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅದು ಸಾಧ್ಯವಾದರೆ ಜೀವನದಲ್ಲಿ ಉತ್ತುಂಗಕ್ಕೆ ಹೋಗಬಹುದು. ಶಿಲ್ಪಶಾಸ್ತ್ರ ಅಧ್ಯಯನ ಮಾಡಿ ಅಯೋಧ್ಯೆಯಲ್ಲಿ ರಾಮನ ವಿಗ್ರಹ ಕೆತ್ತುವ ಮೂಲಕ ಅಂತಹ
ಉತ್ತುಂಗಕ್ಕೆ ಅರುಣ್‌ ಯೋಗಿರಾಜ್‌ ಹೋಗಿದ್ದಾರೆ ಎಂದು ಶ್ಲಾಘಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಷಡಾಕ್ಷರಿ ಮಾತನಾಡಿ, ಇಡೀ ವಿಶ್ವಕ್ಕೆ ಭಾರತೀಯ ಕಲೆಯನ್ನು ಶಿಲ್ಪಿ ಅರುಣ್‌
ಯೋಗಿರಾಜ್‌ ಪರಿಚಯಿಸಿದ್ದಾರೆ. ಅಯೋಧ್ಯೆ ರಾಮಮಂದಿರ ವಿಚಾರ ದಶಕಗಳ ಕನಸು ಆಗಿದ್ದು, ಅಂತಹ ಇತಿಹಾಸವಿರುವ
ಮಂದಿರದಲ್ಲಿ ಅರುಣ್‌ ಯೋಗಿರಾಜ್‌ ಕೆತ್ತನೆಯ ರಾಮನ ವಿಗ್ರಹ ಪ್ರತಿಷ್ಠಾಪನೆ ಆಗಿರುವುದು ಕರ್ನಾಟಕದ ಪಾಲಿಗೆ ಹೆಮ್ಮೆಯ
ವಿಷಯ ಎಂದರು.

ಕೆಲವರ ಹೆಸರು ಇತಿಹಾಸದ ಪುಟದಲ್ಲಿ ಗತಿಸಿ ಹೋಗುತ್ತವೆ. ಆದರೆ ಅರುಣ್‌ ಹೆಸರು ಮುಂದಿನ ಇತಿಹಾಸದ ಪುಟದಲ್ಲಿ ಚಿರಸ್ಥಾಯಿ ಆಗಿರಲಿದೆ. ತನ್ನ ಶಕ್ತಿ ಸಾಮರ್ಥ್ಯದ ಮೂಲಕ ಇಡೀ ವಿಶ್ವಕ್ಕೆ ಸಾಬೀತುಪಡಿಸಿದ್ದು ವಿಶೇಷ. ಶಿಲ್ಪಿ ರಾಜಗೋಪಾಲ್‌ ಆಚಾರ್ಯ ಅವರು ಅಯೋಧ್ಯೆಯಲ್ಲಿ ಕಲ್ಲಿನ ರಥ ಕೆತ್ತನೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು.

Advertisement

ಹಿರಿಯ ಪತ್ರಕರ್ತ ಚಂದ್ರಕಾಂತ್‌, ವಕೀಲ ಮಧುಸೂದನ್‌, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್‌.ಗೋಪಿನಾಥ್‌, ಪತ್ರಕರ್ತ ಸೂರ್ಯನಾರಾಯಣ್‌, ಉದ್ಯಮಿಗಳಾದ ನಿವೇದನ್‌ ನೆಂಪೆ, ಹರ್ಷ ಕಾಮತ್‌, ಸುರೇಶ್‌ ಬಾಳೆಗುಂಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್‌. ಉಮೇಶ್‌, ಶಶಿ ಎಸ್‌. ಮಂಗಳಾಗಾರ್‌
ಇದ್ದರು.

ಮನಸೂರೆಗೊಂಡ ಭಾವಯಾನ ಕಾರ್ಯಕ್ರಮ 
ವೇದಿಕೆ ಕಾರ್ಯಕ್ರಮದ ಬಳಿಕ ಡ್ರೆಸ್‌ಲೈನ್‌ ಪ್ರಾಯೋಜಕತ್ವದಲ್ಲಿ ಭಾವಯಾನ ಒಂದು ಸವಿಗಾನದ ಸಂಜೆ ಕಾರ್ಯಕ್ರಮ ಪ್ರೇಕ್ಷಕರ ಮನಸೂರೆಗೊಂಡಿತು. ಬೆಂಗಳೂರಿನ ರಾಮಚಂದ್ರ ಹಡಪದ್‌, ಆರ್‌.ಕೆ. ಸ್ಪರ್ಶ, ಶರಣೀ ಪಾಟೀಲ್‌ ಅವರ ಗಾಯನಕ್ಕೆ ಜನರು ಮನಸೋತರು. ರಾಘವೇಂದ್ರ ಕಾಂಚನ್‌ ಅಚ್ಚುಕಟ್ಟಾಗಿ ನಿರೂಪಣೆ ಮಾಡಿದರು. ದೀಪಕ್‌ ಜಯಶೀಲನ್‌, ರಂಜನ್‌ ಬೇವುರಾ, ಶಿವಲಿಂಗ ರಾಜಾಪುರ್‌, ಜಲೀಲ್‌ ಪಾಶಾ, ಮುನ್ನಾ, ಕೃಷ್ಣ ಆನಂದ್‌ ಅವರು ವಾದ್ಯ ನುಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next