Advertisement

ಶಿಕ್ಷಕರ ಸಮಸ್ಯೆ ನಿವಾರಣೆಗೆ ಸರ್ಕಾರ ಬದ್ಧ

03:42 PM Sep 06, 2019 | Naveen |

ಶಿವಮೊಗ್ಗ: ಸಮಾಜವನ್ನು ಸರಿದಾರಿಗೆ ಕೊಂಡೊಯ್ಯುವ ಹಾಗೂ ಮಾರ್ಗದರ್ಶನ ನೀಡುವ ಶಿಕ್ಷಕರ ಎಲ್ಲಾ ಸಮಸ್ಯೆಗಳ ನಿವಾರಿಸಲು ಸರ್ಕಾರ ಬದ್ಧವಾಗಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

Advertisement

ಗುರುವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಶಿಕ್ಷಕರ ದಿನಾಚರಣೆ ಸಮಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕರು ಎದೆಗುಂದುವ ಅಗತ್ಯವಿಲ್ಲ. ಅವರ ಎಲ್ಲಾ ಸಮಸ್ಯೆಗಳನ್ನು ಸಮಾಧಾನಚಿತ್ತದಿಂದ ಆಲಿಸಿ, ಇಲಾಖಾ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿ ನಂತರ ಶಿಕ್ಷಣ ಸಚಿವರೊಂದಿಗೆ ಚರ್ಚಿಸಲು ಯತ್ನಿಸುವುದಾಗಿ ಸಚಿವರು ತಿಳಿಸಿದರು.

ವರ್ಗಾವಣೆಯಲ್ಲಿನ ಸಮಸ್ಯೆಗಳನ್ನು ನಿವಾರಿಸುವಲ್ಲಿ ಹಾಗೂ ವರ್ಗಾವಣೆ ಪ್ರಕ್ರಿಯೆ ಸರಳಗೊಳಿಸುವಲ್ಲಿ ಸರ್ಕಾರದ ವತಿಯಿಂದ ಪ್ರಯತ್ನಗಳು ಪ್ರಗತಿಯಲ್ಲಿವೆ. ರಾಜ್ಯದ ಎಲ್ಲಾ ಶಿಕ್ಷಕರಿಗೂ ಅನುಕೂಲವಾಗುವಂತೆ ವರ್ಗಾವಣೆ ನೀತಿ-ನಿಯಮಗಳನ್ನು ಅನುಷ್ಠಾನಕ್ಕೆ ತರುವ ಅಗತ್ಯವಿದೆ. ಅದಕ್ಕಾಗಿ ತಜ್ಞರ, ಬುದ್ಧಿಜೀವಿಗಳ ಸಲಹೆ-ಸೂಚನೆಗಳನ್ನು ಮುಕ್ತವಾಗಿ ಸ್ವಾಗತಿಸುವುದಾಗಿ ಅವರು ತಿಳಿಸಿದರು.

ಪ್ರಸ್ತುತ ಎದುರಾಗಿರುವ ಶಿಕ್ಷಕರ ವರ್ಗಾವಣೆ ಸಮಸ್ಯೆ ಪ್ರಸಕ್ತ ಸಾಲಿನಲ್ಲಿಯೇ ಪೂರ್ಣಗೊಳ್ಳುವಂತಾಗಬೇಕು. ಮುಂದಿನ ವರ್ಷಗಳಿಂದ ಶಿಕ್ಷಕ ಸ್ನೇಹಿ ವರ್ಗಾವಣೆಗಳು ನಡೆಯುವಂತಾಗಬೇಕು ಎಂದ ಅವರು, ದೇಶದ ಸರ್ವಾಂಗೀಣ ವಿಕಾಸಕ್ಕೆ ನಿವೃತ್ತ ಶಿಕ್ಷಕರ ಸೇವೆ ಸ್ಮರಣೀಯವಾದುದು ಎಂದರು.

Advertisement

ಶಾಸಕ ಆಯನೂರು ಮಂಜುನಾಥ್‌ ಮಾತನಾಡಿ, ಶಿಕ್ಷಕರು ದೇಶಕಟ್ಟುವ ಶಿಲ್ಪಿಗಳು. ಸಮಾಜದ ಬಹುದೊಡ್ಡ ಹಾಗೂ ಪರಿಣಾಮಕಾರಿಯಾದುದು ಶಿಕ್ಷಣ ಕ್ಷೇತ್ರ. ಈ ಕ್ಷೇತ್ರ ಇಂದು ಸಮಸ್ಯೆಗಳ ಆಗರವಾಗಿದೆ. ಇಂದು ಶಿಕ್ಷಕರು ಶಿಕ್ಷಕರಾಗಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಬದಲಾಗಿ ಎಲ್ಲಾ ಕ್ಷೇತ್ರಗಳಲ್ಲೂ ಸೇವೆ ಸಲ್ಲಿಸುವಂತಾಗಿದೆ. ಈ ಎಲ್ಲಾ ವಿಷಯಗಳ ಕುರಿತು, ಅವರ ಅಗತ್ಯಗಳ, ಬೇಕು-ಬೇಡಗಳ ಕುರಿತು ಚರ್ಚಿಸಬೇಕಾದ ತುರ್ತು ಅನಿವಾರ್ಯತೆ ಇದೆ ಎಂದರು.

ಸಮ ಸಮಾಜದ ನಿರ್ಮಾಣದಲ್ಲಿ ಬಹುದೊಡ್ಡ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಸಮಾಜದ ಹಿತದೃಷ್ಟಿಯಿಂದ ಶಿಕ್ಷಕರನ್ನು ತಮ್ಮ ಸೇವೆಗೆ ಮೀಸಲಾಗಿರಿಸಬೇಕಾದುದು ಅಗತ್ಯ ಎಂದ ಅವರು, ಶಿಕ್ಷಕರ ವರ್ಗಾವಣೆ ಮಸೂದೆಯಲ್ಲಿ ಬದಲಾವಣೆಗಳಾಗಬೇಕಾದ ಅಗತ್ಯವಿದೆ ಎಂದರು.

ಇದೇ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯಲ್ಲಿ ಸುದೀರ್ಘ‌ ಅವಧಿಯವರೆಗೆ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ 76 ಶಿಕ್ಷಕರಿಗೆ ಹಾಗೂ ಜಿಲ್ಲಾ ಪ್ರಶಸ್ತಿ ಪಡೆದ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ 21 ಶಿಕ್ಷಕರನ್ನು ಗುರುತಿಸಿ ಗೌರವಿಸಲಾಯಿತು.

ಜಿಪಂ ಅಧ್ಯಕ್ಷೆ ಜ್ಯೋತಿ ಎಸ್‌. ಕುಮಾರ್‌, ಶಾಸಕ ಕೆ.ಬಿ. ಅಶೋಕ ನಾಯ್ಕ, ಉಪಮಹಾಪೌರ ಚನ್ನಬಸಪ್ಪ, ತಾಪಂ ಅಧ್ಯಕ್ಷೆ ಗೀತಾ ಜಯಶೇಖರ್‌, ಜಿಪಂ ಉಪಾಧ್ಯಕ್ಷೆ ವೇದಾ ವಿಜಯಕುಮಾರ್‌, ಜಿಪಂ ಸದಸ್ಯ ವೀರಭದ್ರಪ್ಪ ಪೂಜಾರಿ, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌, ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಂ.ಎಲ್. ವೈಶಾಲಿ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌. ಷಡಾಕ್ಷರಿ, ಅಪರ ಜಿಲ್ಲಾಧಿಕಾರಿ ಡಾ| ನಾಗೇಂದ್ರ ಎಫ್‌. ಹೊನ್ನಳ್ಳಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಸುಮಂಗಳ ಪಿ. ಕುಚಿನಾಡ, ಉಪನಿರ್ದೇಶಕ ವೀರಭದ್ರಪ್ಪ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶಪ್ಪ ಕೆ.ಬಿ.ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next